ಜಿಲ್ಲೆಯಲ್ಲಿ ಕಳೆದ ಐದು ತಿಂಗಳಿನಿಂದ ಭಾರೀ ಗಾಳಿ ಮಳೆ ಸುರಿದಿದ್ದು ಗೊತ್ತೇ ಇದೆ. ತೀವ್ರ ಮಳೆಯಿಂದಾಗಿ ಸಾರ್ವಜನಿಕರ ಆಸ್ತಿ, ಪಾಸ್ತಿಗಳಿಗೂ ಸಾಕಷ್ಟು ನಷ್ಟವಾಗಿದೆ. ಇದರ ಜೊತೆಗೆ ಭೀಕರವಾಗಿ ಸುರಿದ ಗಾಳಿ ಮಳೆಗೆ ಅತೀ ಹೆಚ್ಚು ನಷ್ಟವಾಗಿದ್ದು ಎಂದರೆ ಅದು ಕೆಇಬಿ ಇಲಾಖೆಗೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಸೆ.05): ಜಿಲ್ಲೆಯಲ್ಲಿ ಕಳೆದ ಐದು ತಿಂಗಳಿನಿಂದ ಭಾರೀ ಗಾಳಿ ಮಳೆ ಸುರಿದಿದ್ದು ಗೊತ್ತೇ ಇದೆ. ತೀವ್ರ ಮಳೆಯಿಂದಾಗಿ ಸಾರ್ವಜನಿಕರ ಆಸ್ತಿ, ಪಾಸ್ತಿಗಳಿಗೂ ಸಾಕಷ್ಟು ನಷ್ಟವಾಗಿದೆ. ಇದರ ಜೊತೆಗೆ ಭೀಕರವಾಗಿ ಸುರಿದ ಗಾಳಿ ಮಳೆಗೆ ಅತೀ ಹೆಚ್ಚು ನಷ್ಟವಾಗಿದ್ದು ಎಂದರೆ ಅದು ಕೆಇಬಿ ಇಲಾಖೆಗೆ. ಹೌದು ಭಾರೀ ಮಳೆಯಿಂದ ಸಾವಿರಾರು ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ ಪೆಟ್ಟಿಗೆಗಳು ಮುರಿದು ಬಿದ್ದಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ ಬರೋಬ್ಬರಿ 4.83 ಕೋಟಿ ರೂಪಾಯಿ ವಿದ್ಯುತ್ ಇಲಾಖೆಗೆ ನಷ್ಟವಾಗಿದೆ. ಕಳೆದ ವರ್ಷವೂ ಜಿಲ್ಲೆಯಲ್ಲಿ ಕೆಇಬಿ ಇಲಾಖೆಗೆ ನಷ್ಟವಾಗಿತ್ತು. ಆದರೆ ವಾಡಿಕೆಯಷ್ಟು ಕೂಡ ಮಳೆ ಇರಲಿಲ್ಲ.
ಆದರೂ ಕಳೆದ ವರ್ಷ 1912 ವಿದ್ಯುತ್ ಕಂಬಗಳು ಮುರಿದು ಬಿದ್ದದ್ದವು. ಇದರಿಂದಾಗಿ ಎರಡುವರೆ ಕೋಟಿಯಷ್ಟು ವಿದ್ಯುತ್ ಇಲಾಖೆಗೆ ನಷ್ಟವಾಗಿತ್ತು. ಆದರೆ ಈ ಬಾರಿ ಬರೋಬ್ಬರಿ 3077 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದಾಗಿ 4 ಕೋಟಿ 83 ಲಕ್ಷ ರೂಪಾಯಿ ನಷ್ಟವಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎರಡುಪಟ್ಟು ಜಾಸ್ತಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಂದರೆ ಕಳೆದ ವರ್ಷ ಮಳೆ ಕಡಿಮೆ ಇದ್ದಿದ್ದರಿಂದ ಗಾಳಿಯೂ ಕಡಿಮೆ ಇತ್ತು. ಇದರಿಂದಾಗಿ ವಿದ್ಯುತ್ ಕಂಬಗಳು ಕಡಿಮೆ ಸಂಖ್ಯೆಯಲ್ಲಿ ಮುರಿದು ಬಿದ್ದಿದ್ದವು. ಆದರೆ ಈ ವರ್ಷ ವಿಪರೀತ ಮಳೆಯಿತ್ತು.
