ಪುಷ್ಪಲತಾಗೆ ಜಿಪಂ ಸಿಇಒ, ಕವಲೇಶ್ವರಿಗೆ ಜಿಪಂ ಉಪಾಧ್ಯಕ್ಷೆ ಕುರ್ಚಿ| ಅತಿಥಿ ಮುಖ್ಯಕಾರ್ಯನಿರ್ವಾಹಕ ಹುದ್ದೆಯ ಪ್ರಭಾರ ನೀಡುವ ಮೂಲಕ ವಿದ್ಯಾರ್ಥಿನಿಯರ ಐಎಎಸ್ ಕನಸಿಗೆ ಪ್ರೇರಣೆ| ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ಒಂದು ದಿನದ ಮಟ್ಟಿಗೆ ಅಧಿಕಾರ ಹಸ್ತಾಂತರ|
ಬಳ್ಳಾರಿ(ಫೆ.01): ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಸಿರುಗುಪ್ಪದ ಆದರ್ಶ ಮಹಾವಿದ್ಯಾಲಯದ ವಿದ್ಯಾರ್ಥಿನಿ ಎಂ. ಪುಷ್ಪಲತಾ ಅವರಿಗೆ ಜಿಪಂ ಸಿಇಒ ಕೆ.ಆರ್. ನಂದಿನಿ ಒಂದು ದಿನ ತಮ್ಮ ಜಿಪಂ ಸಿಇಒ ಕುರ್ಚಿ ಬಿಟ್ಟು ಕೊಟ್ಟು, ಅಧಿಕಾರ ನಡೆಸಲು ಅವಕಾಶ ಕಲ್ಪಿಸಿಕೊಟ್ಟರು.
ವಿದ್ಯಾರ್ಥಿನಿ ಪುಷ್ಪಲತಾ ಜಿಪಂ ಸಿಇಒ ಕುರ್ಚಿ ಮೇಲೆ ಕುಳಿತ ವೇಳೆ ಜಿಪಂ ಸಿಇಒ ಕೆ.ಆರ್. ನಂದಿನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿದ್ಯಾರ್ಥಿನಿಯರ ಪಕ್ಕದಲ್ಲಿ ನಿಂತು ಅಭಿನಂದಿಸಿ, ಉತ್ತಮ ಆಡಳಿತ ನಡೆಸುವಂತೆ ಸಲಹೆ ನೀಡಿದರು.
ಶನಿವಾರ ನಗರದ ಜಿಪಂ ಆವರಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಜಿಪಂ ಸಿಇಒ ಕೆ.ಆರ್. ನಂದಿನಿ ಸಿರುಗುಪ್ಪದ ಆದರ್ಶ ಮಹಾವಿದ್ಯಾಲಯದ ವಿದ್ಯಾರ್ಥಿನಿ ಎಂ. ಪುಷ್ಪಲತಾಗೆ ಒಂದು ದಿನದ ಮಟ್ಟಿಗೆ ಅತಿಥಿ ಮುಖ್ಯಕಾರ್ಯನಿರ್ವಾಹಕ ಹುದ್ದೆಯ ಪ್ರಭಾರ ನೀಡುವ ಮೂಲಕ ವಿದ್ಯಾರ್ಥಿನಿಯರ ಐಎಎಸ್ ಕನಸಿಗೆ ಪ್ರೇರಣೆ ನೀಡಿದರು. ಪುಷ್ಪಲತಾ, ಈ ಸ್ಥಾನ ಅಲಂಕರಿಸಿದ್ದು ತುಂಬಾ ಸಂತೋಷವಾಗಿದೆ. ಮುಖ್ಯವಾಗಿ ನನ್ನ ಮುಂದಿನ ಗುರಿ ತಲುಪುವುದಕ್ಕೆ ಪ್ರೇರಣೆ ನೀಡಿದೆ ಎಂದರು.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಂಜಮ್ಮ ಜೋಗತಿಗೆ ಸನ್ಮಾನಿಸಿದ ಜನಾರ್ದನ ರೆಡ್ಡಿ
ನಾವು ಪರೀಕ್ಷೆಯಲ್ಲಿ ಪಾಸಾಗಿ ಈ ಹುದ್ದೆಗೆ ಬಂದಿದ್ದರೂ ಇಷ್ಟೊಂದು ಖುಷಿಯಾಗುತ್ತಿರಲಿಲ್ಲ. ಅಷ್ಟುಸಂತೋಷ ನನಗಾಗಿದೆ ಎಂದು ಹೇಳಿದ ಸಿಇಒ ಪುಷ್ಪಲತಾ, ಹಳ್ಳಿ ಪ್ರದೇಶದಲ್ಲಿ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಹೆಚ್ಚಾಗುತ್ತಲೆ ಇದೆ. ಈ ಕುರಿತು ಜಾಗೃತಿ ಮೂಡಿಸಲಾಗುವುದು. ಇಂದು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಸಮಾನ ಶಿಕ್ಷಣ ದೊರೆಯುತ್ತಿದೆ. ಆದರೆ ಕೆಲವೊಂದು ಶಾಲೆಗಳಲ್ಲಿ ಕಟ್ಟಡಗಳು ಇಂದೋ, ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿವೆ. ಇಂದಿಗೂ ಅನೇಕ ಶಾಲೆಗಳಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಎಲ್ಲ ಶಾಲೆಗಳಿಗೆ ಶೌಚಾಲಯದ ಸಮಸ್ಯೆಯಾಗದಂತೆ ನೋಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.
