ಬೆಳಗಾವಿ: 120ಕ್ಕೂ ಅಧಿಕ ಬ್ಲಾಕ್‌ ಫಂಗಸ್‌ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

By Kannadaprabha NewsFirst Published Jun 27, 2021, 2:50 PM IST
Highlights

* ಕೋವಿಡ್‌ ಸೋಂಕಿತ 115ಕ್ಕೂ ಅಧಿಕ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ
* ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರ ಸಾಧನೆ
* ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು
 

ಬೆಳಗಾವಿ(ಜೂ.27): ಕೋವಿಡ್‌ ಎರಡನೇ ಅಲೆ ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ತಂದೊಡ್ಡಿತು. ಅಲ್ಲದೇ ಕೋವಿಡ್‌ನಿಂದ ಗುಣಮುಖರಾದರೂ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮೇ 5, 2021ರಂದು ಬ್ಲ್ಯಾಕ್‌ ಫಂಗಸ್‌ ರೋಗಿಯು ಕಂಡು ಬಂದಿದ್ದು, ಇಲ್ಲಿಯವರೆಗೆ ಸುಮಾರು 120ಕ್ಕೂ ಅಧಿಕ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಕೋವಿಡ್‌ ಸೋಂಕಿಗೆ ಒಳಗಾಗಿದ್ದ 115ಕ್ಕೂ ಅಧಿಕ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡುವಲ್ಲಿ ಆಸ್ಪತ್ರೆಯ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.

ಕಿವಿ, ಮೂಗು ಹಾಗೂ ಗಂಟಲು ತಜ್ಞವೈದ್ಯ ಡಾ.ಅನಿಲ ಹಾರುಗೊಪ್ಪ ಹಾಗೂ ನೇತ್ರ ತಜ್ಞವೈದ್ಯ ಡಾ.ಅರವಿಂದ ತೆನಗಿ ಅವರ ಮುಂದಾಳತ್ವದಲ್ಲಿ 76 ಜನರು ಸೈನೊ ನಸಲ್‌, 35 ರೋಗಿಗಳ ಕಣ್ಣು, 8 ರೋಗಿಗಳ ಮೆದುಳಿಗೆ ಕಪ್ಪು ಶಿಲೀಂಧ್ರ ತಗುಲಿತ್ತು. ಅದರಲ್ಲಿ ಮೂವರ ಕಣ್ಣುಗಳನ್ನು ತೆಗೆದರೆ ನಾಲ್ಕು ರೋಗಿಗಳ ಅಂಗಳವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. 95ಕ್ಕೂ ಅಧಿಕ ಜನ ಗುಣಮುಖರಾಗಿದ್ದಾರೆ.

ಹುಬ್ಬಳ್ಳಿ: 8 ಜನರ ದೃಷ್ಟಿ ಕಿತ್ತುಕೊಂಡ ಬ್ಲ್ಯಾಕ್‌ ಫಂಗಸ್‌..!

ಕಪ್ಪು ಶಿಲೀಂಧ್ರ ಸೋಂಕು ಮೆದುಳಿಗೆ ತಗುಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 50 ವರ್ಷದ ವ್ಯಕ್ತಿಗೆ ನರಶಸ್ತ್ರಚಿಕಿತ್ಸಕರಾದ ಡಾ.ಪ್ರಕಾಶ ಮಹಾಂತಶೆಟ್ಟಿ ಅವರ ತಂಡವು ಸಿಟಿ ಸ್ಕ್ಯಾ‌ನ್‌ ಮೂಲಕ ಪರೀಕ್ಷಿಸಿದಾಗ, ಸುಮಾರು  ಇಎಂಎಸ್‌ ಅಳತೆಯ ಕಪ್ಪು ಶಿಲೀಂಧ್ರವು ಸೈನಸ್‌ ಹಾಗೂ ಮೆದುಳಿಗೆ ಹರಡಿರುವುದು ಕಂಡು ಬಂದಿತು. ತಡಮಾಡದೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗಿದ್ದ ಭಾಗವನ್ನು ಹೊರತೆಗೆದು ಜೀವ ಉಳಿಸಿದರು.

ಉಚಿತ ಸುರಕ್ಷಿತ ಹೆರಿಗೆ:

115ಕ್ಕೂ ಅಧಿಕ ಗರ್ಭಿಣಿಯರು ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. ಅವರಿಗೆ ಸುರಕ್ಷಿತ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವುದು ಸವಾಲಿನ ಕೆಲಸವಾಗಿತ್ತು. ಅದರಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದ 72 ಗರ್ಭಿಣಿಯರಿಗೆ ಉಚಿತ ಹೆರಿಗೆ ಮಾಡಿಸಲಾಗಿದೆ. ದಾಖಲಾದ ಕೋವಿಡ್‌ ಸೋಂಕಿತ ಮಹಿಳೆಯರು ಆರೋಗ್ಯಯುತವಾಗಿ ಮಗುವಿನ ಜತೆಗೆ ಮನೆಗೆ ತೆರಳಿದ್ದಾರೆ.

ಕೋವಿಡ್‌ ಸೋಂಕಿಗೆ ಒಳಗಾಗಿ ಬೇರೆ ಕಾಯಿಲೆಯಿಂದ ಜೀವನ್ಮರಣ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಇಎನ್‌ಟಿ ತಜ್ಞವೈದ್ಯರಾದ ಡಾ.ಅನಿಲ ಹಾರುಗೊಪ್ಪ, ಡಾ.ಶಮಾ ಬೆಲ್ಲದ, ಡಾ.ಪುನೀತ ನಾಯಕ, ಡಾ.ಪ್ರೀತಿ ಹಜಾರೆ, ಡಾ.ಪ್ರೀತಿ ಶೆಟ್ಟಿ, ನೇತ್ರ ತಜ್ಞವೈದ್ಯರಾದ ಡಾ.ಅರವಿಂದ ತೆನಗಿ, ನರ ಶಸ್ತ್ರಚಿಕಿತ್ಸಕರಾದ ಡಾ.ಪ್ರಕಾಶ ಮಹಾಂತಶೆಟ್ಟಿ, ಡಾ.ಅಭಿಷೇಕ ಪಾಟೀಲ, ಡಾ. ವಿಕ್ರಮ, ಡಾ. ಪ್ರಕಾಶ ರಾತೋಡ, ಅರವಳಿಕೆ ತಜ್ಞವೈದ್ಯರು ಸೇರಿದಂತೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕಾಹೆರನ ಕುಲಪತಿ, ಕುಲಸಚಿವ ಡಾ. ವಿ.ಎ. ಕೋಠಿವಾಲೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಜೆಎನ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್‌.ಎಸ್‌. ಮಹಾಂತಶೆಟ್ಟಿ, ಡಾ. ಆರಿಫ್‌ ಮಾಲ್ದಾರ ಅವರು ಅಭಿನಂದಿಸಿದ್ದಾರೆ.
 

click me!