ಕೇವಲ ಒಂದು ತಿಂಗಳಲ್ಲಿ 29 ಜಾನುವಾರುಗಳ ಸಾವು, ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿಯೂ ಹರಡಿರುವ ಸೋಂಕು, ರೋಗದಿಂದ ಬಳಲುತ್ತಿರುವ 191 ಜಾನುವಾರುಗಳ ಸ್ಥಿತಿ ಚಿಂತಾಜನಕ
ಎಂ.ಅಫ್ರೋಜ್ ಖಾನ್
ರಾಮನಗರ(ನ.03): ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ಅಪಾರ ನಷ್ಟಅನುಭವಿಸುತ್ತಿರುವ ರೈತರು ಇದೀಗ ಜಾನುವಾರುಗಳಿಗೆ ತಗಲಿರುವ ಚರ್ಮಗಂಟು ರೋಗದಿಂದ ಮತ್ತಷ್ಟುಕಂಗಾಲಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಕೇವಲ ಒಂದು ತಿಂಗಳಲ್ಲಿ 29 ಜಾನುವಾರುಗಳು ಈ ರೋಗಕ್ಕೆ ತುತ್ತಾಗಿವೆ. ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ರಾಸುಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೇ ಹರಡುವ ಈ ಚರ್ಮಗಂಟು ರೋಗ ಬಂದೊಡನೆ ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತಿದೆ. ಜೊತೆಗೆ ಆಹಾರ ಸೇವಿಸುವುದನ್ನು ಬಿಟ್ಟು ಏಕಾಏಕಿ ಹಸುಗಳು ಬಡಕಲಾಗುತ್ತಿವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ರೋಗ ಉಲ್ಪಣವಾಗಿ ಸಾವನ್ನಪ್ಪುತ್ತಿವೆ.
ರೋಗ ಹತೋಟಿಗೆ ತರಲು ಸಾವಿರಾರು ರುಪಾಯಿ ಖರ್ಚು ಮಾಡಿದರೂ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಹಸು, ಎತ್ತುಗಳು ಪ್ರತಿನಿತ್ಯ ಸಾವನ್ನಪ್ಪುತ್ತಿವೆ. ಸದ್ಯಕ್ಕೆ ಜಿಲ್ಲೆಯಲ್ಲಿ (ಅಕ್ಟೋಬರ್ 31ರವರೆಗೆ)351 ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದ್ದು, 131 ಜಾನುವಾರುಗಳು ಗುಣಮುಖವಾಗುತ್ತಿವೆ. 191 ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ.
ಕೊರಟಗೆರೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ: ರೈತರಲ್ಲಿ ಆತಂಕ
ತಮಿಳುನಾಡಿನ ಗಡಿಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಂಡು ಬಂದಿದ್ದ ಚರ್ಮ ಗಂಟುರೋಗ ಈಗ ಹತ್ತಾರು ಗ್ರಾಮಗಳಿಗೆ ವ್ಯಾಪಿಸಿದೆ. ರಾಮನಗರ ತಾಲೂಕಿನಲ್ಲಿ 5, ಚನ್ನಪಟ್ಟಣ - 02, ಮಾಗಡಿ - 01 ಹಾಗೂ ಕನಕಪುರ ತಾಲೂಕಿನಲ್ಲಿ 21 ಸೇರಿ 29 ಜಾನುವಾರುಗಳು ಬಲಿಯಾಗಿವೆ. ಇವುಗಳ ಸಂಖ್ಯೆ ಮತ್ತಷ್ಟುಹೆಚ್ಚಾಗುವ ಆತಂಕ ಎದುರಾಗಿದೆ.
ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಸಲುವಾಗಿ ಜಿಲ್ಲಾಡಳಿತ ಒಂದು ತಿಂಗಳ ಕಾಲ ಜಾತ್ರೆ, ಧನಗಳ ಸಂತೆ ಮತ್ತು ಜಾನುವಾರಗಳ ಸಾಗಾಣಿಕೆಯನ್ನು ನಿಷೇಧ ಮಾಡಿದ್ದರೂ ಸಹ ರೋಗ ಹರಡುವಿಕೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿಲ್ಲ. ಜಾನುವಾರುಗಳಿಗೆ ತೀವ್ರವಾಗಿ ತಗಲುತ್ತಿರುವ ಗಂಟುರೋಗಕ್ಕೆ ನಿರ್ದಿಷ್ಟವಾಗಿ ಲಸಿಕೆ ಇಲ್ಲದಿರುವುದು ಪಶು ವೈದ್ಯಾಧಿಕಾರಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರ ಈ ಕುರಿತು ಕೂಡಲೇ ಲಸಿಕೆ ಬಿಡುಗಡೆಗೊಳಿಸಿ ನಮ್ಮ ಸಂಕಷ್ಟವನ್ನು ದೂರ ಮಾಡಬೇಕು ಎನ್ನುತ್ತಿದ್ದಾರೆ ರೈತರು.
