ಬದುಕಿನ ಜತೆಗೆ ಶಾಲಾ ಪುಸ್ತಕವೂ ನೀರು ಪಾಲು!

By Web DeskFirst Published Aug 18, 2019, 11:44 AM IST
Highlights

ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಜನಜೀವನವನ್ನು ಅತ್ಯಂತ ದುಸ್ಥಿತಿಗೆ ತಳ್ಳಿದೆ.  ವಿದ್ಯಾರ್ಥಿಗಳು ಪುಸ್ತಕವೂ ಇಲ್ಲದೇ ಪರದಾಡುವ ಸ್ಥಿತಿಗೆ ಬಂದಿದ್ದಾರೆ. 

 ಮಲ್ಲಿಕಾರ್ಜುನ ಸಿದ್ದಣ್ಣವರ

 ಹುಬ್ಬಳ್ಳಿ  [ಆ.18]:  ನಾಲ್ಕಾರು ದಿನಗಳಿಂದ ಸ್ನಾನ ಕಂಡಿರದ ಮೈ, ಕೆದರಿದ ತಲೆ, ಬಾಡಿದ ಮುಖ, ಹರಕು ಬಟ್ಟೆ, ಚಪ್ಪಲಿ ಇಲ್ಲದ ಕಾಲು, ಬ್ಯಾಗ್‌ ಇರಲಿ ಒಂದೇ ಒಂದು ಪುಸ್ತಕವೂ ಇಲ್ಲದೇ ಬರಿಗೈಲೀ ಶಾಲೆಗೆ ಬರುತ್ತಿರುವ ಚಿಣ್ಣರು...!

ಇದು ಪ್ರವಾಹದಿಂದ ಉಕ್ಕಿ ಹರಿದ ನದಿಪಾತ್ರದ ಸರ್ಕಾರಿ ಶಾಲೆಗಳಲ್ಲಿನ ಚಿತ್ರಣ. ಪ್ರವಾಹ ಇಲ್ಲಿನ ಜನರ ಬದುಕನ್ನು ಮಾತ್ರವಲ್ಲ, ಅವರ ಮಕ್ಕಳ ಓದಿನ ಹಕ್ಕನ್ನೂ ಕಸಿದುಕೊಂಡಿದೆ. ಪ್ರವಾಹ ಇಳಿಮುಖವಾದ ಬಳಿಕ ಇದೀಗ ಶಾಲೆಗಳು ಪುನಾರಂಭಗೊಂಡಿದೆ. ಆದರೆ, ಸಮವಸ್ತ್ರ, ಸ್ಕೂಲ್‌ಬ್ಯಾಗ್‌, ಪುಸ್ತಕ ಎಲ್ಲವನ್ನೂ ಉಕ್ಕೇರಿದ ನೆರೆ ಆಪೋಷನ ಮಾಡಿದ್ದರಿಂದ, ಸಂತ್ರಸ್ತರ ಮಕ್ಕಳಲ್ಲಿ ಬಹುತೇಕರು ಬರಿಗೈಲೇ ಶಾಲೆಗೆ ಬರುತ್ತಿದ್ದಾರೆ. ಪ್ರವಾಹದ ನೀರು ಹೊಕ್ಕು ಕೆಸರುಮಯ ಆಗಿರುವ ಶಾಲೆಗಳ ಸ್ವಚ್ಛತಾ ಕಾರ್ಯ ನಡೆಯುತ್ತಿರುವ ಕಾರಣ, ಮಕ್ಕಳು ಹಿಂಡು ಹಿಂಡಾಗಿ ಶಾಲೆಯ ಸುತ್ತಮುತ್ತ ಕೂತು ಕಾಲ ಕಳೆಯುತ್ತಿದ್ದಾರೆ. ಶಾಲಾ ಕೊಠಡಿಗಳು ಗಲೀಜು ಆಗಿರುವುದರಿಂದ ಶಿಕ್ಷಕರಿಗೆ ಪಾಠ ಹೇಳಲು ಕಷ್ಟವಾಗುತ್ತಿದೆ. ಪಠ್ಯಪುಸ್ತಕ ಇಲ್ಲದ ಕಾರಣ ಮಕ್ಕಳಿಗೆ ಓದಲು, ಬರೆಯಲೂ ಆಗುತ್ತಿಲ್ಲ. ಹಾಜರಿ ಹಾಕಿ, ಬಿಸಿಯೂಟ ಉಂಡು, ಸಮಯ ಕಳೆದು ಮನೆಗೆ ತೆರಳುತ್ತಿದ್ದಾರೆ. ಇಷ್ಟರ ಮಟ್ಟಿಗೆ ಪ್ರವಾಹ ಈ ಮಕ್ಕಳ ಓದಿಗೆ ಕಲ್ಲು ಹಾಕಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೊಸ ಬುಕ್‌ ಸದ್ಯಕ್ಕೆ ಕಷ್ಟ

