ಬಳ್ಳಾರಿ: ಮಾಜಿ ಸಂಸದ ಕೋಳೂರು ಬಸವನಗೌಡ ನಿಧನ

By Kannadaprabha News  |  First Published Nov 26, 2022, 7:58 AM IST

ಕಳೆದ ಹಲವು ತಿಂಗಳಿನಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೋಳೂರು ಬಸವನಗೌಡ 


ಬಳ್ಳಾರಿ(ನ.26):  ಲೋಕಸಭೆಯ ಮಾಜಿ ಸದಸ್ಯ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ ಕೋಳೂರು ಬಸವನಗೌಡ (90) ನಗರದ ತಮ್ಮ ನಿವಾಸದಲ್ಲಿ ನಿನ್ನೆ(ಶುಕ್ರವಾರ) ನಿಧನರಾದರು. ಕಳೆದ ಹಲವು ತಿಂಗಳಿನಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗ ಇದ್ದಾರೆ. ಇಂದು(ಶನಿವಾರ) ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ವೀರಶೈವ ವಿದ್ಯಾವರ್ಧಕ ಸಂಘದ ಶೆಟ್ರ ಗುರುಶಾಂತಪ್ಪ ಪ್ರೌಢಶಾಲೆಯಲ್ಲಿ ಗುಮಾಸ್ತರಾಗಿ ಸೇವೆ ಆರಂಭಿಸಿದ ಕೋಳೂರು ಬಸವನಗೌಡರು ಬಳಿಕ ಇದೇ ಶಾಲೆಯ ಶಿಕ್ಷಕರಾದರು. ನಂತರದಲ್ಲಿ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜಿನ ರಿಜಿಸ್ಟ್ರಾರ್‌ ಆಗಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿ ರಾಜ್ಯಪಾಲರಿಂದ ನೇರವಾಗಿ ನೇಮಕಗೊಂಡಿದ್ದರು. ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಸಮುದಾಯವನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

Tap to resize

Latest Videos

undefined

ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ವಿಧಿವಶ

ರಾಜಕೀಯ ಪ್ರವೇಶ:

ವೀರಶೈವ ಲಿಂಗಾಯತ ಸಮಾಜದ ಪ್ರಮುಖರಾಗಿ ಗುರುತಿಸಿಕೊಂಡಿದ್ದ ಕೋಳೂರು ಬಸವನಗೌಡ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಒದಗಿ ಬಂತು. ಸೋನಿಯಾ ಗಾಂಧಿ-ಸುಷ್ಮಾಸ್ವರಾಜ್‌ ಅವರ ನಡುವಿನ ಸ್ಪರ್ಧೆಯಿಂದಾಗಿ ರಾಷ್ಟ್ರದ ಗಮನ ಸೆಳೆದ 1999ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಗೆಲುವು ಪಡೆದು, ನಂತರ ಈ ಕ್ಷೇತ್ರಕ್ಕೆ ರಾಜಿನಾಮೆ ನೀಡಿದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಕೋಳೂರು ಬಸವನಗೌಡ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸುಲಭವಾಗಿ ಜಯ ಸಾಧಿಸಿದರು. ಕಾಲ ಕ್ರಮೇಣ ಕಾಂಗ್ರೆಸ್‌ನಲ್ಲಿ ತಮ್ಮನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದರಿತ ಗೌಡರು ಪಕ್ಷದಿಂದ ಅಂತರ ಕಾಯ್ದುಕೊಂಡರಲ್ಲದೆ, ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.

ಶ್ರದ್ಧಾಂಜಲಿ:

ಬಸವನಗೌಡರ ನಿಧನಕ್ಕೆ ಮಾಜಿ ಸಂಸದ ಹಾಗೂ ಬಸವನಗೌಡರ ಆತ್ಮೀಯ ಗೆಳೆಯ ಕೆ.ಸಿ.ಕೊಂಡಯ್ಯ, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ನಾಗೇಂದ್ರ, ವೀವಿ ಸಂಘದ ಅಧ್ಯಕ್ಷ ಗುರುಸಿದ್ಧಸ್ವಾಮಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಂಗಾರಪೇಟೆ: ಕೋಟಿ ಸಲ ರಾಮನಾಮ ಬರೆದಿದ್ದ ಮುಸ್ಲಿಂ ವ್ಯಕ್ತಿ ಪಾಚಾಸಾಭಿ ನಿಧನ

ಗೌಡರ ನಿಧನ ಹಿನ್ನೆಲೆಯಲ್ಲಿ ವೀವಿ ಸಂಘದ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಶ್ರದ್ಧಾಂಜಲಿ ಸಭೆ ಜರುಗಿತು. ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ, ಸಂಘದ ಕಾರ್ಯದರ್ಶಿ ಬಿ.ವಿ.ಬಸವರಾಜ್‌ ಹಾಗೂ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಂ. ಮಹೇಶ್ವರಸ್ವಾಮಿ ಪಾಲ್ಗೊಂಡು ಕೋಳೂರು ಬಸವನಗೌಡರು ಸಂಘದ ಪ್ರಗತಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಸಂಘದ ಉಪಾಧ್ಯಕ್ಷ ಅಲ್ಲಂ ಚೆನ್ನಪ್ಪ, ಖಜಾಂಚಿ ಗೋನಾಳ ರಾಜಶೇಖರಗೌಡ, ಸಹ ಕಾರ್ಯದರ್ಶಿ ದರೂರು ಶಾಂತನಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಕ್ಯಾತ್ಯಾಯಿನಿ ಮರಿದೇವಯ್ಯ, ಹಾವಿನಾಳ್‌ ಶರಣಪ್ಪ, ಗಿರಿಜಮ್ಮ ಮತ್ತಿತರರಿದ್ದರು.
 

click me!