ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡು ವೃದ್ಧ ತಾಯಿ ಹೊರಹಾಕಿದ್ದ ಮಕ್ಕಳು| ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಚಿಕ್ಕಹುಲ್ಲಾಳ ಗ್ರಾಮದ 82 ವೃದ್ಧೆಗೆ ಆಸ್ತಿ ಮರಳಿಸಿದ ಉಪವಿಭಾಗಾಧಿಕಾರಿ| ಮಕ್ಕಳಿಂದಲೇ ಹೊರಹಾಕಲ್ಪಟ್ಟಿದ್ದರಿಂದ ತನ್ನ ಪುತ್ರಿಯರ ಸಹಾಯದಿಂದ ಹಾವೇರಿ ನಗರದಲ್ಲಿರುವ ಸ್ವಾಧಾರ ಸಾಂತ್ವನ ಕೇಂದ್ರ ಸೇರಿದ್ದ ವೃದ್ಧೆ ಯಲ್ಲವ್ವ|
ಹಾವೇರಿ(ಸೆ.09): ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು, ಇಳಿವಯಸ್ಸಿನಲ್ಲಿ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿರುವುದನ್ನು ಸಮಾಜದಲ್ಲಿ ಎಲ್ಲೆಡೆ ಕಾಣುತ್ತೇವೆ. ಅದೇ ರೀತಿ ಇಲ್ಲೊಂದು ಪ್ರಕರಣದಲ್ಲಿ ತಾಯಿಯ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದ ಮಕ್ಕಳು ತಾಯಿಯನ್ನೇ ಹೊರಹಾಕಿದ್ದರು. ಮಕ್ಕಳು ಕಬಳಿಸಿದ್ದ ಆಸ್ತಿಯನ್ನು ಉಪವಿಭಾಗಾಧಿಕಾರಿಗಳು ಮರಳಿ ತಾಯಿ ಹೆಸರಿಗೆ ವರ್ಗಾವಣೆ ಮಾಡಿ ನ್ಯಾಯ ಕಲ್ಪಿಸಿದ್ದಾರೆ.
ಹಾನಗಲ್ಲ ತಾಲೂಕಿನ ಚಿಕ್ಕಹುಲ್ಲಾಳ ಗ್ರಾಮದ ಯಲ್ಲವ್ವ ಧರ್ಮಗೌಡ ಪಾಟೀಲ (82) ಅವರಿಗೆ ಇಳಿಯವಸ್ಸಿನಲ್ಲಿ ನ್ಯಾಯ ಸಿಕ್ಕಂತಾಗಿದೆ. ಅಲ್ಲದೇ ಆಸ್ತಿಗಾಗಿ ಹೆತ್ತವರನ್ನು ಶೋಷಣೆ ಮಾಡುವವರಿಗೆ ಎಚ್ಚರಿಕೆ ಸಂದೇಶ ಈ ಪ್ರಕರಣದಿಂದ ರವಾನೆಯಾಗಿದೆ.
