ಅನಗತ್ಯವಾಗಿ ಓಡಾಡಿದರೆ ದಂಡ ಪ್ರಯೋಗ| ಶುಕ್ರವಾರ ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿ, ಮೇ 4ರವರೆಗೆ ವಿಸ್ತರಣೆ| ವಿಮಾನ ನಿಲ್ದಾಣಕ್ಕೆ ಸಾಗುವ ವಾಹನ, ಅಗತ್ಯ ವಸ್ತುಗಳ ಸರಬರಾಜು, ವೈದ್ಯಕೀಯ ಸೇವೆಗಳ ವಾಹನಗಳಿಗೆ ರಿಯಾಯಿತಿ: ಪಂತ್|
ಬೆಂಗಳೂರು(ಏ.22): ಕೊರೋನಾ ಸೋಂಕು ನಿಯಂತ್ರಿಸುವ ಸಂಬಂಧ ಹೊಸದಾಗಿ ಜಾರಿಗೊಳಿಸಿರುವ ಮಾರ್ಗಸೂಚಿಯ ಅನುಸಾರ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಸೇರಿದಂತೆ ಅನುಮತಿ ನೀಡಿರುವ ವಾಣಿಜ್ಯ ಚಟುವಟಿಕೆಗಳ ಹೊರತುಪಡಿಸಿ ಇನ್ನುಳಿದ ಎಲ್ಲ ವ್ಯಾಪಾರ ಹಾಗೂ ವಹಿವಾಟುಗಳ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಗರ ಪೊಲೀಸರು ಸಜ್ಜಾಗಿದ್ದಾರೆ.
ಮಾರ್ಗಸೂಚಿ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗಿಳಿಯುವ ಜನರ ವಿರುದ್ಧ ಮುಲಾಜಿಲ್ಲದೆ ‘ದಂಡ’ ಪ್ರಯೋಗಿಸಲಾಗುತ್ತದೆ. ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸಿದರೆ ಐಪಿಸಿ 188, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
undefined
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಆದೇಶದಂತೆ ರಾತ್ರಿ ಕಪ್ರ್ಯೂ ಅವಧಿಯನ್ನು ಎರಡು ಗಂಟೆಗಳ ಹೆಚ್ಚಳದೊಂದಿಗೆ ಬರುವ ಮೇ 4ರವರೆಗೆ ವಿಸ್ತರಣೆ ಮಾಡಲಾಗಿದೆ. ಜೊತೆಗೆ ವಾರಾಂತ್ಯದ ಕರ್ಫ್ಯೂ ಕೂಡ ಅನುಷ್ಠಾನಕ್ಕೆ ಬರಲಿದೆ. ವಿಮಾನ ನಿಲ್ದಾಣಕ್ಕೆ ಸಾಗುವ ವಾಹನಗಳು, ಅಗತ್ಯ ವಸ್ತುಗಳ ಸರಬರಾಜು ಹಾಗೂ ವೈದ್ಯಕೀಯ ಸೇವೆಗಳ ವಾಹನಗಳ ಸಂಚಾರ ಎಂದಿನಂತೆ ಮುಂದುವರೆಯಲಿದೆ. ಶುಕ್ರವಾರ ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಸರ್ಕಾರ ಅನುಮತಿ ನೀಡಿರುವ ವಾಣಿಜ್ಯ ಚಟುವಟಿಕೆಗಳ ಹೊರತುಪಡಿಸಿ ಇನ್ನುಳಿದ ಎಲ್ಲ ವ್ಯಾಪಾರ ಹಾಗೂ ವಹಿವಾಟುಗಳು ಸಂಪೂರ್ಣ ಸ್ಥಗಿತವಾಗಲಿದೆ. ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಕರುನಾಡಿನ ಕೊರೋನಾ ಕಣ್ಣೀರ ಕತೆ; ಚಿಕಿತ್ಸೆ ಸಿಗುತ್ತಿಲ್ಲ, ಶವಗಾರದಲ್ಲೂ ನೆಮ್ಮದಿ ಇಲ್ಲ!
ಮದುವೆಗೆ 50 ಜನರು, ಅಂತ್ಯಕ್ರಿಯೆ ವೇಳೆ 20 ಜನರ ಉಪಸ್ಥಿತಿಗೆ ಮಾತ್ರ ಅವಕಾಶ ಕೊಡಲಾಗಿದೆ. ಈಗಾಗಲೇ ಕಲ್ಯಾಣ ಮಂಟಪಗಳ ಮಾಲಿಕರ ಜತೆ ಸಭೆ ನಡೆಸಿ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಸೆಕ್ಷನ್ 102 ಸಿಆರ್‌ಪಿಸಿ ಅಡಿ ಅವರಿಂದ ಬಾಂಡ್ ಪಡೆಯಲಾಗುತ್ತದೆ. ಕೊರೋನಾ ನಿಯಮಗಳಿಗೆ ವ್ಯಾಪಾರಿಗಳು, ಕಲ್ಯಾಣಮಂಟಪಗಳ ಮಾಲಿಕರು ಬದ್ಧರಾಗಿರಬೇಕು. ಕಾನೂನು ಉಲ್ಲಂಘಿಸಿದರೆ ಪರವಾನಿಗೆ ಜಪ್ತಿ ಹಾಗೂ ಕಲ್ಯಾಣ ಮಂಟಪಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈಗಾಗಲೇ ನಿಯಮ ಉಲ್ಲಂಘಿಸಿದ ಒಂದು ಮಾಲ್ ಅನ್ನು ಮುಟ್ಟುಗೋಲು ಹಾಕಿದ್ದೇವೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಕರ್ಫ್ಯೂ ವೇಳೆ ನಿಷೇಧಾಜ್ಞೆ
ನಗರದಲ್ಲಿ ಕರ್ಫ್ಯೂ ವೇಳೆ ಜಾರಿಯಲ್ಲಿರುವ ನಿಷೇಧಾಜ್ಞೆ ಮುಂದುವರೆಸಲಾಗಿದೆ. ವಿಮಾನ, ಮೆಟ್ರೋ, ರೈಲ್ವೆ ಹಾಗೂ ಬಸ್ ನಿಲ್ದಾಣಗಳ ಹೊರತುಪಡಿಸಿ ಬೇರೆಡೆಗೆ ನಾಲ್ಕು ಜನರಿಗಿಂತ ಹೆಚ್ಚಿಗೆ ಸೇರುವಂತಿಲ್ಲ. ಹೆಚ್ಚಿನ ಜನರು ಜಮಾವಣೆಗೊಂಡರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪಂತ್ ತಿಳಿಸಿದ್ದಾರೆ.
