
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ನ.3): ರೈತರ ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವ ವಿಚಾರ ವಿಜಯಪುರ ಜಿಲ್ಲೆಯಲ್ಲಿ ಕಗ್ಗಂಟಾಗಿದೆ. ಮೊನ್ನೆಯಷ್ಟೆ ಮುದ್ದೇಬಿಹಾಳ ತಾಲೂಕಿನ ಯರಗಲ್-ಮದರಿ ಬಳಿಯ ಬಾಲಾಜಿ ಶುಗರ್ಸ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಗಲಾಟೆ ನಡೆದಿತ್ತು. ಕೂದಲೆಳೆ ಅಂತರಲ್ಲಿ ಪ್ರತಿಭಟನೆಗೆ ಇಳಿದಿದ್ದ ರೈತರ ಜೀವ ಉಳಿದಿತ್ತು. ದೊಡ್ಡದಾದ ಪ್ರಮಾದ ತಪ್ಪಿತ್ತು. ಆದರೀಗ ಕಾರಜೋಳ ಬಸವೇಶ್ವರ ಶುಗರ್ಸ್ ವಿರುದ್ಧವು ರೈತರ ಅಸಮಾಧಾನ ಕೇಳಿ ಬರ್ತಿದೆ. ಪ್ರಸಕ್ತ ಹಂಗಾಮುವಿಗೆ ಕಬ್ಬಿನ ದರ ನಿಗದಿಪಡಿಸುವ ಸಂಬಂಧ ತಹಶಿಲ್ದಾರ ಪಿ.ಜಿ.ಪವಾರ ಅಧ್ಯಕ್ಷತೆಯಲ್ಲಿ ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ಕಾರಜೋಳದ ಬಸವೇಶ್ವರ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಕಬ್ಬು ಬೆಳೆಗಾರರ ಬೇಡಿಕೆಯಂತೆ ದರ ಘೋಷಿಸಲು ಸ್ಪಷ್ಟ ನಿಲುವು ಪ್ರಕಟಿಸದ ಕಾರಣ ಸದ್ಯ ಕಟಾವಾಗಿ ಕಾರ್ಖಾನೆ ಆವರಣದಲ್ಲಿ ನಿಂತಿರುವ ಕಬ್ಬನ್ನು ನುರಿಸಿ ಮುಂದೆ ಕಾರ್ಖಾನೆಯವರು ಕಬ್ಬಿನ ದರ ನಿಗದಿಪಡಿಸಿ ಘೋಷಿಸುವವರೆಗೂ ಕಬ್ಬು ನುರಿಸುವಿಕೆಯನ್ನು ಬಂದ್ ಮಾಡಬೇಕೆಂದು ಸಭೆಯಲ್ಲಿ ಕಬ್ಬು ಬೆಳಗಾರರು ಆಗ್ರಹಿಸಿದರು.
ರೈತರ ಬೇಡಿಕೆ ಏನು?
ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳಗಾರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸೋಮು ಬಿರಾದಾರ ಹಾಗೂ ರೈತ ಮುಖಂಡ ನಂದಬಸಪ್ಪ ಚೌದ್ರಿ ಅವರು ಮಾತನಾಡಿ, ಮುಧೋಳ ಭಾಗದ ಸಕ್ಕರೆ ಕಾರ್ಖಾನೆಗಳು ನೀಡುವ ದರದಂತೆ ಬಸವೇಶ್ವರ ಸಕ್ಕರೆ ಕಾರ್ಖಾನೆಯವರು ಪ್ರತಿ ವರ್ಷ ರೈತರಿಗೆ ಕಬ್ಬಿನ ದರ ನೀಡುತ್ತಾ ಬಂದಿದ್ದು, ಈ ವರ್ಷವೂ ಮುಧೋಳ ಭಾಗದ ರೈತರು ನಿರ್ಧರಿಸುವ ದರದಂತೆ ಬಸವೇಶ್ವರ ಕಾರ್ಖಾನೆಯವರು ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಬಸವೇಶ್ವರ ಶುಗರ್ಸ್ ಆಡಳಿತ ಮಂಡಳಿ ಮಾತೇನು..!?
