ಕಬ್ಬು ಸಮಸ್ಯೆ ಸಂಬಂಧ ನ.21 ರಂದು ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರು, ಸಕ್ಕರೆ ಸಚಿವರ ಸಭೆಯನ್ನು ಕರೆದು ಚರ್ಚಿಸಿ, ರೈತರ ರಕ್ಷಣಾತ್ಮಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಮುಖಂಡರಿಗೆ ಭರವಸೆ ನೀಡಿದರು.
ಮೈಸೂರು : ಕಬ್ಬು ಸಮಸ್ಯೆ ಸಂಬಂಧ ನ.21 ರಂದು ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರು, ಸಕ್ಕರೆ ಸಚಿವರ ಸಭೆಯನ್ನು ಕರೆದು ಚರ್ಚಿಸಿ, ರೈತರ ರಕ್ಷಣಾತ್ಮಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಮುಖಂಡರಿಗೆ ಭರವಸೆ ನೀಡಿದರು.
ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಶನಿವಾರ ರೈತ ಮುಖಂಡರೊಂದಿಗೆ ಸಭೆ ನಡೆಸಿದರು.
undefined
ಈ ವೇಳೆ ಜಿಲ್ಲೆಯಾದ್ಯಂತ ರೈತ ಮುಖಂಡರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ. ನಾವು ಏಕಾಏಕಿ ಹೋರಾಟ ಮಾಡುತ್ತಿಲ್ಲ. ತಮಗೆ ಹಾಗೂ ಜಿಲ್ಲಾಡಳಿತಕ್ಕೆ 10 ದಿನಗಳ ಮುಂಚೆಯೇ ಪತ್ರವನ್ನು ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬರದ ಕಾರಣ ನಾವು ಹೋರಾಟ ಮಾಡಿದ್ದೇವೆ. ಇದನ್ನು ಪೊಲೀಸರು ಅರ್ಥ ಮಾಡಿಕೊಳ್ಳದೆ ರೈತ ಮುಖಂಡರ ಜೊತೆ ಸಮಾಲೋಚನೆ ಮಾಡದೆ ಏಕಾಏಕಿ ಬಂಧಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಅಂತಹ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಬೇಕು. ಮುಂದೆ ಈ ರೀತಿಯ ನಡವಳಿಕೆಗೆ ಅವಕಾಶ ಕೊಡಬಾರದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ರಾಜ್ಯದಲ್ಲಿ ಕಬ್ಬು ಬೆಳೆ ಕಳೆದ ವರ್ಷಕ್ಕಿಂತ ಶೇ.50 ರಷ್ಟು ಕಡಿಮೆ ಇದ್ದು, ಬೇರೆ ಜಿಲ್ಲೆಗಳ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬಿನ ಹೆಚ್ಚುವರಿ ದರ ನೀಡುತ್ತಿದ್ದಾರೆ. ನಿಮ್ಮ ಕ್ಷೇತ್ರದ ಬಣ್ಣಾರಿ ಕಾರ್ಖಾನೆಯಲ್ಲಿ ಅತಿ ಕಡಿಮೆ ನೀಡುತ್ತಿದ್ದಾರೆ. 4 ತಿಂಗಳಿಂದ ನಾಲ್ಕು ಸಭೆ ನಡೆದರು ರೈತರಿಗೆ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.
