
ಬಂಟವಾಳ: ಒಂದೇ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ದೀಪಿತ್ ಶೆಟ್ಟಿ ಬಂಟವಾಳ ತಾಲೂಕಿನ ಕ್ರೀಡಾ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಬಂಟವಾಳ ತಾಲೂಕಿನ 17ರ ವಯೋಮಾನದ ಪ್ರೌಢಶಾಲಾ ಬಾಲಕ-ಬಾಲಕಿಯರು ಹಾಗೂ 14ರ ವಯೋಮಾನದ ಬಾಲಕ-ಬಾಲಕಿಯರ ಕ್ರೀಡಾಕೂಟ ಆ.1 ಮತ್ತು 2ರಂದು ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ ಎಸ್.ವಿ.ಎಸ್. ಅನುದಾನಿತ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ದೀಪಿತ್ ಶೆಟ್ಟಿ 800 ಮೀಟರ್ ಹಾಗೂ 1500 ಮೀಟರ್ ಓಟ, 400 ಮೀಟರ್ ಅಡೆತಡೆ ಓಟದಲ್ಲಿ ಚಿನ್ನದ ಪದಕ ಗೆದ್ದು ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದರು. ಅಲ್ಲದೆ 4*100 ಮೀಟರ್ ರಿಲೇಯಲ್ಲಿ ಚಿನ್ನ ಗೆಲ್ಲುವ ಮೂಲಕ ಐದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ತಾಲೂಕು ಮಟ್ಟದ ಕ್ರೀಡಾಕೂಟವೊಂದರಲ್ಲಿ ವೈಯಕ್ತಿಕವಾಗಿ ಒಬ್ಬ ವಿದ್ಯಾರ್ಥಿ ಐದು ಚಿನ್ನದ ಪದಕಗಳನ್ನು ಗೆದ್ದಿರುವುದು ಬಂಟವಾಳ ತಾಲೂಕಿನ ಕ್ರೀಡಾ ಇತಿಹಾಸದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಯೊಂದಿಗೆ ಬಾಲವಿಕಾಸ ವಿದ್ಯಾಸಂಸ್ಥೆಯು 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಶಿಪ್ ಗೆದ್ದುಕೊಂಡಿದೆ.
ಬಾಲವಿಕಾಸ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಸುಚಿತ್ರಾ ಎಸ್. ಶೆಟ್ಟಿ ದಂಪತಿಯ ಪುತ್ರ ದೀಪಿತ್ ನ ಈ ಯಶಸ್ಸಿನ ಹಿಂದೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ದಿನಕರ ಪೂಜಾರಿ, ಸೌಮ್ಯ ಅವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ. ಶಾಲಾ ಸಂಚಾಲಕರು ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಹ್ಲಾದ ಶೆಟ್ಟಿ ಅವರ ಪ್ರೋತ್ಸಾಹವೂ ಈ ಕ್ರೀಡಾ ಪ್ರತಿಭೆಯ ಬೆಳವಣಿಗೆಗೆ ನೆರವಾಗಿದೆ. ದೀಪಿತ್ ಸಾಧನೆಗೆ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸುಪ್ರಿಯಾ ಡಿ. ಅಭಿನಂದನೆ ಸಲ್ಲಿಸಿದ್ದಾರೆ.