ಸರ್ಕಾರಿ ಶಾಲೆಯ ಮಕ್ಕಳಿಗೆ ಸದ್ಯಕ್ಕೆ ಪಠ್ಯಪುಸ್ತಕ ಸಿಗುವುದು ಸದ್ಯ ದುರ್ಲಭ. ಆಯಾ ವರ್ಷಕ್ಕೆ ಆಗುವಷ್ಟುಪುಸ್ತಕಗಳು ಮಾತ್ರ ಸರ್ಕಾರಿ ಮುದ್ರಣಾಲಯದಲ್ಲಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಟೆಂಡರ್‌ ನೀಡಿ ಮುದ್ರಿಸಿ ಹಂಚಬೇಕಾದರೆ ಕನಿಷ್ಠ ಒಂದು ತಿಂಗಳಾದರೂ ಬೇಕು ಎನ್ನುತ್ತಾರೆ ಅಧಿಕಾರಿಗಳು.

ಟೆಂಡರ್‌ ನೀಡದೇ ಸಮವಸ್ತ್ರ, ಸೈಕಲ್‌ ಕೊಡಲು ಆಗುವುದಿಲ್ಲ. ಬೂಟುಗಳನ್ನು ಮಾತ್ರ ಆಯಾ ಎಸ್‌ಡಿಎಂಸಿ ಖರೀದಿಸುತ್ತದೆ. ಆದರೆ ತಕ್ಷಣಕ್ಕೆ ಸರ್ಕಾರ ಎಸ್‌ಡಿಎಂಸಿಗೆ ಹಣ ನೀಡಬೇಕು. ಈಗ ಸಂತ್ರಸ್ತರನ್ನು ಸಂತೈಸುವುದೇ ಸರ್ಕಾರಕ್ಕೆ ಹರಸಾಹಸ ಆಗಿರುವಾಗ ಈ ಮಕ್ಕಳ ಬೂಟಿಗೆ ಸ್ಪಂದಿಸುವುದು ಕಷ್ಟಸಾಧ್ಯ. ಕೆಲವು ಎನ್‌ಜಿಒಗಳು ಸ್ಕೂಲ್‌ ಬ್ಯಾಗ್‌, ನೋಟ್‌ಬುಕ್‌ ನೀಡುವ ಭರವಸೆ ನೀಡಿವೆ. ಈ ಭರವಸೆಯನ್ನೇ ನಂಬಿರುವ ಸರ್ಕಾರ ಏನು ಮಾಡುತ್ತದೋ ಕಾದು ನೋಡಬೇಕಿದೆ.

ನಮ್ಮ ವ್ಯಾಪ್ತಿಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕ, ಬ್ಯಾಗ್‌, ಸಮವಸ್ತ್ರ ಅಗತ್ಯವಿರುವ ಪಟ್ಟಿಯನ್ನು ರಾಜ್ಯ ಕಚೇರಿಗೆ ನೀಡಿದ್ದೇವೆ. ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅವುಗಳನ್ನು ಸರ್ಕಾರವೇ ನೀಡಬೇಕು. ಕೆಲವಷ್ಟು ಎನ್‌ಜಿಒಗಳು ಸ್ಕೂಲ್‌ ಬ್ಯಾಗ್‌, ನೋಟ್‌ಬುಕ್‌ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿವೆ. ಅವರು ಕೊಟ್ಟರೆ ಮಾತ್ರ ಮಕ್ಕಳಿಗೆ ವಿತರಿಸುತ್ತೇವೆ, ಇಲ್ಲದಿದ್ದರೆ ಸದ್ಯಕ್ಕೆ ಇಲ್ಲ.

- ಎನ್‌.ನಂಜುಂಡಯ್ಯ, ಬಿಇಒ ರೋಣ

ನನ್‌ ಪಾಟೀ ಚೀಲಾ, ಪುಸ್ತಕ್‌, ಯುನಿಫಾರ್ಮು ಎಲ್ಲಾ ನೀರಾಗ್‌ ಹೋಗ್ಯಾವ್ರಿ. ಇರೋ ಬಟ್ಟಿನ ಹಾಕೊಂಡ್‌ ಸಾಲಿಗೆ ಬಂದೀನಿ. ಸಾಲಾಗೂ ನೀರು ಹೊಕ್‌ ರೊಜ್ಜಾಗೈತಿ, ತೊಳಿಯಾಕತ್ಯಾರ. ಹೊರಗ ಆಟಾ ಆಡೀವಿ, ಊಟಾ ಕೊಟ್ಟಾರ. ಪಾಠಾ ಇನ್ನೂ ಚಾಲೂ ಆಗಿಲ್ಲ. ಓದಾಕ ಬರಿಯಾಕ ನಮಗ್‌ ಪುಸ್ತಕಾ-ನೋಟ್‌ಬುಕ್‌ ಏನೂ ಇಲ್ದಂಗ್‌ ಆಗೈತಿ. ಯಾವಾಗ್‌ ಕೊಡ್ತಾರೋ ಗೊತ್ತಿಲ್ಲ.

- ಐಶ್ವರ್ಯ ದೊಡ್ಡಮನಿ, 6ನೇ ತರಗತಿ ವಿದ್ಯಾರ್ಥಿನಿ

click me!