ಬೆಂಗಳೂರು: ಧರಣಿ ವೇಳೆ ಕಬ್ಬು ಬೆಳೆಗಾರನಿಂದ ಆತ್ಮಹತ್ಯೆ ಬೆದರಿಕೆ ಪ್ರಹಸನ

By Kannadaprabha NewsFirst Published Nov 26, 2022, 8:15 AM IST
Highlights

ಕಬ್ಬಿನ ಖರೀದಿ ದರ ಏರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ 

ಬೆಂಗಳೂರು(ನ.26):  ಕಬ್ಬಿನ ಖರೀದಿ ದರ ಏರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಶುಕ್ರವಾರಕ್ಕೆ 4 ದಿನ ಪೂರೈಸಿದ್ದು, ಸರ್ಕಾರ ತಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಧರಣಿ ನಿರತ ರೈತರೊಬ್ಬರು ಮರವೇರಿ ಆತ್ಮಹತ್ಯೆಯ ಬೆದರಿಕೆ ಒಡ್ಡಿದ ಪ್ರಹಸನವೂ ನಡೆಯಿತು.

ಆತ್ಮಹತ್ಯೆಯ ಹೈಡ್ರಾಮಾ:

ಆದರೆ ಕಬ್ಬು ಖರೀದಿ ದರ ಏರಿಕೆ ಬಗ್ಗೆ ಗುರುವಾರ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿದರೂ ಯಾವುದೇ ತೀರ್ಮಾನ ಪ್ರಕಟಿಸದೆ ವಿಳಂಬ ಮಾಡುತ್ತಿದೆ. ಧರಣಿ ನಿರತ ರೈತರ ಬೇಡಿಕೆಗೆ ಸೂಕ್ತ ಮನ್ನಣೆ ನೀಡುತ್ತಿಲ್ಲ ಎಂದು ಚಾಮರಾಜನಗರ ಜಿಲ್ಲೆಯ ಉಡಿಗಾಲ ಗ್ರಾಮದ ರೈತ ರೇವಣ್ಣ ಎಂಬುವರು ಮಹಾರಾಣಿ ಕಾಲೇಜಿನ ಆವರಣದಲ್ಲಿನ ದೊಡ್ಡ ಮರವೊಂದನ್ನು ಏರಿ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತ ಕುಳಿತರು. ಅಷ್ಟೇ ಅಲ್ಲದೇ ಸರ್ಕಾರದ ಪ್ರತಿನಿಧಿಗಳು ಮಾತುಕತೆಗೆ ಬಾರದಿದ್ದರೆ ಆತ್ಮಹತ್ಯೆ ನಡೆಸುವುದಾಗಿ ಬೆದರಿಕೆ ಒಡ್ಡಿದ್ದರು. ಪೊಲೀಸರ ಮನವಿಗೂ ಸ್ಪಂದಿಸಲಿಲ್ಲ. ಧರಣಿ ನಿರತ ರೈತರ ಮನವೊಲಿಸುವ ಪ್ರಯತ್ನವು ಕೈಗೂಡಲಿಲ್ಲ. ಸುಮಾರು 45 ನಿಮಿಷಗಳ ಹೈಡ್ರಾಮದ ನಂತರ ಕುರುಬೂರು ಶಾಂತಕುಮಾರ್‌ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ ರೈತನನ್ನು ಮರದಿಂದ ಇಳಿಯುವಂತೆ ಸೂಚಿಸಿದರು. ಆ ಬಳಿಕ ರೇವಣ್ಣ ಮರದಿಂದ ಇಳಿದ.

ಹೊಂಡಾ ಗುಂಡಿ ರಸ್ತೆಯಲ್ಲೇ ಹೆರಿಗೆ: ಅಭಿವೃದ್ಧಿ ಹೊಂದಿದ ಉಡುಪಿಯಲ್ಲಿ ಇದೆಂಥಾ ಅವ್ಯವಸ್ಥೆ?

ಇದಾದ ನಂತರ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಶಾಂತ್‌ ಕುಮಾರ್‌ ಸಾಗುವಳಿ ಪತ್ರವನ್ನು ರೈತರಿಗೆ ನೀಡಬೇಕು ಎಂಬ ಹೋರಾಟಗಾರರ ಮನವಿಯನ್ನು ಸ್ವೀಕರಿಸಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಿಂದ ಕೋವಿಡ್‌ ನೆಪವೊಡ್ಡಿ ಕಬ್ಬು ಖರೀದಿ ದರ ನಿಗದಿ ಮಾಡಿರಲಿಲ್ಲ. ಆದರೆ ಈಗ ಪ್ರತಿ ಟನ್‌ಗೆ ಕೇವಲ 50 ರು. ದರ ಹೆಚ್ಚಿಸಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಸಗೊಬ್ಬರ, ಡೀಸೆಲ್‌, ಕ್ರಿಮಿನಾಶಕ, ಕೀಟ ನಾಶಕ ದರ ಹೆಚ್ಚಳವಾಗಿದೆ. ಕಾರ್ಮಿಕರ ವೆಚ್ಚ ಅಧಿಕವಾಗಿದೆ. ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿದೆ. ಆದರೂ ಪ್ರತಿ ಟನ್‌ಗೆ ಕನಿಷ್ಠ ಪ್ರಮಾಣದಲ್ಲಿ ದರ ಏರಿಸಲಾಗಿದೆ. ಹಾಗೆಯೇ ರಾಜ್ಯ ಸರ್ಕಾರವು ಕಬ್ಬಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಳೆದ ಐದು ವರ್ಷಗಳಿಂದ ಪರಿಷ್ಕರಿಸಿಲ್ಲ. ಇದನ್ನು ಸರಿಪಡಿಸುವಂತೆ ಕಳೆದ ನಾಲ್ಕು ತಿಂಗಳಿನಿಂದ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೂ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಕಬ್ಬು ಬೆಳೆಗಾರರು ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಫ್ರಿಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
 

click me!