ಹಾವೇರಿ ಜಿಲ್ಲೆಯಲ್ಲಿ ಬೆಳೆ ನಷ್ಟ ಪರಿಹಾರದಲ್ಲಿ ಭಾರೀ ಅಕ್ರಮ| ನೆರೆ ಸಂದರ್ಭದಲ್ಲಿ ಆಗಿರುವ ಬೆಳೆ ನಷ್ಟಕ್ಕೆ ಜಿಲ್ಲೆಗೆ 202 ಕೋಟಿ ಪರಿಹಾರ ಬಿಡುಗಡೆ| ಈ ಪೈಕಿ 18.17 ಕೋಟಿ ರು. ಅವ್ಯವಹಾರ ಮೇಲ್ನೋಟಕ್ಕೆ ಸಾಬೀತು| ನೂರಕ್ಕೂ ಹೆಚ್ಚು ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಹೋಗುವುದು ನಿಶ್ಚಿತ|
ನಾರಾಯಣ ಹೆಗಡೆ
ಹಾವೇರಿ(ಮಾ.11): ಜಿಲ್ಲೆಯಲ್ಲಿ ನಡೆದಿರುವ ನೆರೆ ಅಕ್ರಮದ ಮೊತ್ತ ಕೇಳಿದರೆ ಹೌಹಾರುವಂತಿದೆ. ಯಾರದೋ ಜಮೀನಿಗೆ ಮತ್ತಾರಿಗೋ ಪರಿಹಾರ ವಿತರಣೆ ಮಾಡಿ ಭಾರೀ ಗೋಲ್‌ಮಾಲ್ ನಡೆದಿದೆ. ಹೀಗೆ ನಡೆದಿರುವ ಅಕ್ರಮದ ಮೊತ್ತ 18 ಕೋಟಿಗೂ ಅಧಿಕ!.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೆರೆ ಸಂದರ್ಭದಲ್ಲಾದ ಬೆಳೆ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿದ್ದು, ಅದರ ವಿತರಣೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಈಗಾಗಲೇ ಸಾಬೀತಾಗಿದೆ. ಆದರೆ, ಇದುವರೆಗೆ ಎಷ್ಟು ಮೊತ್ತ ಅಪರಾತಪರಾ ಆಗಿದೆ ಎಂಬುದು ಬಹಿರಂಗವಾಗಿರಲಿಲ್ಲ. ಪತ್ರಿಕೆಗೆ ಲಭ್ಯವಾಗಿರುವ ಖಚಿತ ಮಾಹಿತಿ ಪ್ರಕಾರ 18.17 ಕೋಟಿ. ಈ ಪರಿಹಾರ ಹಣ ಬೇರೆಯವರ ಪಾಲಾಗಿದೆ. ಈಗಾಗಲೇ ಅಕ್ರಮದಲ್ಲಿ ಶಾಮೀಲಾಗಿರುವ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರೂ ಸೇರಿದಂತೆ ಒಟ್ಟು 7 ಗ್ರಾಮ ಲೆಕ್ಕಾಧಿಕಾರಿಗಳು ಅಮಾನತುಗೊಂಡಿದ್ದಾರೆ. ಇವರ ಸಾಲಿನಲ್ಲಿ ಇನ್ನೂ ನೂರಾರು ನೌಕರರು ಮನೆ ಸೇರುವುದು ನಿಶ್ಚಿತವಾಗಿದೆ.
ಅನರ್ಹರ ಪಾಲಾದ ಪರಿಹಾರ ಹಣ:
ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಯಮದ ಪ್ರಕಾರ ಗರಿಷ್ಠ 4 ಎಕರೆ 38 ಗುಂಟೆಗೆ ಮಾತ್ರ ಪರಿಹಾರ ನೀಡಬಹುದು. ಆದರೆ, ಜಿಲ್ಲೆಯಲ್ಲಿ ಅದಕ್ಕಿಂತ ಹೆಚ್ಚಿನ ಜಮೀನಿನಲ್ಲಿ ಬೆಳೆ ನಷ್ಟವಾಗಿದೆ ಎಂದು ತೋರಿಸಿ ಅದನ್ನು ಮತ್ತಾರದೋ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಈ ರೀತಿಯ 1605 ಪ್ರಕರಣಗಳನ್ನು ಈವರೆಗೆ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ. ಅದಕ್ಕೆ ಸಂಬಂಧಿಸಿದಂತೆ 18.17 ಕೋಟಿ ಪರಿಹಾರ ಅನರ್ಹರ ಪಾಲಾಗಿದೆ. ಬೆಳೆ ನಷ್ಟಸಮೀಕ್ಷೆ ನಡೆಸಿ ಅದನ್ನು ತಂತ್ರಾಂಶದಲ್ಲಿ ಅಳವಡಿಸುವ ವೇಳೆಯೇ ಬೇರೆಯವರ ಬ್ಯಾಂಕ್ ಖಾತೆ ಸಂಖ್ಯೆ ತೋರಿಸಲಾಗಿದೆ. ಆ ಮೂಲಕ ಕಂದಾಯ ಇಲಾಖೆ ನೌಕರರೇ ಇದರಲ್ಲಿ ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹಾವೇರಿ ತಾಲೂಕೊಂದರಲ್ಲೇ 48 ಗ್ರಾಮ ಲೆಕ್ಕಾಧಿಕಾರಿಗಳ ಪೈಕಿ 18 ಜನರು ಈ ರೀತಿ ಅಕ್ರಮ ಎಸಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 291 ಗ್ರಾಮ ಲೆಕ್ಕಿಗರಿದ್ದು, ಅರ್ಧದಷ್ಟು ವಿಎಗಳು ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಎಂದು ತಿಳಿದುಬಂದಿದೆ.
