ಸಾಮಾನ್ಯವಾಗಿ ಶ್ರಾವಣ ಮಾಸಕ್ಕೆ ಆಗಮಿಸುತ್ತಿದ್ದ ಬಾಳೆಕಾಯಿಗೆ ದರ ಈ ವರ್ಷ ಈಗಲೇ ಏರಿಕೆ ಆಗಿದೆ. ರೈತರು ಒಂದೆಡೆ ಖುಷಿ ಆಗಿದ್ದರೆ, ಇನ್ನೊಂದೆಡೆ ಬೆಳೆ ಕಡಿಮೆ ಇದ್ದು ಮರುಗುವಂತಾಗಿದೆ.
ಶಿರಸಿ (ಜೂ.18) ಸಾಮಾನ್ಯವಾಗಿ ಶ್ರಾವಣ ಮಾಸಕ್ಕೆ ಆಗಮಿಸುತ್ತಿದ್ದ ಬಾಳೆಕಾಯಿಗೆ ದರ ಈ ವರ್ಷ ಈಗಲೇ ಏರಿಕೆ ಆಗಿದೆ. ರೈತರು ಒಂದೆಡೆ ಖುಷಿ ಆಗಿದ್ದರೆ, ಇನ್ನೊಂದೆಡೆ ಬೆಳೆ ಕಡಿಮೆ ಇದ್ದು ಮರುಗುವಂತಾಗಿದೆ.
ತಾಲೂಕಿನಲ್ಲಿ ಬಾಳೆ ಬೆಳೆ ಪ್ರಧಾನವಾಗಿಲ್ಲ. ಇಲ್ಲಿಯ ಅಡಕೆ ತೋಟಗಳ ಮಧ್ಯೆ ಬೆಳೆಯುವ ಬಾಳೆಯನ್ನು ಉಪ ಬೆಳೆಯಾಗಿ ಪರಿಗಣಿಸಿದವರೇ ಜಾಸ್ತಿ. ತಾಲೂಕಿನ ಬನವಾಸಿ ಹೋಬಳಿ, ಅಂಡಗಿ ಪಂಚಾಯಿತಿ ಹೊರತು ಪಡಿಸಿ ಇನ್ನುಳಿದೆಡೆ ಬಾಳೆಯ ಆದಾಯವನ್ನೇ ರೈತರು ಜೀವನ ನಿರ್ವಹಣೆಗೆ ಅವಲಂಬಿಸಿಲ್ಲ. ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಸಹ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿ ಆಗಿವೆ. ಹಂದಿ, ಮಂಗಗಳಿಂದ ಬಾಳೆ ಬೆಳೆ ರಕ್ಷಿಸಿಕೊಳ್ಳುವುದೂ ಒಂದು ಸಾಹಸ. ಬಾಳೆಕಾಯಿ ಬೆಳೆಯುವ ಶ್ರಮಕ್ಕೆ ಹೋಲಿಸಿದರೆ ಸಿಗುವ ಬೆಲೆ ಸಂತೃಪ್ತಿಕರವಾಗಿಲ್ಲ.
ಬಾಳೆ ಎಲೆ ಊಟ ಮಾಡಿ ಎಲೆ ಅಡಿಕೆ ತಿಂದ ಅಮೆರಿಕಾ ಅಂಬಾಸಿಡರ್: ದಕ್ಷಿಣ ಭಾರತದ ಊಟಕ್ಕೆ ಫುಲ್ ಫಿದಾ
ಆದರೆ, ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬಾಳೆ ಬೆಲೆ ಏರಿಕೆ ಆಗಿ ಭಾದ್ರಪದದವರೆಗೂ ಲಭ್ಯವಾಗುತ್ತಿತ್ತು. ಹಬ್ಬದ ಈ ದಿನಗಳಲ್ಲಿ ಸ್ಥಳೀಯ ಮತ್ತು ಹೊರ ಮಾರುಕಟ್ಟೆಯಲ್ಲಿ ಬೇಡಿಕೆ ಗಣನೀಯವಾಗುತ್ತದೆ.
ಪ್ರತಿ ವರ್ಷ ಈ ವೇಳೆಗೆ ಮೆಟ್ಲಿ ಬಾಳೆಕಾಯಿ ಪ್ರತಿ ಕೆಜಿಗೆ ರೂ.8-9 ಇರುತ್ತಿದ್ದರೆ ಈ ವರ್ಷ ಈಗ 27 ರೂ. ದರ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ. ಈ ವೇಳೆ ಕೇಳುವವರೇ ಇರದ ಎರಡನೇ ದರ್ಜೆ ಮೆಟ್ಲಿ ಸಹ ಪ್ರತಿ ಕೆಜಿಗೆ 16 ರೂ. ದರ ಪಡೆಯುತ್ತಿದೆ.