ಇದಕ್ಕೆ ಸಭೆಯಲ್ಲಿ ಹಾಜರಿದ್ದ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಸ್.ಸಿ.ಪಾಟೀಲ್ ಹಾಗೂ ಕೇನ್ ಮ್ಯಾನೇಜರ್ ರಾಜು ಬಿರಾದಾರ ಪ್ರತಿಕ್ರಿಯಿಸಿ ಈಗಾಗಲೇ ಸರ್ಕಾರ ಆದೇಶಿಸಿರುವ ಎಫ್.ಆರ್.ಪಿ ದರದಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿನ ದರ ನೀಡುತ್ತಿವೆ. ಕಳೆದ ವರ್ಷ ಜಿಲ್ಲೆಯಲ್ಲಿ ಎಲ್ಲರಿಗಿಂತ ಮೊದಲು ಪ್ರತಿ ಟನ್ ಕಬ್ಬಿಗೆ 2,700 ದರ ಘೋಷಿಸಲಾಗಿತ್ತು. ಎರಡ್ಮೂರು ದಿನಗಳಲ್ಲಿ ಬಾಗಲಕೋಟೆಯಲ್ಲಿ ಸಭೆ ಜರುಗಲಿದ್ದು, ಸಭೆಯಾದ ನಂತರ ಕಾರ್ಖಾನೆ ಚೇರ್ಮನ್ ಅವರೊಂದಿಗೆ ಚರ್ಚಿಸಿ ದರ ನಿಗದಿಪಡಿಸಲಾಗುವುದು ಎಂದರು.
37ನೇ ದಿನಕ್ಕೆ ಕಾಲಿಟ್ಟ ಕಬ್ಬುಬೆಳೆಗಾರರ ಹೋರಾಟ; ಬೇಡಿಕೆಗೆ ಸ್ಪಂದಿಸದ ಸರ್ಕಾರ
ಸಭೆಯಲ್ಲಿ ಕಬ್ಬು ಬೆಳಗಾರರಅಸಮಾಧಾನ..!
ಇದಕ್ಕೆ ಹಲವು ಕಬ್ಬು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿ ಕಬ್ಬಿನ ದರ ನಿಗದಿಪಡಿಸಿದ ನಂತರವೇ ಕಾರ್ಖಾನೆಯವರು ಕಬ್ಬು ನುರಿಸುವಿಕೆ ಪ್ರಾರಂಭಿಸಬೇಕು. ಹಾಗಾಗಿ ಸದ್ಯ ಕಾರ್ಖಾನೆ ಆವರಣದಲ್ಲಿ ಕಟಾವಾಗಿ ನಿಂತಿರುವ ಕಬ್ಬನ್ನು ನುರಿಸಿ ಮುಂದೆ ದರ ನಿಗದಿಪಡಿಸಿ ಘೋಷಿಸುವವರೆಗೂ ಕಾರ್ಖಾನೆ ಕಬ್ಬು ನುರಿಸುವಿಕೆ ಸ್ಥಗಿತಗೊಳಿಸಬೇಕೆಂದು ಸಭೆಯಲ್ಲಿ ಆಗ್ರಹಿಸಿದರು.
ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಕಬ್ಬಿನ ಲಾರಿಗೆ ಕಲ್ಲು ತೂರಾಟ
ಸಭೆಯಲ್ಲಿ ರೈತರ ಪರ ನಿಂತ ತಹಶೀಲ್ದಾರ್..!
ಇದಕ್ಕೆ ತಹಶೀಲ್ದಾರ ಪಿ.ಜಿ.ಪವಾರ ಮಾತನಾಡಿ, ರೈತರ ಒತ್ತಾಯದಂತೆ ದರ ಘೋಷಣೆಯಾಗುವವರೆಗೂ ಕಬ್ಬು ನುರಿಸುವಿಕೆ ಬಂದ್ ಮಾಡಿ, ಚೇರ್ಮನ್ ಅವರಿಗೆ ತಿಳಿಸುವಂತೆ ಕಾರ್ಖಾನೆ ಅಧಿಕಾರಿಗಳಿಗೆ ತಿಳಿಸಿದರು. ಈ ವೇಳೆ ರೈತ ಮುಖಂಡರಾದ ಶಶಿಕಾಂತ್ ಬಿರಾದಾರ, ಬಸು ನ್ಯಾಮಗೌಡ, ಮಲ್ಲಿಕಾರ್ಜುನ ರೆಡ್ಡೇರ್, ಕಲ್ಲಪ್ಪ ಗಿಡ್ಡಪ್ಪಗೋಳ, ಮಲ್ಲು ಪೂಜಾರಿ, ರಾಜು ಚಲವಾದಿ ಸೇರಿದಂತೆ ಹಲವರಿದ್ದರು.