10 ನಿರ್ದೇಶಕರ ಸ್ಥಾನಕ್ಕೆ 11 ನಾಮಪತ್ರ ಸಲ್ಲಿಕೆ| ಇಂದು ಪರಿಶೀಲನೆ, ನಾಳೆ ಹಿಂಪಡೆಯಲು ಕೊನೆಯ ದಿನ|ಮಹಿಳೆಯರಿಗೆ ಮೂರು ಸ್ಥಾನ ಮೀಸಲು| ಒಬ್ಬರು, ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ಇದ್ದರೂ ಯಾರು ನಾಮಪತ್ರ ಸಲ್ಲಿಸಿಲ್ಲ| ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ನಗರಸಭೆ ಸದಸ್ಯರಿಗೆ ಇದ್ದ ಅಧಿಕಾರವೇ ಇರುತ್ತದೆ|
ರಾಮಮೂರ್ತಿ ನವಲಿ
ಗಂಗಾವತಿ[ಡಿ.14]: ಬೀದಿ ಬದಿ ವ್ಯಾಪಾರಿಗಳು ಅನುಭವಿಸುವ ಸಂಕಷ್ಟಗಳಿಗೆ ನೆರವಾಗಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಥಮ ಬಾರಿಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಡೇ ನಲ್ಮ್ ಯೋಜನೆಯಡಿ ಸಮಿತಿ ರಚಿಸಲು ಮುಂದಾಗಿದ್ದು, ಇದಕ್ಕೆ ಚುನಾವಣೆ ದಿನಾಂಕ ಸಹ ಘೋಷಣೆ ಮಾಡಿದೆ. ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಸಿದ್ದಾರೆ.
ನಗರದಲ್ಲಿ 1387 ಬೀದಿ ