ಧಾರವಾಡ: ಕಬ್ಬಿನ ಗದ್ದೆಗಳೇ ಚಿರತೆಗೆ ಆಶ್ರಯ ತಾಣ..!

By Kannadaprabha News  |  First Published Sep 24, 2021, 3:21 PM IST

* ಕವಲಗೇರಿ ಕಬ್ಬಿನ ಗದ್ದೆಗಳನ್ನೇ ಆಶ್ರಯ ತಾಣ ಮಾಡಿಕೊಂಡ ಚಿರತೆ
* ಡ್ರೋಣ್‌ ಬಿಟ್ಟು ಬೋನ್‌ ಇಟ್ಟರೂ ಪತ್ತೆಯಾಗದ ಚಿರತೆ
* ಚಿರತೆ ಸ್ಕ್ಯಾಟ್‌ ಹೈದ್ರಾಬಾದ್‌ಗೆ ರವಾನೆ
 


ಧಾರವಾಡ(ಸೆ.24): ಬಂದೂಕು ಹಿಡಿದು ಕಬ್ಬಿನ ಗದ್ದೆಯೊಳಗೆ ತಡಕಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ. ಚಿರತೆಯ(Leopard) ಹೆಜ್ಜೆ ಗುರುತಿನ ಆಧಾರದ ಮೇಲೆ ಸಿಬ್ಬಂದಿಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯ ಅಧಿಕಾರಿಗಳು. ಬೋನ್‌ ಹೊತ್ತುಕೊಂಡು ಗಸ್ತು ತಿರುಗುತ್ತಿರುವ ವಾಹನ. ಚಿರತೆ ಪತ್ತೆಗಾಗಿ ಆಕಾಶದಲ್ಲಿ ಹಾರಾಡುತ್ತಿರುವ ಡ್ರೋಣ್‌! ಇದು ಧಾರವಾಡ(Dharwad) ತಾಲೂಕಿನ ಕವಲಗೇರಿ ಗ್ರಾಮದ ಸುತ್ತಮುತ್ತ ಗುರುವಾರ ಕಂಡುಬಂದ ಆಪರೇಷನ್‌ ಚಿರತೆಯ ದೃಶ್ಯ.

ಕಳೆದ ಮೂರು ದಿನಗಳಿಂದ ಪೂರ್ವ ದಿಕ್ಕಿನ ಸುತ್ತಮುತ್ತ ಬೀಡು ಬಿಟ್ಟಿರುವ ಚಿರತೆಯೊಂದು ದಿನದಿಂದ ದಿನಕ್ಕೆ ಸ್ಥಳ ಬದಲಾಯಿಸುತ್ತಿದ್ದು ಅರಣ್ಯ ಇಲಾಖೆ(Forest Department) ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಚಿರತೆ ಕಂಡ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಮತ್ತೊಂದು ಕಡೆ ಜಾಗ ಬದಲಿಸುತ್ತಿದೆ ಚಾಣಾಕ್ಷ ಚಿರತೆ. ಈಗ ಗ್ರಾಮದ ಬೇರೆ ಬೇರೆ ಕಬ್ಬಿನ ತೋಟಗಳೇ ಅದಕ್ಕೆ ಆಶ್ರಯ ತಾಣವಾಗಿದೆ. ಯಾವ ಕಬ್ಬಿನ ತೋಟದಿಂದ ಚಿರತೆ ಯಾವಾಗ ಹೊರಗೆ ಬರುತ್ತದೆಯೋ ಅಥವಾ ಊರಲ್ಲಿಯೇ ಪ್ರತ್ಯಕ್ಷ ಆಗುತ್ತದೆಯೋ ಎನ್ನುವ ಭಯ ಗ್ರಾಮಸ್ಥರಿಗೆ ಉಂಟಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶತಾಯ-ಗತಾಯ ಚಿರತೆಯನ್ನು ಸೆರೆ ಹಿಡಿಯಬೇಕೆಂದು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.

