ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ 19 ಉಪ ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ದಸರಾ ಆಚರಣೆಯನ್ನು ಯಶಸ್ವಿಗೊಳಿಸಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೂಚಿಸಿದರು.
ಮೈಸೂರು (ಸೆ.05): ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ 19 ಉಪ ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ದಸರಾ ಆಚರಣೆಯನ್ನು ಯಶಸ್ವಿಗೊಳಿಸಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೂಚಿಸಿದರು. ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ದಸರಾ ಉಪ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಸಮಿತಿಯ ಅಧಿಕಾರಿಗಳು ಸೂಕ್ತ ತಯಾರಿ ಮಾಡಿಕೊಂಡು ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಬೇಕು.
ಸ್ತಬ್ಧಚಿತ್ರಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತೆ ಇರಬೇಕು. ಜನರಿಗೆ ಸಾಮಾಜಿಕ ಸಂದೇಶ ಸಾರುವಂತೆ ಇರಬೇಕು. ಸಂವಿಧಾನದ ಸಂದೇಶ, ಪೂರ್ವ ಪೀಠಿಕೆಯ ಮಹತ್ವವನ್ನು ತಿಳಿಸುವ ಸ್ಥಬ್ತಚಿತ್ರ ತಯಾರಿಕೆಗೆ ಮಾಡಬೇಕು ಎಂದರು. ರೈತರು ದೇಶದ ಬೆನ್ನೆಲುಬು. ರೈತ ದಸರಾದಲ್ಲಿ ರೈತರಿಗೆ ಅನುಕೂಲವಾಗುವ ಕೃಷಿ ಸಾಧನ ಸಲಕರಣೆಗಳ ಪ್ರದರ್ಶನ ಏರ್ಪಡಿಸಬೇಕು. ಸಬ್ಸಿಡಿ ದರದಲ್ಲಿ ದೊರೆಯುವ ಆಧುನಿಕ ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ಒದಗಿಸಬೇಕು. ಶುಂಠಿ ಬೆಳೆಯನ್ನು ಬೆಳೆಯಲು ರೈತರು ಭೂಮಿಯನ್ನು ಗುತ್ತಿಗೆಗೆ ನೀಡುತ್ತಿದ್ದು, ಶುಂಠಿ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆ ಆಗಿ ಮುಂದಿನ ಒಂದೆರಡು ವರ್ಷ ಉತ್ತಮ ಬೆಳೆ ಬರುವುದಿಲ್ಲ. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಪುರುಷರ ಹೊರೆ ಇಳಿಕೆ: ಸಚಿವ ಮಂಕಾಳು ವೈದ್ಯ
ದಸರಾ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಾರೆ. ಇವರಿಗೆ ಉತ್ತಮ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು. ಜನಪದ ಕಲೆಗಳನ್ನು ಪ್ರದರ್ಶನ ಮಾಡಬೇಕು. ಕಲಾವಿದರಿಗೆ ಪಾರದರ್ಶಕವಾಗಿ ಅವಕಾಶ ಕಲ್ಪಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜನೆ ಮಾಡಬೇಕು.
ಕರಕುಶಲ ವಸ್ತುಗಳ ಸ್ಪರ್ಧೆಯನ್ನು ಏರ್ಪಡಿಸಬೇಕು. ಕವಿಗೋಷ್ಠಿಯನ್ನು ವಿಶಿಷ್ಟ ರೀತಿಯಲ್ಲಿ ಆಯೋಜನೆ ಮಾಡಿ, ಯುವ ಕವಿಗಳಿಗೆ ಆದ್ಯತೆ ನೀಡಬೇಕು. ಯೋಗ ದಸರಾದಲ್ಲಿ ಆರೋಗ್ಯಯುತ ಜೀವನಕ್ಕಾಗಿ ಯೋಗ ಎಂಬ ಅರಿವನ್ನು ಮೂಡಿಸುವ ಹಾಗೆ ಇರಬೇಕು. ಆಹಾರ ಮೇಳದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಗುಣಮಟ್ಟದ ತಿಂಡಿ ತಿನಿಸುಗಳ ಮಾರಾಟವಾಗಬೇಕು ಎಂದರು. ನಗರದ ರಸ್ತೆಗಳ ಗುಂಡಿಗಳ ಮುಚ್ಚುವ ಕಾರ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕು. ದಸರಾ ಚಲನಚಿತ್ರೋತ್ಸವದಲ್ಲಿ ಸಾಮಾಜಿಕ ಕಳಕಳಿಯುಳ್ಳ ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳ ಉಪ ವಿಶೇಷಾಧಿಕಾರಿಗಳು ತಾವು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಡಿಸಿಎಫ್ ಡಾ.ಕೆ.ಎನ್. ಬಸವರಾಜು ಮೊದಲಾದವರು ಇದ್ದರು.
ಸತೀಶ್ ಜಾರಕಿಹೊಳಿ ಹೈಕಮಾಂಡ್ ಭೇಟಿಯಲ್ಲಿ ವಿಶೇಷವಿಲ್ಲ: ಸಚಿವ ಎನ್.ಎಸ್.ಬೋಸರಾಜು
ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ದಸರಾ ಆಚರಣೆ ಕುರಿತು ಸಭೆಗಳನ್ನು ಮಾಡುತ್ತಾ ಬಂದಿದ್ದೇವೆ. ಈಗ 19 ಉಪ ಸಮಿತಿಗಳ ತಂಡದೊಂದಿಗೆ ಸಭೆ ಮಾಡಿದ್ದೇನೆ. ಅದ್ಧೂರಿ ದಸರಾ ಆಚರಣೆಗೆ ಬೇಕಾದ ಎಲ್ಲಾ ರೂಪುರೇಷೆಗಳನ್ನು ಸಿದ್ಧ ಮಾಡುತ್ತಿದ್ದೇವೆ. ಕಳೆದ ಬಾರಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಈ ಬಾರಿ ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಲು ಸಿದ್ಧತೆ ನಡೆಯುತ್ತಿದೆ. ದಸರಾ ಉದ್ಘಾಟಕರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ದಸರಾ ಉದ್ಘಾಟಕರು ಯಾರು? ಎಂದು ತೀರ್ಮಾನ ಮಾಡುವುದನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದೇವೆ.
-ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು