ಬೆಳಗಾವಿ (ಡಿ.15) : ಉತ್ತರ ಕರ್ನಾಟಕದ 21 ಸಕ್ಕರೆ ಕಾರ್ಖಾನೆಗಳ ಮೇಲೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಮತ್ತು ಆಯುಕ್ತರ ನೇತೃತ್ವದಲ್ಲಿ ಬುಧವಾರ ದಿಢೀರ್ ದಾಳಿ ನಡೆಸಿ ಕಬ್ಬಿನ ತೂಕದ ಕುರಿತು ಬುಧವಾರ ಪರಿಶೀಲನೆ ನಡೆಸಲಾಯಿತು. ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಳುಹಿಸುವ ಕಬ್ಬಿನ ತೂಕ ನಿಗದಿಯಲ್ಲಿ ಕಾರ್ಖಾನೆಗಳಿಂದ ಮೋಸ ನಡೆಯುತ್ತಿದೆ ಎಂಬ ಆರೋಪದ ಮೇರೆಗೆ ಈ ದಾಳಿ ನಡೆಸಲಾಗಿದೆ.
ತಾವು ಕಟಾವು ಮಾಡಿ ಕಳುಹಿಸುವ ಕಬ್ಬಿನ ತೂಕ ನಿಗದಿ ಮಾಡುವಲ್ಲಿ ಕಾರ್ಖಾನೆಗಳಿಂದ ಭಾರೀ ವಂಚನೆ ನಡೆಯುತ್ತಿದೆ ಎಂದು ರೈತರಿಂದ ರಾಜ್ಯಾದ್ಯಂತ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಉತ್ತರ ಕನ್ನಡ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳ ಮೇಲೆ ಸಕ್ಕರೆ ಸಚಿವ ಶಂಕರಗೌಡ ಪಾಟೀಲ ಮುನೇನಕೊಪ್ಪ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಗೊಳಗಾದ ಕಾರ್ಖಾನೆಗಳಲ್ಲಿ ಬಹುತೇಕವು ರಾಜ್ಯದ ಪ್ರಭಾವಿ ರಾಜಕಾರಣಿಗಳಿಗೆ ಸೇರಿದ್ದಾಗಿದೆ. ದಾಳಿ ವೇಳೆ ಕೆಲ ಕಾರ್ಖಾನೆಗಳಲ್ಲಿ ಮೇಲ್ನೋಟಕ್ಕೆ ತೂಕದಲ್ಲಿ ವ್ಯತ್ಯಾಸ ಇರುವುದು ಕಂಡುಬಂದಿದೆ ಎನ್ನಲಾಗಿದೆ.
ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿಗೊಳಿಸಿ ರೈತರಿಗೆ ಮೋಸ: ಎಚ್.ಆರ್.ಬಸವರಾಜಪ್ಪ ಆರೋಪ
ಯಾವ್ಯಾವ ಕಾರ್ಖಾನೆಗಳ ಮೇಲೆ ದಾಳಿ:
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುದ ಅರಿಹಂತ ಶುಗರ್ಸ್ ಇಂಡಸ್ಟ್ರೀಸ್, ಅಥಣಿಯ ಅಥಣಿ ಶುಗರ್ಸ್.ಲಿ, ಹುದಲಿಯ ಬೆಳಗಾಂ ಶುಗರ್ಸ್ ಪ್ರೈ.ಲಿ, ಸವದತ್ತಿಯ ಹರ್ಷ ಶುಗರ್ಸ್ ಲಿ., ಖಾನಾಪುರದ ಲೈಲಾ ಶುಗರ್ಸ್, ಶಿರಗುಪ್ಪಿಯ ಶಿರಗುಪ್ಪಿ ಶುಗರ್ ವರ್ಕ್ಸ್ ಲಿ., ಚಿಕ್ಕೋಡಿ ತಾಲೂಕಿನ ಬೇಡ್ಕಿಹಾಳದ ವೆಂಕಟೇಶ್ವರ ಪವರ್ ಪ್ರಾಜೆಕ್ಟ್ ಲಿ., ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್ ಇಂಡಸ್ಟ್ರೀಸ್, ಬಾಗಲಕೋಟೆ ಜಿಲ್ಲೆಯ ಬೀಳಗಿಯ ಬೀಳಗಿ ಶುಗರ್ಸ್ ಮಿಲ್, ಜೆಮ್ ಶುಗರ್ಸ್, ಮುಧೋಳ ನಿರಾಣಿ ಶುಗರ್ಸ್ ಲಿ., ಪ್ರಭುಲಿಂಗೇಶ್ವರ ಶುಗರ್ಸ್ ಲಿ., ಬೀದರ್ ಜಿಲ್ಲೆಯ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ, ಮಹಾತ್ಮಾಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ, ಕಲಬುರ್ಗಿ ಜಿಲ್ಲೆಯ ರೇಣುಕಾ ಶುಗರ್ಸ್, ಎನ್‌ಎಸ್‌ಎಲ್ ಶುಗರ್ಸ್, ವಿಜಯಪುರ ಜಿಲ್ಲೆಯ ಇಂಡಿಯನ್ ಶುಗರ್ಸ್, ಜಮಖಂಡಿ ಶುಗಸ್, (ಘಟಕ-2), ಕೆಪಿಆರ್ ಶುಗರ್ಸ್, ಶ್ರೀ ಬಸವೇಶ್ವರ ಶುಗರ್ಸ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಇಐಡಿ ಪ್ಯಾರಿ ದಾಳಿಗೊಳಗಾದ ಸಕ್ಕರೆ ಕಾರ್ಖಾನೆಗಳು.