undefined
ಚಿಕ್ಕಹುಲ್ಲಾಳ ಗ್ರಾಮದ ಯಲ್ಲವ್ವ ಪಾಟೀಲ ಅವರಿಗೆ ಪತಿಯ ಮರಣಾನಂತರ 6 ಎಕರೆ 23 ಗುಂಟೆ ಜಮೀನು ಬಂದಿತ್ತು. 2011-12ರಲ್ಲಿ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿಗೆ ತಲಾ ಒಂದು ಎಕರೆ ಹಂಚಿಕೊಂಡು, ತಾಯಿ ಯಲ್ಲವ್ವಳ ಹೆಸರಿಗೆ 2.23 ಎಕರೆ ಇಟ್ಟಿದ್ದರು. ಬಳಿಕ 2014-15ರಲ್ಲಿ ಇಬ್ಬರು ಪುತ್ರರು ತಾಯಿಯ ಹೆಸರಿನಲ್ಲಿದ್ದ ಜಮೀನಿನ ಹಕ್ಕನ್ನು ತಮಗೆ ಬಿಟ್ಟುಕೊಟ್ಟ ಬಗ್ಗೆ ಪತ್ರ ಮಾಡಿಸಿಕೊಂಡು ಎಲ್ಲ ಆಸ್ತಿಯನ್ನು ಮಕ್ಕಳು ಪಡೆದಿದ್ದರು. ಇಷ್ಟೆಲ್ಲ ಮಾಡಿ ತಾಯಿಯನ್ನು ಸರಿಯಾಗಿ ನೋಡಿಕೊಂಡಿದ್ದರೆ ಏನೂ ತೊಂದರೆಯಾಗುತ್ತಿರಲಿಲ್ಲ. ಆದರೆ, ಈ ಮಕ್ಕಳು ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡ ಮೇಲೆ ತಾಯಿಯನ್ನು ಹೊರಹಾಕಿದ್ದರು. ಈ ಬಗ್ಗೆ ಗ್ರಾಮದಲ್ಲಿ ರಾಜೀ ಪಂಚಾಯ್ತಿ ನಡೆಸಿದರೂ ತಾಯಿ ನೋಡಿಕೊಳ್ಳಲು ಪುತ್ರರು ಒಪ್ಪಿರಲಿಲ್ಲ.
ಶಿಗ್ಗಾಂವಿ: ಸೀಮೆಎಣ್ಣೆ ಬಿದ್ದು ಪತ್ನಿ ಸಾವು, ಪತಿಗೂ ಹೃದಯಾಘಾತ
ಆಸರೆಯಾದ ಸ್ವಾಧಾರ ಕೇಂದ್ರ:
ಮಕ್ಕಳಿಂದಲೇ ಹೊರಹಾಕಲ್ಪಟ್ಟಿದ್ದರಿಂದ ವೃದ್ಧೆ ಯಲ್ಲವ್ವ ತನ್ನ ಪುತ್ರಿಯರ ಸಹಾಯದಿಂದ ಹಾವೇರಿ ನಗರದಲ್ಲಿರುವ ಸ್ವಾಧಾರ ಸಾಂತ್ವನ ಕೇಂದ್ರ ಸೇರಿದಳು. ಮಕ್ಕಳು ಆಸ್ತಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ತನ್ನನ್ನು ಹೊರಹಾಕಿದ್ದಾರೆ ಎಂದು ಸ್ವಾಧಾರ ಕೇಂದ್ರದ ಪರಿಮಳಾ ಜೈನ್ ಅವರಲ್ಲಿ ಅಜ್ಜಿ ಹೇಳಿಕೊಂಡರು. ಪರಿಮಳಾ ಜೈನ್ ಅವರ ಮಾರ್ಗದರ್ಶನದಲ್ಲಿ ಸವಣೂರು ಉಪವಿಭಾಗಾಧಿಕಾರಿಗಳಿಗೆ ಈ ಕುರಿತು ದೂರು ನೀಡಲಾಯಿತು. ಈ ನಡುವೆ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿಯು ವೃದ್ಧೆಯ ಜೀವನ ನಿರ್ವಹಣೆಗೆ ಇಬ್ಬರೂ ಮಕ್ಕಳು ಪ್ರತಿ ತಿಂಗಳು ತಲಾ 5 ಸಾವಿರ ನೀಡುವಂತೆ ಆದೇಶಿಸಿತು. ಕೆಲ ತಿಂಗಳು ಮಾತ್ರ ಹಣ ನೀಡಿದ ಪುತ್ರರು ಬಳಿಕ ಅದನ್ನು ನಿಲ್ಲಿಸಿದರು. ಇದನ್ನು ಮತ್ತೆ
ಸವಣೂರು ಎಸಿ ಗಮನಕ್ಕೆ ವೃದ್ಧೆ ತಂದರು.