218 ಪೊಲೀಸರಿಗೆ ಸೋಂಕು
ಮಹಾಮಾರಿ ಕೊರೋನಾ ವಿರುದ್ಧ ಖಾಕಿ ಪಡೆ ಸಹ ಹೋರಾಟ ನಡೆಸಿದ್ದು, ಇದುವರೆಗೆ ಸುಮಾರು 218 ಪೊಲೀಸರಿಗೆ ಸೋಂಕು ಹರಡಿದೆ. ಇದರಲ್ಲಿ 13 ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಉಳಿದವರು ಮನೆಯಲ್ಲೇ ಆರೈಕೆಯಲ್ಲಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಪೊಲೀಸರು ಮತ್ತು ಅವರ ಕುಟುಂಬ ಸದಸ್ಯರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವ ಸಂಬಂಧ 100ಕ್ಕೂ ಹೆಚ್ಚು ಆಸ್ಪತ್ರೆಗಳ ಆಡಳಿತ ಮಂಡಳಿ ಜತೆ ಸಭೆ ನಡೆಸಲಾಗಿದೆ. ಪೊಲೀಸರು ಮತ್ತು ಆಸ್ಪತ್ರೆಗಳ ನಡುವೆ ಸಮನ್ವಯಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಎಸ್.ಮುರುಗನ್ ಹಾಗೂ ಡಿಸಿಪಿ ಡಾ. ಎಸ್.ಡಿ.ಶರಣಪ್ಪ ಅವರನ್ನು ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕಂಟ್ರೋಲ್ ರೂಂ ಸಹ ತೆರೆಯಲಾಗಿದೆ ಎಂದರು.
ವಾಹನ ತಪಾಸಣೆಗೆ 180 ಚೆಕ್‌ಪೋಸ್ಟ್
ನಗರದ ಸುಮಾರು 180 ಕಡೆ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಅನಗತ್ಯವಾಗಿ ಓಡಾಡುವ ವಾಹನಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡಲಾಗುತ್ತದೆ. ಖಾಸಗಿ ಕಂಪನಿಗಳು ನೌಕರರು ಹಾಗೂ ವೈದ್ಯಕೀಯ ಸೇವಾ ವಲಯದ ಸಿಬ್ಬಂದಿ ಚೆಕ್ ಪೋಸ್ಟ್‌ಗಳಲ್ಲಿ ಸೂಕ್ತ ಐಡಿ, ದಾಖಲೆಗಳನ್ನು ತೋರಿಸಿ ಸಂಚರಿಸಲು ಅವಕಾಶ ಇದೆ. ಅನವಶ್ಯಕ ಸಂಚಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ರಾತ್ರಿ 8ಕ್ಕೆ ಬಂದ್
ಹೊಸ ಮಾರ್ಗಸೂಚಿ ಅನುಸಾರ ರಾತ್ರಿ ಕರ್ಫ್ಯೂ ಅನ್ನು ಬುಧವಾರ ರಾತ್ರಿಯಿಂದಲೇ ಪೊಲೀಸರು ಕಟ್ಟು ನಿಟ್ಟಾಗಿ ಜಾರಿಗೆ ತಂದಿದ್ದಾರೆ. ಪಬ್, ಕ್ಲಬ್, ಮಾಲ್, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಅಂಗಡಿಗಳು ಸೇರಿದಂತೆ ಎಲ್ಲ ವಾಣಿಜ್ಯ ವಹಿವಾಟುಗಳನ್ನು ರಾತ್ರಿ 8 ಗಂಟೆಗೆ ಪೊಲೀಸರು ಬಂದ್ ಮಾಡಿಸಿದ್ದಾರೆ. ಇನ್ನು ಕರ್ಫ್ಯೂ ಪರಿಣಾಮ ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ ಹಾಗೂ ಚಚ್‌ರ್ ಸ್ಟ್ರೀಟ್‌ಗಳು ಸಹ ಬಿಕೋ ಎನ್ನುತ್ತಿದ್ದವು. ಈಗಾಗಲೇ ಕಳೆದ ಹಲವು ದಿನಗಳಿಂದ ನಗರದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಇದೀಗ ಆ ಸಮಯದಲ್ಲಿ ತುಸು ಹೆಚ್ಚಳವಾಗಿದ್ದು, ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಅನುಷ್ಠಾನದಲ್ಲಿರುತ್ತದೆ.
ಕರ್ಫ್ಯೂ ವೇಳೆ ಕಾನೂನು ಪಾಲಿಸುವ ಮೂಲಕ ನಾಗರಿಕರು ಸಹಕರಿಸಬೇಕು. ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸಿದರೆ ಐಪಿಸಿ 188, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.