ಸಾಮೂಹಿಕವಾಗಿ ಲಸಿಕೆ ವಿತರಣೆ :
ಜಿಲ್ಲೆಯಲ್ಲಿ ಸರಿಸುಮಾರು 2,87,502 ಜಾನುವಾರುಗಳಿದ್ದು, ಇಲ್ಲಿವರೆಗೆ 51,477 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಪಶು ಪಾಲನಾ ಇಲಾಖೆಯಿಂದ 50 ಸಾವಿರ, ಕೆಎಂಎಫ್ ನಿಂದ 19,229 ಸೇರಿ ಒಟ್ಟು 69,229 ಲಸಿಕೆ ಪೂರೈಕೆಯಾಗಿದ್ದು, ಹೆಚ್ಚಿನ ಲಸಿಕೆಗಾಗಿ ಬೇಡಿಕೆ ಸಲ್ಲಿಸಲಾಗಿದೆ.
ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ರೋಗ ಕಂಡು ಬಂದ ಗ್ರಾಮದ ಸುತ್ತ ಮುತ್ತಲ 5 ಕಿಲೋಮೀಟರ್ ವ್ಯಾಪ್ತಿಯ ಹಸುಗಳಿಗೆ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸವೂ ಆರಂಭವಾಗಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಆಂಜನಪ್ಪ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಯಾವ್ಯಾವ ಹಳ್ಳಿಗಳಲ್ಲಿ ರೋಗ ಉಲ್ಬಣ:
ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಕನಕಪುರ ತಾಲೂಕಿನಲ್ಲಿ 147 ಹಾಗೂ ಅತಿ ಕಡಿಮೆ ಮಾಗಡಿ ತಾಲೂಕಿನಲ್ಲಿ 48 ಜಾನುವಾರುಗಳು ರೋಗಕ್ಕೆ ತುತ್ತಾಗಿವೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 83, ಚನ್ನಪಟ್ಟಣ ತಾಲೂಕಿನಲ್ಲಿ 73 ಜಾನುವಾರುಗಳಿಗೆ ರೋಗ ತಗುಲಿದೆ.
ಬಿಡಾಡಿ ದನಗಳಿಗೂ ಒಕ್ಕರಿಸಿದ ಚರ್ಮಗಂಟು ರೋಗ, ಆತಂಕ
ರಾಮನಗರ ತಾಲೂಕಿನ ಲಕ್ಷ್ಮೀಪುರ, ಲಕ್ಕನದೊಡ್ಡಿ, ಚನ್ನಾಪುರದೊಡ್ಡಿ, ಬಸವನಪುರ, ಪಾಲಭೋವಿದೊಡ್ಡಿ, ಮಾಯಗಾನಹಳ್ಳಿ, ಕೆಂಪೇಗೌಡನದೊಡ್ಡಿ, ಅಂಕನಹಳ್ಳಿ, ಮುತ್ತುರಾಯನಗುಡಿಪಾಳ್ಯ, ಕಗ್ಗಲಹಳ್ಳಿ, ವಿಭೂತಿಕೆರೆ, ಕಾಡನಕುಪ್ಪೆ , ಸುಗ್ಗನಹಳ್ಳಿ, ಗಾಣಕಲ್ಲು , ಹಳ್ಳಿಮಾಳ, ಅಣ್ಣಹಳ್ಳಿ, ವಾಜರಹಳ್ಳಿ, ಕೆಂಚನಕುಪ್ಪೆ, ಗಿರಿನಗರ, ಕಲ್ಲುಗೋಪಹಳ್ಳಿ, ಬಿ.ಬನ್ನಿಕುಪ್ಪೆ ಗ್ರಾಮಗಳ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ.
ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ, ವಡ್ಡರಹಳ್ಳಿ, ಕೊಂಡಾಪುರ, ಬಾಣಂತಹಳ್ಳಿ, ಮಾಕಳಿ, ಗೊಲ್ಲರದೊಡ್ಡಿ, ರಾಂಪುರ, ಕನ್ನಮಂಗಲ, ದಶವಾರ, ಮಂಗಾಡಹಳ್ಳಿ, ಬಲ್ಲಾಪಟ್ಟಣ, ಎಚ್.ಮೊಗೇನಹಳ್ಳಿ, ತೌಟನಹಳ್ಳಿ, ನಾಗವಾರ, ಆಣಿಗೆರೆ, ದೇವರಹಳ್ಳಿ, ಮುದಗೆರೆ ಗ್ರಾಮಗಳಲ್ಲಿ ರೋಗ ಹರಡಿದೆ.