ದೂರು ಅರ್ಜಿ ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ ಅವರು ವೃದ್ಧೆ ಯಲ್ಲವ್ವಳ ಇಬ್ಬರೂ ಪುತ್ರರಿಗೆ ನೋಟಿಸ್ ಜಾರಿಮಾಡಿ ಉತ್ತರ ನೀಡುವಂತೆ ಸೂಚಿಸಿದ್ದರು. ಆದರೆ, ಮಕ್ಕಳಿಂದ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಪತಿ ಧರ್ಮಗೌಡ ಅವರಿಂದ ಬಂದಿರುವ 6.23 ಎಕರೆ ಕೃಷಿ ಜಮೀನನ್ನು ಮತ್ತೆ ಯಲ್ಲವ್ವಳ ಹೆಸರಿಗೆ ದಾಖಲಿಸಿ ಪಹಣಿ ಪತ್ರಿಕೆಯನ್ನು ನೀಡಿದ್ದಾರೆ. ಅಧಿಕಾರಿಗಳ ತ್ವರಿತ ಸ್ಪಂದನೆಯಿಂದ ಇಳಿವಯಸ್ಸಿನಲ್ಲಿರುವ ತಾಯಿಗೆ ನ್ಯಾಯ ಸಿಕ್ಕಿದೆ.
ಎಲ್ಲ ದೇವರ ಇಚ್ಛೆ. ನನಗೆ ಮರಳಿ ಆಸ್ತಿ ಸಿಗುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಪರಿಮಳಾ ಜೈನ್ ನನ್ನನ್ನು ಒಂದೂವರೆ ವರ್ಷ ಇಟ್ಟುಕೊಂಡು ಎಲ್ಲ ರೀತಿಯ ಧೈರ್ಯ ಹೇಳಿದ್ದರು. ನ್ಯಾಯಕ್ಕಾಗಿ ಹೋರಾಡಲು ಮಾರ್ಗದರ್ಶನ ಕೊಟ್ಟರು. ಇಳಿವಯಸ್ಸಿನಲ್ಲಿ ನನಗೆ ಇಂಥ ಪ್ರಕರಣವೆಲ್ಲ ಬೇಕಿತ್ತಾ? ಎಂದು ಮರಳಿ ಆಸ್ತಿ ಪಡೆದ ತಾಯಿ ಯಲ್ಲವ್ವ ಪಾಟೀಲ ಅವರು ತಿಳಿಸಿದ್ದಾರೆ.
ನಮ್ಮ ಸ್ವಾಧಾರ ಕೇಂದ್ರದಲ್ಲಿ ಒಂದೂವರೆ ವರ್ಷದಿಂದ ಯಲ್ಲವ್ವ ಇದ್ದರು. ಕೇಂದ್ರದಲ್ಲಿ ಹಿರಿಯಳಾಗಿ ಎಲ್ಲರೊಂದಿಗೆ ಬೆರೆತಿದ್ದರು. ಹೆರಿಗೆ ನೋವಿನ ಸಂದರ್ಭದಲ್ಲಿ ಸೂಲಗಿತ್ತಿಯಾಗಿ, ದೌರ್ಜನ್ಯಕ್ಕೊಳಗಾದ ಯುವತಿಯರಿಗೆ ಹಿರಿಯಳಾಗಿ ಧೈರ್ಯದ ಮಾತು ಹೇಳುತ್ತಿದ್ದರು. ಅಂಥ ಅಜ್ಜಿ ಅವರ ಮಕ್ಕಳ ವಿರುದ್ಧವೇ ನ್ಯಾಯಕ್ಕಾಗಿ ಹೋರಾಡುವಂತಾಯಿತು. ಅಜ್ಜಿಗೆ ನ್ಯಾಯ ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದು ಸ್ವಾಧಾರ ಕೇಂದ್ರದ ಮುಖ್ಯಸ್ಥೆ ಪರಿಮಳಾ ಜೈನ್ ಅವರು ಹೇಳಿದ್ದಾರೆ.