
ಬೆಂಗಳೂರು(ಜು.09): ಯಕೃತ್ ಕಸಿ ಮಾಡುವ ವೇಳೆಯೇ ಹೃದಯಾಘಾತಕ್ಕೆ ಒಳಗಾದ 5 ವರ್ಷದ ಮಗುವಿಗೆ ಆ್ಯಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರು ನಡೆಸಿದ ಸತತ 14 ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಇತ್ತೀಚೆಗೆ ತುಮಕೂರು ಮೂಲದ 5 ವರ್ಷದ ಪುಣ್ಯಶ್ರೀ ಅನ್ನು ಯಕೃತ್ ಸಮಸ್ಯೆಯಿಂದಾಗಿ ಆ್ಯಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಾಯಿಯ ಎಡಭಾಗದ ಯಕೃತ್ತನ್ನು ಮಗುವಿಗೆ ಕಸಿ ನಡೆಸುತ್ತಿದ್ದ ಸಮಯದಲ್ಲಿ 40 ನಿಮಿಷಗಳ ಕಾಲ ಹೃದಯ ಬಡಿತ ನಿಂತಿತ್ತು. ಈ ವೇಳೆ ವೈದ್ಯರು ಎದುರಾದ ಸವಾಲಿನ ನಡುವೆಯೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಮಗುವಿಗೆ ಮರುಜೀವ ನೀಡಿದ್ದಾರೆ.
BBMP ಆಸ್ಪತ್ರೆ ಅಭಿವೃದ್ಧಿ: ಇನ್ಫೋಸಿಸ್ 30 ಕೋಟಿ ಅನುದಾನ
ಪುಣ್ಯಶ್ರೀ ಏಳು ತಿಂಗಳ ಮಗುವಿದ್ದಾಗಲೇ ಪ್ರೊಗ್ರೆಸಿವ್ ಫ್ಯಾಮಿಲಿಯಲ್ ಇಂಟ್ರಾ-ಹೆಪಾಟಿಕ್ ಕೊಲೆಸ್ಟಾಸಿಸ್(ಪಿಎಫ್‌ಐಸಿ) ಎಂಬ ಅಪರೂಪದ ಕಾಯಿಲೆ ಕಾಣಿಸಿಕೊಂಡಿತ್ತು. ಇದರಿಂದ ಆಕೆಗೆ ಹಳದಿ ರೋಗವೂ ವ್ಯಾಪಿಸಿತ್ತು.
ಈ ಕಾಯಿಲೆ ಪರಿಣಾಮ ಯಕೃತ್‌ಗೆ ಹಾನಿಯೊಂದಿಗೆ, ಮಗುವಿನ ಬೆಳವಣಿಗೆಯೂ ಕುಂಠಿತವಾಗಿತ್ತು. ತಾಯಿಯ ಯಕೃತ್ತನ್ನು ಮಗುವಿಗೆ ಕಸಿ ಮಾಡಲಾಗಿದೆ. ಸಾಮಾನ್ಯವಾಗಿ ಯಕೃತ್ ಕಸಿ ವೆಚ್ಚ 12 ಲಕ್ಷದಿಂದ 30 ಲಕ್ಷ ರು. ತಗಲುತ್ತದೆ. ಆದರೆ, ಆಸ್ಪತ್ರೆ ಐಎಲ್‌ಸಿ ತಂಡವು ದಾನಿಗಳಿಂದ 12.5 ಲಕ್ಷ ರು. ಸಂಗ್ರಹಿಸಿ ಚಿಕಿತ್ಸೆಗೆ ಸಹಕರಿಸಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ರಾಜೀವ್ ಲೋಚನ್ ಮಾಹಿತಿ ನೀಡಿದ್ದಾರೆ.