ಪಾಸ್‌ ಗೊಂದಲ, ಮಾರ್ಗ ಮಧ್ಯೆ ವಿದ್ಯಾರ್ಥಿನಿ ಇಳಿಸಿದ ಕಂಡಕ್ಟರ್‌..!

By Kannadaprabha News  |  First Published Sep 9, 2021, 8:54 AM IST

* ಕಾಲೇಜಿನ ಪ್ರವೇಶದ ರಸೀದಿ ಇಲ್ಲದ್ದರಿಂದ ಹಳೆ ಪಾಸ್‌ ಮಾನ್ಯ ಮಾಡಲಿಲ್ಲ
* ಕೊಪ್ಪಳ ಹೊರವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಇಳಿಸಿದ
* ಬಳಿಕ ಸ್ನೇಹಿತೆಯರು, ಮತ್ತಿತರರ ನೆರವಿನಿಂದ ಟಿಕೆಟ್‌ ಪಡೆದ ವಿದ್ಯಾರ್ಥಿನಿ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.09): ಗುರುತಿನ ಚೀಟಿ, ಹಳೆಯ ಪಾಸ್‌ ತಂದಿದ್ದರೂ ಕೇವಲ ಪ್ರವೇಶಾತಿ ರಸೀದಿಯನ್ನು ತಂದಿಲ್ಲ ಎನ್ನುವ ಕಾರಣ ಮುಂದಿಟ್ಟು, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯನ್ನು ಕಂಡಕ್ಟರ್‌ ದದೆಗಲ್‌ ಗ್ರಾಮದ ಬಳಿ ನಡು ರಸ್ತೆಯಲ್ಲಿ ಇಳಿಸಿರುವ ಅಮಾನವೀಯ ಘಟನೆ ಬುಧವಾರ ನಡೆದಿದೆ. ಹೀಗೆ ಇಳಿದ ವಿದ್ಯಾರ್ಥಿನಿ ದಿಕ್ಕು ತೋಚದಾಗಿ ಬಸ್ಸಿನ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾಳೆ. ಆದರೂ ಕಂಡಕ್ಟರ್‌ ಕರುಣೆ ತೋರಿಸದೇ ಇದ್ದಿದ್ದರಿಂದ ಬಸ್ಸಿನಲ್ಲಿದ್ದ ಇತರರ ಸಹಾಯದಿಂದ ಹಣ ಪಡೆದು, ತಮ್ಮೂರಿಗೆ ಪ್ರಯಾಣ ಮಾಡಿದ್ದಾಳೆ.

Tap to resize

Latest Videos

ಬೆಟಗೇರಿಯ ಅಕ್ಕಮಮಹಾದೇವಿ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾಳೆ. ಕೊಪ್ಪಳದಿಂದ ಬೆಟಗೇರಿ ಗ್ರಾಮಕ್ಕೆ ನಿತ್ಯವೂ ಬಸ್ಸಿನಲ್ಲಿಯೇ ಸಂಚರಿಸುತ್ತಾಳೆ. ಇದುವರೆಗೂ ಬಸ್‌ ಪಾಸ್‌ ವಿತರಣೆ ಮಾಡಿಲ್ಲ. ಹೀಗಾಗಿ, ಸಾರಿಗೆ ಇಲಾಖೆ ಹಳೆಯ ಬಸ್‌ ಪಾಸ್‌, ಕಾಲೇಜಿನ ಗುರುತಿನ ಚೀಟಿ ಹಾಗೂ ಪ್ರವೇಶ ಪಡೆದ ರಸೀದಿಯನ್ನು ತೋರಿಸಿ, ಪ್ರಯಾಣ ಮಾಡಬೇಕು ಎನ್ನುವುದು ಷರತ್ತು.

ವಿದ್ಯಾರ್ಥಿನಿ ಅಕ್ಕಮಹಾದೇವಿ ಕಾಲೇಜಿನ ಡ್ರೆಸ್‌ನಲ್ಲಿಯೇ ಬಸ್‌ ಪ್ರಯಾಣ ಮಾಡುತ್ತಿದ್ದಳು. ಹಳೆಯ ಪಾಸ್‌ ಇತ್ತು. ಗುರುತಿನ ಚೀಟಿಯೂ ಇತ್ತು. ಆದರೆ, ಕಾಲೇಜು ಪ್ರವೇಶಾತಿ ರಸೀದಿ ಮನೆಯಲ್ಲಿಯೇ ಬಿಟ್ಟುಬಂದಿದ್ದಳು. ಕಂಡಕ್ಟರ್‌ ಮಾನವೀಯತೆಯನ್ನು ತೋರಿಸದೆ ರಸೀದಿ ಇರದಿದ್ದರೆ ಹಣ ಕೊಟ್ಟು ಪ್ರಯಾಣ ಮಾಡಿ, ಇಲ್ಲವೇ ಕೆಳಗಿಳಿಯಿರಿ ಎಂದು ಕೊಪ್ಪಳ ಹೊರವಲಯದ ದದೆಗಲ್‌ ಬಳಿ ಕೆಳಗಿಳಿಸಿದ್ದಾರೆ.

ಕೆಎಸ್ಸಾರ್ಟಿಸಿ ಕಂಡಕ್ಟರ್‌ನಿಂದ ಮಹಿಳೆಯರಿಗೆ ಮಹಾ ವಂಚನೆ

ಈ ವಿಷಯವನ್ನು ತಕ್ಷಣ ಅಕ್ಕಮಹಾದೇವಿ ಅವರ ತಂದೆಯವರಿಗೆ ತಲುಪಿಸಲಾಗಿದೆ. ತಂದೆ ತಕ್ಷಣ ಕೊಪ್ಪಳ ಡಿಪೋ ಮ್ಯಾನೇಜರ್‌ ಅವರಿಗೆ ಕರೆ ಮಾಡಿದ್ದಾರೆ. ಅವರು ಕಾನ್ಫರೆನ್ಸ್‌ ಕಾಲ್‌ ಮೂಲಕ ಡಿಟಿಒ ಅವರೊಂದಿಗೆ ಕಂಡಕ್ಟರ್‌ ಅವರಿಗೆ ಮಾತನಾಡಿದ್ದಾರೆ. ಆದರೂ ಕಂಡಕ್ಟರ್‌ ಕ್ಯಾರೆ ಎಂದಿಲ್ಲ. ನಾನು ಈಗಾಗಲೇ ಟಿಕೆಟ್‌ ಮಾಡಿರುವುದರಿಂದ .28 ಕೊಟ್ಟರೆ ಪ್ರಯಾಣ ಮಾಡಲಿ, ಇಲ್ಲದಿದ್ದರೆ ಕೆಳಗಿಳಿಯಲಿ ಎಂದು ತಾಕಿತು ಮಾಡಿದ್ದಾರೆ. ಆಗ ವಿದ್ಯಾರ್ಥಿನಿಯರ ಸ್ನೇಹಿತರು ಹಾಗೂ ಬಸ್ಸಿನಲ್ಲಿದ್ದವರು ಸಹಾಯ ಮಾಡಿ, .28 ಪಾವತಿ ಮಾಡಿದ ಮೇಲೆಯೇ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡಿದ್ದಾರೆ. ಇದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಿಚಾರದಲ್ಲಿ ಈ ರೀತಿ ಮಾಡಬಾರದೆಂದು ಗೆ ಹೇಳಿದ್ದೇನೆ. ಆದರೆ ಈಗಾಗಲೇ ಟಿಕೆಟ್‌ ತೆಗೆದಿರುವುದರಿಂದ ಏನೂ ಮಾಡಲು ಆಗದು. ನಾನು ಕೈಯ್ಯಿಂದ ಹಾಕಲು ಸಾಧ್ಯವಿಲ್ಲ. ಈ ಬಾರಿ ಹಣ ಕೊಡಲಿ, ಮುಂದಿನ ಬಾರಿ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಡ್ಯೂಟಿ ಮುಗಿಸಿ ಬಂದ ಬಳಿಕ ನಾನು ಅವರನ್ನು ವಿಚಾರಣೆ ಮಾಡುತ್ತೇನೆ ಎಂದು ಡಿಪೋ ಮ್ಯಾನೇಜರ್‌ ಬಸವರಾಜ ಬಟ್ಟೂರು ತಿಳಿಸಿದ್ದಾರೆ. 

ನನ್ನ ಮಗಳ ಸಲುವಾಗಿ ಖುದ್ದು ನಾನೇ ಮಾತನಾಡಿದ್ದರೂ ಸಹ ವಿನಾಯತಿ ನೀಡಲಿಲ್ಲ. ಈ ರೀತಿಯಾದರೆ ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ಹೋಗುವುದಾದರು ಹೇಗೆ? ಹಾಗೊಂದು ವೇಳೆ ಬಸ್ಸಿನಲ್ಲಿದ್ದವರು ಯಾರು ನೆರವಿಗೆ ಬರದಿದ್ದರೆ ನನ್ನ ಮಗಳನ್ನು ರಸ್ತೆಯಲ್ಲಿಯೇ ಬಿಟ್ಟುಬಂದಿದ್ದರೆ ಗತಿ ಏನು? ಎಂದು ಪಾಲಕ ಏಳುಕೋಟೇಶ ಹೇಳಿದ್ದಾರೆ.  
 

click me!