ಕರಿಬಾಳೆ ರೂ.6 ರಿಂದ 7 ಈ ವೇಳೆ ದರ ಇರುತ್ತಿದ್ದರೂ ಈ ವರ್ಷ 18 ರೂ., ಮೈಸೂರು ಬಾಳೆ ರೂ.8 ಕ್ಕೆ ಏರಿಕೆ ಆಗಿದೆ.
ದರ ಏರಿಕೆ ಏಕೆ?:
ಮಾವಿನ ಹಣ್ಣಿನ ಹಂಗಾಮು ಮುಕ್ತಾಯವಾಗುತ್ತಿದ್ದಂತೆಯೇ ಜನತೆಯ ಬಳಕೆ ಬಾಳೆ ಹಣ್ಣಿನತ್ತ ತಿರುಗುತ್ತದೆ. ಆದರೆ, ಪ್ರತಿ ವರ್ಷ ಈ ವೇಳೆಗೆ ಬೇಡಿಕೆಗಿಂತ ಜಾಸ್ತಿಯೇ ಬಾಳೆಕಾಯಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿತ್ತು. ಹೀಗಾಗಿ, ಇಲ್ಲಿಯ ಬಾಳೆಕಾಯಿಯನ್ನು ಗೋವಾ ಮಾರುಕಟ್ಟೆಗೆ ಕಳಿಸಲಾಗುತ್ತಿತ್ತು.
ಈ ವರ್ಷ ಜನವರಿ ತಿಂಗಳ ಬಳಿಕ ಮಳೆಯೇ ಆಗದಿರುವುದು ಬಾಳೆ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬಾಳೆ ಗಿಡಗಳು ನೀರಿಲ್ಲದೇ ಬೆಳೆ ನಾಶವಾಗಿದ್ದರೆ, ಮಲೆನಾಡಿನ ಅಡಕೆ ತೋಟಗಳ ಮಧ್ಯೆ ಬೆಳೆದ ಬಾಳೆಗೊನೆಗಳೂ ಸಹ ಗುಣಮಟ್ಟದ್ದಾಗಿಲ್ಲ. ನಗರದ ಬಾಳೆಕಾಯಿ ಮಂಡಿಗಳಿಗೆ ಪ್ರತಿ ದಿನ 2 ರಿಂದ 3 ಕ್ವಿಂಟಲ್ ಮಾತ್ರ ಬಾಳೆಕಾಯಿ ಮಾರಾಟಕ್ಕೆ ಬರುತ್ತಿದೆ. ಹೀಗಾಗಿ, ಬೇಡಿಕೆ ಪ್ರಮಾಣದ ಬಾಳೆಕಾಯಿ ಲಭ್ಯವಾಗದೇ ದರ ಏರಿಕೆ ಆಗಿದೆ. ಇದು ರೈತರಿಗೆ ಒಂದೆಡೆ ಹರ್ಷ ತಂದಿದ್ದರೆ ಇನ್ನೊಂದೆಡೆ ವಾರ್ಷಿಕ ಸರಾಸರಿ ಬಾಳೆ ಬೆಳೆ ಇಲ್ಲದೇ ಆದಾಯವೂ ಕುಂಠಿತವಾಗಿದೆ.
Healthy Food : ಮಾವು – ಬಾಳೆ ಹಣ್ಣಿನ ಶೇಕ್ ನಲ್ಲಿ ಯಾವುದು ಬೆಸ್ಟ್?
ಈ ವರ್ಷ ಬಾಳೆ ಬೆಳೆಗೆ ಉತ್ತಮ ದರ ಲಭಿಸುತ್ತಿದೆ. ಶ್ರಾವಣ ಮಾಸದಲ್ಲಿ ಈ ವರ್ಷ ದಾಖಲೆಯ ದರ ಲಭಿಸುವ ನಿರೀಕ್ಷೆ ಇದೆ.
ವಿನಾಯಕ ಶೇಟ್, ಬಾಳೆಕಾಯಿ ವ್ಯಾಪಾರಸ್ಥ, ಶಿರಸಿ
ಶಿರಸಿ ತಾಲೂಕಿನ ಬನವಾಸಿ ಹೋಬಳಿಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆ ಇದೆ. ಈ ವರ್ಷ ನೀರಿನ ಕೊರತೆ ಈ ಭಾಗದಲ್ಲಿ ಉಂಟಾಗಿದೆ.
ಸತೀಶ ಹೆಗಡೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಶಿರಸಿ