ಎಲ್ಲಾ ಕಚೇರಿಗಳ ಪತ್ರ ವ್ಯವಹಾರಗಳು ಆಗಸ್ಟ್ 16 ರಿಂದ ಕಡ್ಡಾಯವಾಗಿ ಇ-ಕಚೇರಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು : ಎಲ್ಲಾ ಕಚೇರಿಗಳ ಪತ್ರ ವ್ಯವಹಾರಗಳು ಆಗಸ್ಟ್ 16 ರಿಂದ ಕಡ್ಡಾಯವಾಗಿ ಇ-ಕಚೇರಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೀಡಿಯೋ ಕಾನ್ಪೆರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇ-ಕಚೇರಿ ಅನುಷ್ಠಾನವಾಗದ ಕಚೇರಿಗಳ ಗುರ್ತಿಸಿ, ಈಗಾಗಲೇ ರಿಗೆ ಅಗತ್ಯ ತರಬೇತಿ ನೀಡಿ ಪೂರಕವಾಗಿ ಇ-ಕಚೇರಿ ಅನುಷ್ಠಾನಕ್ಕೆ ಅಗತ್ಯವಾದ ಸೌಕರ್ಯಗಳ ಒದಗಿಸಲಾಗಿದೆ. ಇನ್ನೂ ಕಚೇರಿಗಳಲ್ಲಿ ಗಣಕಯಂತ್ರ, ಮುದ್ರಣ ಯಂತ್ರ, ಮೊದಲಾದ ಪರಿಕರಗಳ ಅವಶ್ಯಕತೆ ಇದ್ದಲ್ಲಿ ಪತ್ರ ಮುಖೇನ ಮನವಿ ಸಲ್ಲಿಸಬೇಕು. ಎಲ್ಲಾ ತಾಲೂಕು ಕಚೇರಿಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗುವಂತಹ ಕಡತಗಳು ಕಡ್ಡಾಯವಾಗಿ ಇ-ಕಚೇರಿ ಮೂಲಕ ಸಲ್ಲಿಕೆಯಾಗಬೇಕು. ಆಗಸ್ಟ್ 16 ರಿಂದ ಭೌತಿಕ ಕಡತಗಳು ಸಲ್ಲಿಸಬಾರದು ಎಂಬ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದರು.
ಕಂದಾಯ ಗ್ರಾಮಗಳಲ್ಲದ ಜಿಲ್ಲೆಯ ಗೊಲ್ಲರಹಟ್ಟಿಹಾಗೂ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರದ ಮಾರ್ಗಸೂಚಿ ಅನುಸಾರ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳ ಘೋಷಣೆ ಮಾಡುವ ಬಗ್ಗೆ ಅಗತ್ಯ ವರದಿ ತ್ವರಿತವಾಗಿ ಕಳಿಸಬೇಕು. ವರದಿ ಅನುಸಾರ ಕಂದಾಯ ಗ್ರಾಮ ಎಂದು ಘೋಷಿಸಿ, ನೆಲೆ ಕಲ್ಪಿಸಿ ಸರ್ಕಾರದ ದಾಖಲೆಗಳ ನೀಡಲಾಗುತ್ತದೆ. ಫಲಾನುಭವಿಯ ಕೈಗೆ ಹಕ್ಕು ಪತ್ರ ಸಿಕ್ಕಿದರೆ ಆ ಜಾಗದ ಮಾಲೀಕ ಅವರಾಗುತ್ತಾರೆ. ಈ ಮೂಲಕ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಸರ್ಕಾರದ ಎಲ್ಲಾ ಸವಲತ್ತುಗಳು ದೊರಕಲಿದೆ ಎಂದರು.
ವಿಕಲಚೇತನರು, ವಿಧವೆಯರು, ವೃದ್ಧರಿಗೆ ಸಂಬಂಧಿಸಿದ ಪಿಂಚಣಿ ಸಮಸ್ಯೆಗಳನ್ನು ಬಗೆಹರಿಸಿ, ನೀಡಲಾಗುತ್ತಿರುವ ಪಿಂಚಣಿ ಸರಿಯಾಗಿ ಸೇರುತ್ತಿರುವ ಬಗ್ಗೆ ಪರಿಶೀಲಿಸಬೇಕು. ವಸತಿ ಯೋಜನೆಯಡಿ ತಳಪಾಯ, ಗೋಡೆ, ಚಾವಣಿ ಗೃಹ ನಿರ್ಮಾಣದ ವಿವಿಧ ಹಂತಗಳಲ್ಲಿ ಬಾಕಿ ಇರುವ ಜಿಪಿಎಸ್‌ಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತ್ವರಿತವಾಗಿ ಪೂರ್ಣಗೊಳಿಸಬೇಕು. 94ಸಿ ಹಾಗೂ 94ಸಿಸಿಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಬಾಕಿ ಇರಿಸದೆ, ಶೀಘ್ರ ವಿಲೇವಾರಿ ಮಾಡಬೇಕು, ಪಿಎಂ-ಕುಸುಮ್ ಯೋಜನೆ ಅನುಸ್ಠಾನ ವರದಿ ಸೇರಿದಂತೆ ಮುಂದಿನ ವಾರದ ಸಭೆಯಷ್ಟರಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ಜಿಲ್ಲೆಯ ಪ್ರಗತಿಗೆ ಬೇಕಾದ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ, ಸೇರಿದಂತೆ ಮೊದಲಾದ ಅಧಿಕಾರಿಗಳು ಪ್ರಗತಿ ವರದಿಗಳ ಪ್ರಸ್ತುತಪಡಿಸಿ ಮಾತನಾಡಿದರು.
ಭೂ ದಾಖೆಲೆಗಳ ಉಪನಿರ್ದೇಶಕರು, ಎತ್ತಿನಹೊಳೆ ಭೂ ಸ್ವಾಧೀನಾಧಿಕಾರಿ ಎಂ.ಎನ್ ಮಂಜುನಾಥ್, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್, ತಹಸೀಲ್ದಾರ್(ಗ್ರೇಡ್-2) ಕಮಲಮ್ಮ, ರವಿತೇಜ ಡಿ.ಜಿ, ಸೇರಿದಂತೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.