ಜಿಪಂ ಉಪಾಧ್ಯಕ್ಷೆಯಾಗಿ ಕವಲೇಶ್ವರಿ:
ಬಳ್ಳಾರಿ ಜಿಪಂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ. ದೀನಾ ಮಂಜುನಾಥ ಅವರ ಕೊಠಡಿಯಲ್ಲಿ ವಿದ್ಯಾರ್ಥಿನಿ ಕವಲೇಶ್ವರಿ ಕೂಡ್ಲಿಗಿ ಆಸೀನರಾಗಿದ್ದರು. ಒಂದು ದಿನದ ಮಟ್ಟಿಗೆ ಕವಲೇಶ್ವರಿ ಅವರಿಗೆ ಉಪಾಧ್ಯಕ್ಷೆ ದೀನಾ ಮಂಜುನಾಥ ಅಧಿಕಾರ ನೀಡಿದರು. ಈ ವೇಳೆ ಮಾತನಾಡಿದ ಕವಲೇಶ್ವರಿ, ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಬಸ್‌ಗಳ ವ್ಯವಸ್ಥೆಯಿಲ್ಲ. ಆಟೋಗಳ ಸಂಖ್ಯೆಯೂ ತೀರಾ ವಿರಳ. ಯಾವುದಾದರು ಕೆಲಸಗಳ ನಿಮಿತ್ತ ನಗರಗಳ ಕಡೆ ಬರಲು ತುಂಬಾ ದೂರ ಕಾಲ್ನಡಿಗೆ ಮೂಲಕ ಬರಬೇಕಾಗಿದೆ. ಇದನ್ನು ತಪ್ಪಿಸಲು ಸಮರ್ಪಕ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದರು
ಎಎಸ್ಪಿ ಲಾವಣ್ಯ ಬದಲಿಗೆ ದಿವ್ಯಾಶ್ರೀ
ಬಳ್ಳಾರಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎನ್. ಲಾವಣ್ಯ ಅವರ ಸ್ಥಾನದಲ್ಲಿ ಬಳ್ಳಾರಿ ಆದರ್ಶ ವಿದ್ಯಾಲಯದ ವಿದ್ಯಾಶ್ರೀ ಕಾರ್ಯನಿರ್ವಹಿಸಿದರು. ಎಎಸ್ಪಿ ಲಾವಣ್ಯ, ಅತಿಥಿ ಎಎಸ್ಪಿ ವಿದ್ಯಾರ್ಥಿನಿ ದಿವ್ಯಾಶ್ರೀಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟರು. ಈ ವೇಳೆ ಮಾತನಾಡಿದ ದಿವ್ಯಾಶ್ರೀ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಹಿಳೆಯರಿಗೆ ಕಾನೂನಿನ ತಿಳವಳಿಕೆ ಇಲ್ಲ. ಕಾನೂನು, ಎಫ್‌ಐಆರ್, ಪೊಲೀಸ್ ವ್ಯವಸ್ಥೆಯ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಜಿಪಂನಲ್ಲಿರುವ ಉಪಕಾರ್ಯದರ್ಶಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಸಂಗೋಪನೆ, ತೋಟಗಾರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ಒಂದುದಿನದ ಮಟ್ಟಿಗೆ ಅಧಿಕಾರ ಹಸ್ತಾಂತರಿಸಿದರು.
ಜಿಪಂ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ವಿದ್ಯಾರ್ಥಿನಿ ಪುಷ್ಪಲತಾ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಗಮನ ಸೆಳೆಯಿತು. ಅಧಿಕಾರ ವಹಿಸಿಕೊಂಡ ನಂತರ ಡಿಎಚ್‌ಒ ಜಿ. ಸ್ವಾತಿ ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳ ಸ್ಥಿತಿಗತಿ, ಕೊರೋನಾ ನಿಯಂತ್ರಣ ಇನ್ನಿತರ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ರಮೀಜಾ, ನಗರದ ಜಿನ್ಸ್ ಉದ್ಯಮ ಘಟಕಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿದ್ದ ಅಧಿಕಾರಿ ಮಾಣಿಕ್ಯ ಅವರು ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಕಚೇರಿಯಲ್ಲಿ ವಿತರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ, ಡಿಎಚ್‌ಒ ಜನಾರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಜಿಪಂ ಉಪಕಾರ್ಯದರ್ಶಿ ಜಾನಕಿರಾಂ ಇದ್ದರು.