ಮಳೆಯ ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಭೀಕರ ಗಾಳಿ ಇದ್ದರಿಂದ ದೊಡ್ಡ ದೊಡ್ಡ ಮರಗಳು ಧರೆಗೆ ಉರುಳಿದ್ದವು. ಒಂದು ಮರ ಉರುಳಿ ಬಿದ್ದರೆ ಅದರ ಸುತ್ತಮುತ್ತಲಿನ ಹತ್ತರಿಂದ ಹನ್ನೆರಡು ವಿದ್ಯುತ್ ಕಂಬಗಳು ಉರುಳಿ ಬಿದ್ದವು. ಅದರಲ್ಲೂ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಯಲ್ಲೇ ಅತೀ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ 3,027 ವಿದ್ಯುತ್ ಕಂಬಗಳನ್ನು ಪುನಃ ಹಾಕಲಾಗಿದ್ದು, ಇನ್ನು 30 ವಿದ್ಯುತ್ ಕಂಬಗಳನ್ನು ಹಾಕುವ ಕೆಲಸ ಇನ್ನೂ ಬಾಕಿ ಇದೆ. ಇದರಿಂದಾಗಿ ಮಳೆ ಕಡಿಮೆಯಾಗಿದ್ದರೂ ಇಂದಿಗೂ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಅಂದರೆ ಕೆಲವೆಡೆ ಈಗಾಗಲೇ ಗದ್ದೆಗಳಲ್ಲಿ ಉಳುಮೆ ಮಾಡಿ ಭತ್ತ ನಾಟಿ ಮಾಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಪುರುಷರ ಹೊರೆ ಇಳಿಕೆ: ಸಚಿವ ಮಂಕಾಳು ವೈದ್ಯ
ಈ ಸ್ಥಳಗಳಲ್ಲಿ ವಿದ್ಯುತ್ ಕಂಬಗಳನ್ನು ನೆಡುವುದು ಕಷ್ಟದ ಕೆಲಸವಾಗಿದೆ ಎಂದು ಕೆಇಬಿ ಕಾರ್ಯಪಾಲಕ ಇಂಜಿನಿಯರ್ ಅನಿತಾ ಬಾಯಿ ಹೇಳಿದ್ದಾರೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಆಗಿರಬಹುದು ಅಥವಾ ಟ್ರಾನ್ಸ್ಫಾರ್ಮರ್ ಪೆಟ್ಟಿಗೆಗಳು ಹಾಳಾಗಿವೆ. ಅವುಗಳೆಲ್ಲವನ್ನೂ ತುಂಬಾ ವೇಗವಾಗಿ ಮರುಸ್ಥಾಪಿಸುವ ಕೆಲಸವನ್ನು ಕೆಇಬಿ ಇಲಾಖೆ ಸಿಬ್ಬಂದಿ ಮಾಡಿದ್ದಾರೆ. ಜೊತೆಗೆ ನಷ್ಟವಾಗಿರುವುದಕ್ಕೆ ಸಂಬಂಧಿಸಿದಂತೆ ವರದಿಯನ್ನು ಕೊಟ್ಟಿದ್ದಾರೆ. ಇದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕೊಡಗು ಜಿಲ್ಲೆಯಲ್ಲಿ ಕೆಇಬಿ ಇಲಾಖೆ ಇಷ್ಟೊಂದು ನಷ್ಟ ಅನುಭವಿಸಿದೆ.