ಮೈಸೂರು ರಾಜರ ರತ್ನಖಚಿತ ಸಿಂಹಾಸನದಲ್ಲಿವೆ 6 ಭಾಗಗಳು; ಚಿನ್ನ, ಮುತ್ತು, ರತ್ನಗಳು ಎಷ್ಟಿವೆ ಗೊತ್ತಾ?

Sathish Kumar KH   | Kannada Prabha
Published : Oct 05, 2026, 10:25 AM IST
mysuru dasara golden throne

ಸಾರಾಂಶ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಸಂಪ್ರದಾಯದಂತೆ ನಡೆಯಲಿದೆ. ಅಕ್ಟೋಬರ್ 11 ರಿಂದ 21 ರವರೆಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಪ್ರವಾಸಿಗರಿಗೆ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ವರದಿ - ಬಿ. ಶೇಖರ್‌ ಗೋಪಿನಾಥಂ

ಮೈಸೂರು (ಅ.05) ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯ ಖಾಸಗಿ ದರ್ಬಾರ್ ಹಾಲ್‌ ನಲ್ಲಿ ಸಂಪ್ರದಾಯದಂತೆ ರಾಜವಂಶಸ್ಥರು ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅ.11 ರಿಂದ 21 ರವರೆಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಇದಕ್ಕಾಗಿ ರತ್ನಖಚಿತ ಸಿಂಹಾಸನವನ್ನು ಜೋಡಣೆ ಕಾರ್ಯವು ಅ.5 ರಂದು ಸಂಪ್ರದಾಯದಂತೆ ಜರುಗಲಿದೆ.

ಮೊದಲು ಸಿಂಹಾಸನದ ಬಿಡಿ ಭಾಗಗಳನ್ನು ಖಜಾನೆಯಿಂದ ಹೊರ ತೆಗೆದು ಪೂಜೆ ಸಲ್ಲಿಸಿ, ನಂತರ ಅಧಿಕಾರಿಗಳ ಸಮ್ಮುಖ ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಮರದ ಕಾಲಾವಧಿ ಕಟ್ಟಿ ಅದರ ಆಧಾರದ ಮೇಲೆ ನಿಂತು ಸಿಂಹಾಸನವನ್ನು ಖಾಸಗಿ ದರ್ಬಾರ್ ಹಾಲ್‌ ನಲ್ಲಿ ಜೋಡಿಸಲಾಗುತ್ತದೆ.

ಸಂಪ್ರದಾಯದಂತೆ ಮೈಸೂರು ತಾಲೂಕಿನ ಗೆಜ್ಜಗಳ್ಳಿ ಗ್ರಾಮದ ವೀರಶೈವರು ಮಡಿ ಬಟ್ಟೆ ತೊಟ್ಟು ದೇವರಿಗೆ ಕೈಮುಗಿದು, ಸಿಂಹಾಸನದ 6 ಭಾಗಗಳನ್ನು ತಂದು ಅಂಬಾವಿಲಾಸ ರತ್ನಗಂಬಳಿಯ ಮೇಲೆ 15 ಅಡಿ ಅಗಲ ಮತ್ತು ಉದ್ದವಿರುವ ಜಾಗದಲ್ಲಿ ಕೂರ್ಮಾವತಾರ ಆಸನವನ್ನು ಜೋಡಿಸಿ, ಕಾಲುಗಳನ್ನು ಅಳವಡಿಸುವರು. ನಂತರ ಪುರೋಹಿತರು ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಬಿಳಿ ಬಟ್ಟೆಯಿಂದ ಮುಚ್ಚುತ್ತಾರೆ.

ರತ್ನಖಚಿತ ಸಿಂಹಾಸನವನ್ನು 8 ಬೆಳ್ಳಿಯ ಭದ್ರಾಸನವನ್ನು, 6 ಬಿಡಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸಿಂಹಾಸನದ ಬಿಡಿಭಾಗ, ಭದ್ರಾಸನ ಜೋಡಿಸಿದ ಬಳಿಕ ಸಿಂಹಾಸನಕ್ಕೆ ಉಮಾಪಕ್ಷಿ, ಮುತ್ತಿನ ಜಾಲರಿ, ಮಕರ ತೋರಣ, 25 ಜೊತೆ ನಗಗಳು, 1 ಜೊತೆ ಚಿನ್ನದ ಕುದುರೆ, ತುರಾಯಿ ಜೋಡಿ, 1 ಜೊತೆ ಚಿನ್ನದ ಕಳಶ ಜೋಡಿಸಿ ಅಲಂಕರಿಸಲಾಗುತ್ತದೆ. ಇದರ ಬಿಡಿ ಭಾಗಗಳನ್ನು ಜೋಡಿಸಿ ಅದಕ್ಕೆ ಸಿಂಹದ ಮುಖವನ್ನು ಅಳವಡಿಸಿದಾಗ ಸಿಂಹಾಸನ ಜೋಡಣೆ ಕಾರ್ಯವು ಪೂರ್ಣಗೊಳ್ಳುತ್ತದೆ. ಸಿಂಹಾಸನದ ಜೋಡಣೆ ಕಾರ್ಯವು ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರ ಖುದ್ದು ಮಾರ್ಗದರ್ಶನದಲ್ಲಿ ನಡೆಯುತ್ತದೆ.