Tap to resize

Latest Videos

ಕಳೆದ ಮೂರು ದಿನಗಳಿಂದ ಕವಲಗೇರಿ ಗ್ರಾಮದ ರೈತರ ಜಮೀನುಗಳಲ್ಲಿ ಅಲೆದಾಡುತ್ತಿರುವ ಚಿರತೆಯನ್ನು ಹಲವರು ನೋಡಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾತ್ರ ಕಣ್ಣಿಗೆ ಬಿದ್ದಿಲ್ಲ. ರೈತರು ಅಲ್ಲಲ್ಲಿ ಚಿರತೆಯನ್ನು ನೋಡಿ ಆತಂಕಗೊಂಡಿದ್ದಾರೆ. ಇದೇ ಕಾರಣಕ್ಕೆ ಅರಣ್ಯ ಇಲಾಖೆ ಅ​ಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಶಿವಪ್ಪ ಉಪ್ಪಾರ ಎಂಬ ರೈತನ ಸುಮಾರು 35 ಎಕರೆ ಕಬ್ಬಿನ ತೋಟದಲ್ಲಿ ಚಿರತೆ ಬೀಡು ಬಿಟ್ಟಿದೆ. ನಿರಂತರವಾಗಿ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಇಲಾಖೆ ಸಿಬ್ಬಂದಿ ಡ್ರೋಣ್‌ ಕ್ಯಾಮೆರಾಕ್ಕೆ ಮೊರೆ ಹೋಗಿದ್ದಾರೆ. ಆದರೆ ಕಬ್ಬು ದಟ್ಟವಾಗಿ ಬೆಳೆದ ಕಾರಣ ಚಿರತೆ ದೃಶ್ಯ ಕಾಣುತ್ತಿಲ್ಲ.

ಹುಬ್ಬಳ್ಳಿ: ನಿಮಗೆ ಸಾಧ್ಯವಾಗದಿದ್ರೆ ಹೇಳಿ; ನಾವೇ ಚಿರತೆ ಹಿಡಿತೀವಿ, ಜನಾಕ್ರೋಶ

ಹೊಲಕ್ಕೆ ಬಾರದ ರೈತರು..

ಚಿರತೆ ಇರುವ ಹಿನ್ನೆಲೆಯಲ್ಲಿ ಕವಲಗೇರಿ ಗ್ರಾಮದ ಸುತ್ತಲಿನ ಹೊಲಗಳ ರೈತರು ಹಾಗೂ ಕೂಲಿ ಕಾರ್ಮಿಕರು ಹೊಲದ ಕೆಲಸಗಳಿಗೆ ಬರುತ್ತಿಲ್ಲ. ಇದರೊಂದಿಗೆ ಸುರಕ್ಷತೆ ದೃಷ್ಟಿಯಿಂದ ಗ್ರಾಮದಲ್ಲಿ ಅನವಶ್ಯಕವಾಗಿ ಜನರು ಹೊರ ಬರದಂತೆ ಹಾಗೂ ರೈತರು ಹೊಲಗಳಿಗೆ ಹೋಗದಂತೆ ಡಂಗುರ ಸಹ ಸಾರಲಾಗಿದೆ.

ಒಂದು ಕಡೆ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಸುತ್ತಮುತ್ತ ಕಳೆದೊಂದು ವಾರದಿಂದ ಕಂಡಿರುವ ಚಿರತೆ ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಕವಲಗೇರಿ ಚಿರತೆ ಕಾಟ ಸಹ ಶುರುವಾಗಿದೆ. ಒಟ್ಟಿನಲ್ಲಿ ತೋಳ ಬಂತು ತೋಳ ಎನ್ನುವಂತೆ ಚಿರತೆ ಬಂತು ಚಿರತೆ ಎನ್ನುವಂತಾಗಿದೆ. ಇರುವ ಎರಡರ ಪೈಕಿ ಒಂದು ಕಡೆಯಾದರೂ ಚಿರತೆ ಸೆರೆಯಾದಲ್ಲಿ ಜನತೆಯ ಆತಂಕಕ್ಕೆ ಕಡಿವಾಣ ಬೀಳಲಿದೆ.

ಜಿಲ್ಲಾಧಿಕಾರಿ ಭೇಟಿ..

ಚಿರತೆ ಕಾರಾರ‍ಯಚರಣೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕವಲಗೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಲಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಂಬಿಂಗ್‌ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಗುರುವಾರದಿಂದ ಚಿರತೆ ಹಿಡಿಯುವ ಕಾರ್ಯ ಚುರುಕುಗೊಳಿಸಿದ್ದು ಗ್ರಾಮಸ್ಥರು ಸಹಕಾರ ನೀಡಬೇಕು. ಜೊತೆಗೆ ಜಿಲ್ಲಾಡಳಿತದಿಂದ ಸುರಕ್ಷತಾ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಈ ಸಮಯದಲ್ಲಿ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ಪ್ರೊಬೇಷನರಿ ಅಧಿಕಾರಿ ಮಾಧವ ಗಿತ್ತೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ಕ್ಷೀರಸಾಗರ, ತಹಸೀಲ್ದಾರ ಸಂತೋಷ ಬಿರಾದಾರ ಇದ್ದರು.

ಕವಲಗೇರಿ ಸುತ್ತಲು ಚಿರತೆ ಇರುವುದು ನಿಜ. ಅದಕ್ಕಾಗಿ ಗುರುವಾರದಿಂದ ಕೂಂಬಿಂಗ್‌ ಆಪರೇಶನ್‌ ಬೆಳಗ್ಗೆಯಿಂದ ನಡೆಯುತ್ತಿದೆ. ದ್ರೋಣ ಕ್ಯಾಮರಾ ಸಹ ಬಿಡಲಾಗಿದೆ. ಆದರೆ, ಕಬ್ಬು ದಟ್ಟವಾದ ಕಾರಣ ದೃಶ್ಯಗಳು ಸರಿಯಾಗಿ ಕಾಣುತ್ತಿಲ್ಲ. ಜೊತೆಗೆ ಚಿರತೆ ಹಿಡಿಯಲು ಮೂರು ಬೋನ್‌ಗಳನ್ನು ಇಟ್ಟು ಅದರಲ್ಲಿ ಹಂದಿ ಮತ್ತು ಕೋಳಿಗಳನ್ನು ಇಡಲಾಗಿದೆ. ಕೂಂಬಿಂಗ್‌ ಆಪರೇಶವ್‌ ವೇಳೆ ಚಿರತೆಯ ಹೆಜ್ಜೆ ಗುರುತು ದೊರೆತಿದೆ. ಆದಷ್ಟುಶೀಘ್ರ ಚಿರತೆಯು ಬೋನನಲ್ಲಿ ಬೀಳುವ ನಿರೀಕ್ಷೆ ಹೊಂದಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ಕ್ಷೀರಸಾಗರ ಹೇಳಿದ್ದಾರೆ. 

ಚಿರತೆ ಸ್ಕ್ಯಾಟ್‌ ಹೈದ್ರಾಬಾದ್‌ಗೆ ರವಾನೆ

ಹುಬ್ಬಳ್ಳಿ(Hubballi) ನಗರದ ನೃಪತುಂಗ ಬೆಟ್ಟದಲ್ಲಿ ಆಗಾಗ ಕಂಡು ಚಿಂತೆಗೀಡು ಮಾಡಿದ್ದ ಚಿರತೆ ಬುಧವಾರದಿಂದ ಕಂಡು ಬಂದಿಲ್ಲ. ಆದರೂ ಕಾರ್ಯಾಚರಣೆ ಪೂರ್ಣವಾಗಿ ಸ್ಥಗಿತಗೊಳಿಸಿಲ್ಲ. ಕೂಂಬಿಂಗ್‌ ಮಾಡಿಲ್ಲವಾದರೂ ಪೆಟ್ರೋಲಿಂಗ್‌ಮಾಡಲಾಗುತ್ತಿದೆ. ಈ ನಡುವೆ ಧಾರವಾಡ ತಾಲೂಕಿನ ಕವಲಗೇರಿಯಲ್ಲಿ ಕಂಡುಬಂದ ಚಿರತೆ ಹಾಗೂ ನೃಪತುಂಗ ಬೆಟ್ಟದ ಚಿರತೆಯ ಸ್ಕ್ಯಾಟ್‌(ಮಲ)ನ್ನು ಪರೀಕ್ಷೆಗೊಳಪಡಿಸಲು ಹೈದ್ರಾಬಾದ್‌(Hyderabad) ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಚಿರತೆ ಕಂಡು ಬೆಚ್ಚಿಬಿದ್ದ ಜನತೆ

ನಿನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಕೂಂಬಿಂಗ್‌ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಇಲ್ಲಿ ಚಿರತೆ ಕಂಡು ಬಂದಿರಲಿಲ್ಲ. ಕಳೆದ ಎರಡು ದಿನದಿಂದ ಇಲ್ಲಿ ಚಿರತೆ ಕಂಡು ಬಂದಿಲ್ಲ. ಕೂಂಬಿಂಗ್‌ ವೇಳೆ ಚಿರತೆಯ ವಾಸವಾಗಿದ್ದ ಕುರುಹು ಪತ್ತೆಯಾಗಿದ್ದವು. ಈ ನಡುವೆ ಸೋಮವಾರ ಹಾಗೂ ಬುಧವಾರ ಕವಲಗೇರಿಯಲ್ಲಿ ಚಿರತೆ ಕಂಡು ಬಂದಿದೆ. ಅಲ್ಲೂ ಅದರ ಕುರುಹುಗಳು ಸಿಕ್ಕಿವೆ. ಹೀಗಾಗಿ ಎರಡು ಕಡೆ ಕಂಡು ಬಂದ ಚಿರತೆ ಒಂದೇನಾ ಅಥವಾ ಬೇರೆ ಬೇರೆಯಾ ಎಂಬುದನ್ನು ಪರಿಶೀಲಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಕಡೆಗಳಲ್ಲಿ ಪತ್ತೆಯಾಗಿರುವ ಚಿರತೆಯ ಸ್ಕ್ಯಾಟ್‌ನ್ನು ಸಂಗ್ರಹಿಸಿ ಪರೀಕ್ಷೆಗೆ ಹೈದ್ರಾಬಾದ್‌ಗೆ ರವಾನಿಸಲಾಗಿದೆ. ಅದರ ವರದಿ ಬಂದ ಬಳಿಕ ಎರಡೂ ಕಡೆ ಕಂಡ ಚಿರತೆ ಒಂದೇನಾ ಎಂಬುದು ಬಹಿರಂಗಗೊಳ್ಳಲಿದೆ. ವರದಿ ಬರಲು ಇನ್ನೂ ಮೂರ್ನಾಲ್ಕು ದಿನಗಳ ಕಾಲ ಬೇಕಾಗಬಹುದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಈ ನಡುವೆ ನೃಪತುಂಗ ಬೆಟ್ಟದಲ್ಲಿ ಗುರುವಾರವೇನೂ ಕೂಂಬಿಂಗ್‌ ನಡೆಸಿಲ್ಲ. ಆದರೆ ಗಸ್ತು ತಿರುಗುವಿಕೆಯನ್ನು ಮುಂದುವರಿಸಲಾಗಿದೆ. 2 ದಿನಗಳಿಂದ ಚಿರತೆ ಕಂಡಿಲ್ಲವೆಂದು ಜನತೆ ಮೈಮರೆಯಬಾರದು. ಇನ್ನೂ ಕೆಲ ದಿನ ಜಾಗ್ರತೆ ವಹಿಸುವುದು ಅಗತ್ಯ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಈ ಮಧ್ಯೆ ಕೇಂದ್ರೀಯ ವಿದ್ಯಾಲಯದಲ್ಲಿನ ಹಳೆ ಕಟ್ಟಡ ನೆಲಸಮಗೊಳಿಸುವ ಕಾರ್ಯವೂ ಮುಂದುವರಿದಿದೆ. ಚಿರತೆ ಇಲ್ಲಿಯೇ ತನ್ನ ಅಡಗು ತಾಣ ಮಾಡಿಕೊಂಡಿತ್ತು ಎಂಬ ಸಾರ್ವಜನಿಕರ ಸಂಶಯ ಹಿನ್ನೆಲೆಯಲ್ಲಿ ನೆಲಸಮಗೊಳಿಸುವ ಕಾರ್ಯ ಮುಂದುವರಿಸಲಾಗಿದೆ. ಇನ್ನೂ ಕೆಲ ದಿನ ನೆಲಸಮಗೊಳಿಸುವ ಕಾರ್ಯ ಮುಂದುವರಿಯಲಿದೆ. ಒಟ್ಟಿನಲ್ಲಿ ಚಿರತೆ ಆತಂಕ ಇನ್ನೂ ದೂರವಾಗಿಲ್ಲ. ಇನ್ನು ಕೆಲ ದಿನ ಕಾಯುವುದು ಅನಿವಾರ್ಯ. ಬಳಿಕವಷ್ಟೇ ಜನತೆ ನಿರಾಳತೆ ಅನುಭವಿಸಲಿದ್ದಾರೆ.

ಎರಡೂ ಕಡೆ ಪತ್ತೆಯಾಗಿರುವ ಚಿರತೆಯ ಸ್ಕ್ಯಾಟ್‌ನ್ನು ಪರೀಕ್ಷೆಗೆ ಹೈದ್ರಾಬಾದ್‌ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಎರಡು ಬೇರೆ ಬೇರೆ ಚಿರತೆಯೂ ಅಥವಾ ಒಂದೇನಾ ಎಂಬುದು ಗೊತ್ತಾಗಲಿದೆ. ಸದ್ಯ ಕವಲಗೇರಿಯಲ್ಲಿ ಕೂಂಬಿಂಗ್‌ನಡೆಸಲಾಗಿದೆ. ನೃಪತುಂಗ ಬೆಟ್ಟದಲ್ಲಿ ಕೂಂಬಿಂಗ್‌ಮಾಡಿಲ್ಲ. ಕಾರ್ಯಾಚರಣೆ ನಿಂತಿಲ್ಲ. ಜನತೆ ಈಗಲೂ ಜಾಗೃತಿ ವಹಿಸುವುದು ಅಗತ್ಯ ಹಾಗೂ ಅನಿವಾರ್ಯ ಎಂದು ಧಾರವಾಡ ಉಪವಲಯ ಅರಣ್ಯಾಧಿಕಾರಿ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ. 
 

click me!