ಬಂದಿದ್ದು 202 ಕೋಟಿ:
ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ 3.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ನೆರೆಯಿಂದ 3.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ, ಶೇ. 83.60ರಷ್ಟು ಪ್ರದೇಶದಲ್ಲಿನ ಬೆಳೆ ಹಾನಿಯಾಗಿತ್ತು. ಒಟ್ಟು 1.52 ಲಕ್ಷ ರೈತರ ಬೆಳೆ ನಷ್ಟವಾಗಿರುವ ಕುರಿತು ತಂತ್ರಾಂಶದಲ್ಲಿ ಅಳವಡಿಸಲಾಗಿತ್ತು. ಇದುವರೆಗೆ ಶಿಗ್ಗಾಂವಿ ತಾಲೂಕಿಗೆ . 38.58 ಕೋಟಿ, ಸವಣೂರು ತಾಲೂಕಿಗೆ 31.82 ಕೋಟಿ, ಹಾನಗಲ್ಲ ತಾಲೂಕಿನ ರೈತರಿಗೆ 41.55 ಕೋಟಿ, ಹಾವೇರಿ ತಾಲೂಕಿಗೆ 45.14 ಕೋಟಿ, ಬ್ಯಾಡಗಿ ತಾಲೂಕಿಗೆ 9.54 ಕೋಟಿ, ಹಿರೇಕೆರೂರು ತಾಲೂಕಿಗೆ 3.97, ರಾಣಿಬೆನ್ನೂರು ತಾಲೂಕಿಗೆ 27.02 ಕೋಟಿ, ರಟ್ಟೀಹಳ್ಳಿ ತಾಲೂಕಿಗೆ 4.35 ಕೋಟಿ ಸೇರಿದಂತೆ 202 ಕೋಟಿ ಪರಿಹಾರ ಬಂದಿದೆ.
ಪೊಲೀಸ್ ತನಿಖೆ:
ಜಿಲ್ಲೆಯಲ್ಲಿ ನಡೆದಿರುವ ನೆರೆ ಅಕ್ರಮದ ತನಿಖೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈಗಾಗಲೇ ಹಾವೇರಿ ತಾಲೂಕಿನ ದೇವಗಿರಿ, ಕರ್ಜಗಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರೂ ಸೇರಿದಂತೆ 7 ವಿಎಗಳು ಅಮಾನತುಗೊಂಡಿದ್ದಾರೆ. ಆಯಾ ತಾಲೂಕಿನ ಪ್ರಕರಣಗಳ ತನಿಖೆಯನ್ನು ಸ್ಥಳೀಯ ಸಿಪಿಐಗಳು ಮಾಡುತ್ತಿದ್ದಾರೆ. ಬೆಳೆ ನಷ್ಟಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಲು ತಹಸೀಲ್ದಾರ್, ವಿಎಗಳಿಗೆ ನೀಡಿರುವ ಪಾಸ್‌ವರ್ಡ್ ದುರ್ಬಳಕೆಯಾಗಿರುವ ಆರೋಪವೂ ಕೇಳಿಬಂದಿದೆ. ಒಟ್ಟಿನಲ್ಲಿ ಸಂಪೂರ್ಣ ತನಿಖೆ ಬಳಿಕ ನೆರೆ ಅಕ್ರಮದಲ್ಲಿ ಯಾರು ಯಾರು ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗಲಿದೆ. ಅನರ್ಹರ ಪಾಲಾಗಿರುವ ಪರಿಹಾರ ಹಣವನ್ನು ಹೇಗೆ ವಾಪಸ್ ಪಡೆಯುತ್ತಾರೆ ಎಂಬುದೂ ತಿಳಿಯಲಿದೆ.
ಈ ಬಗ್ಗೆ ಮಾತನಾಡಿದ ಹಾವೇರಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಅವರು, ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಆಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 18.17 ಕೋಟಿ ಪರಿಹಾರ ಅನರ್ಹರ ಪಾಲಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.