ಯದುವೀರ್ ಖಾಸಗಿ ದರ್ಬಾರ್

ಅ.11 ರಿಂದ 21 ರವರೆಗೆ ದಸರಾ ಮಹೋತ್ಸವ ವೇಳೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನದಲ್ಲಿ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ದಸರ ಮುಗಿದ ನಂತರ ಸಂಪ್ರದಾಯದಂತೆ ಗೆಜ್ಜಗಳ್ಳಿ ವೀರಶೈವರೇ ಈ ಸಿಂಹಾಸನವನ್ನು ಬಿಡಿಭಾಗಗಳನ್ನು ನ.19 ರಂದು ವಿಸರ್ಜಿಸಿ, ಮೂಲ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇರಿಸುತ್ತಾರೆ. ಸಿಂಹಾಸನ ಇರಿಸಲಾಗುವ ಖಾಸಗಿ ದರ್ಬಾರ್ ಹಾಲ್‌ ನಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗುತ್ತದೆ.

ದರ್ಬಾರ್- ರಾಜವಂಶಸ್ಥರ ಸಂಪ್ರದಾಯ

ನವರಾತ್ರಿಗೂ ಮುನ್ನ ಭದ್ರತಾ ಕೊಠಡಿಯಲ್ಲಿರಿಸಿದ್ದ ರತ್ನಖಚಿತ ಸಿಂಹಾಸನದ ಬಿಡಿ ಭಾಗಗಳನ್ನು ಹೊರತಂದು ಅದನ್ನು ಜೋಡಿಸಿ ಸಂಪ್ರದಾಯಬದ್ಧ ಪೂಜೆ ಬಳಿಕ ವಿಜಯದಶಮಿಯ ಎಲ್ಲಾ ಕಾರ್ಯಕ್ರಮಗಳನ್ನು ನೆರವೇರಿಸುವುದು ಮೈಸೂರು ರಾಜವಂಶಸ್ಥರ ಸಂಪ್ರದಾಯವಾಗಿದೆ.

ದಸರಾ ವೇಳೆ ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದು, ದರ್ಬಾರ್ ಹಾಲ್‌ ನಲ್ಲಿ ರತ್ನ ಖಚಿತ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ಹೀಗಾಗಿ, ದಸರಾ ಮಹೋತ್ಸವದ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗಲೇ ಶಾಸ್ತ್ರೋಕ್ತವಾಗಿ ವಿಧಿ ವಿಧಾನದಂತೆ ಸಿಂಹಾಸನ ಜೋಡಿಸಿ ಖಾಸಗಿ ದರ್ಬಾರ್‌ ಗೆ ಸಿದ್ಧತೆ ಮಾಡಲಾಗಿದೆ.

ಕೆಲವು ದಿನ ಅರಮನೆ ಪ್ರವೇಶಕ್ಕೆ ನಿರ್ಬಂಧ

ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ದಸರಾ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸುವುದರಿಂದ ಅರಮನೆ ಒಳಾವರಣವನ್ನು ವೀಕ್ಷಣೆ ಮಾಡುವ ಪ್ರವಾಸಿಗರಿಗೆ ಮೈಸೂರು ಅರಮನೆ ಮಂಡಳಿ ನಿರ್ಬಂಧ ವಿಧಿಸುತ್ತದೆ. ಸಿಂಹಾಸನ ಜೋಡಣೆ ಪ್ರಯುಕ್ತ ಅ.5ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಹಾಗೆಯೇ, ಖಾಸಗಿ ದರ್ಬಾರ್ ಪ್ರಯುಕ್ತ ಅ.11ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧ ಪೂಜೆ ಪ್ರಯುಕ್ತ ಅ.20 ಸಂಪೂರ್ಣ ದಿನ ಪ್ರವೇಶ ಇರುವುದಿಲ್ಲ. ಹಾಗೆಯೇ, ವಿಜಯದಶಮಿಯ ಪ್ರಯುಕ್ತ ಅ.21 ರಂದು ಸಂಪೂರ್ಣ ದಿನ ಅರಮನೆಗೆ ಪ್ರವೇಶ ಇರುವುದಿಲ್ಲ. ದಸರಾ ಪಾಸ್ ಮತ್ತು ಟಿಕೆಟ್ ಇದ್ದವರಿಗೆ ಮಾತ್ರ ಅರಮನೆ ಆವರಣಕ್ಕೆ ಪ್ರವೇಶ ಇರುತ್ತದೆ. ಅಂತಿಮವಾಗಿ ಸಿಂಹಾಸನ ವಿಸರ್ಜನೆ ಪ್ರಯುಕ್ತ ನ.19ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಅರಮನೆಗೆ ಪ್ರವೇಶ ಇರಿವುದಿಲ್ಲ.

PREV
Read more Articles on
click me!

Recommended Stories

Bengaluru Karwar Vande Bharat Express: ವಂದೇ ಭಾರತ್ ಮಾರ್ಗ, ಕರಾವಳಿಯಲ್ಲಿ ಭುಗಿಲೆದ್ದ ಹೊಸ ವಿವಾದ!
ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡಿದ ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್!