ಕಳೆದ ವರ್ಷದ 150 ರೂ. ಕಬ್ಬಿನ ಬಾಕಿ ಹಣ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹೆಚ್ಚುವರಿ 150 ರೂ ಆದೇಶದ ಬಗ್ಗೆ ನ್ಯಾಯಾಲಯದಲ್ಲಿ ನಿಮ್ಮ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟು, ನಾವು ಸರ್ಕಾರ ಇತ್ಯರ್ಥ ಪಡಿಸುತ್ತೇವೆ ಎಂದು ಕೇಸ್ ವಾಪಸ್ ಪಡೆದಿದೆ. ಬಣ್ಣಾರಿ ಅಮ್ಮನ್ ಕಾರ್ಖಾನೆಯವರು ಬಾಕಿ ಹಣ ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ 25000 ರೈತರು ಈ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಅವರ ಹಿತಾಶಕ್ತಿ ಯಾಕೆ ಕಾಪಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ರೈತರು ಬರಗಾಲ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಹಣ ಕೊಡಿಸಿದರೆ ತುಂಬಾ ಅನುಕೂಲವಾಗುತ್ತದೆ. ಕಾರ್ಖಾನೆ ಕೇವಲ ಇನ್ನೂ 2 ತಿಂಗಳು ಮಾತ್ರ ಇರುತ್ತದೆ. ಆದ್ದರಿಂದ ತಕ್ಷಣ ತಾವು ಸಭೆ ಮಾಡಿ ಹಣ ಕೊಡಿಸಬೇಕು. ಅಡ್ವಕೇಟ್ ಜನರಲ್ ನ್ಯಾಯಲಯದಲ್ಲಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿಯದ ಸಮರ್ಥ ವಾದ ಮಂಡಿಸದೆ ಇದ್ದ ಕಾರಣ ರಾಜ್ಯದ ಸುಮಾರು 40 ಲಕ್ಷ ಕಬ್ಬು ಬೆಳೆಗಾರರಿಗೆ 950 ಕೋಟಿಗೂ ಹೆಚ್ಚು ಮೋಸವಾಗುತ್ತಿದೆ. ಹೀಗಾಗಿ, ಕೂಡಲೇ ಕಳೆದ ವರ್ಷ ಆದೇಶ ಮಾಡಿರುವ 150 ರೂ. ಕೊಡಿಸಬೇಕು. ರಾಜ್ಯದಲ್ಲಿ ಬೇರೆ ಬೇರೆ ಕಾರ್ಖಾನೆಯವರು ಎಫ್.ಆರ್.ಪಿ ಗಿಂತ 150 ರಿಂದ 200 ರೂ. ಹೆಚ್ಚಿಗೆ ಕೊಡುತ್ತಿದ್ದಾರೆ. ಆದರೆ ಈ ಕಾರ್ಖಾನೆಯವರು ನೀಡುತ್ತಿಲ್ಲ. ಹೀಗಾಗಿ, ಕೂಡಲೇ ತಾವು ಕ್ರಮ ಕೈಗೊಂಡು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ನೀವು ಚುನಾವಣೆಗೆ ಮುಂಚೆ ಹೇಳಿದಂತೆ ನಡೆದುಕೊಳ್ಳಬೇಕು. ಪ್ರತಿ ದಿನ ಹಗಲು ವೇಳೆ 10 ಗಂಟೆ ವಿದ್ಯುತ್ ನೀಡುವಂತೆ ಆದೇಶ ಮಾಡಬೇಕು. ರಾಜ್ಯಾದ್ಯಂತ ಬರಗಾಲ ಎದುರಾಗಿದ್ದು 226 ತಾಲೂಕುಗಳನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದ್ದೀರಿ. ಆದರೆ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಹಾರ ಹಣ ಕೂಡಲೇ ಬಿಡುಗಡೆ ಮಾಡಿ ರೈತರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನ.21 ರಂದು ಬೆಂಗಳೂರಿನಲ್ಲಿ ಕಾರ್ಖಾನೆಯ ಮಾಲೀಕರು, ಸಕ್ಕರೆ ಸಚಿವರ ಸಭೆಯನ್ನು ಕರೆದು ರೈತರ ರಕ್ಷಣಾತ್ಮಕ ನಿರ್ಧಾರ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಹೋರಾಟಗಾರರ ಬಗ್ಗೆ ಪೊಲೀಸರ ವರ್ತನೆ ಸರಿಪಡಿಸಿಕೊಳ್ಳುವಂತೆ ಸೂಚಿಸುತ್ತೇನೆ ಎಂದರು.
ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಚುಂಚರಾಯನಹುಂಡಿ ಸಿದ್ದರಾಮಯ್ಯ ಮೊದಲಾದವರು ಇದ್ದರು.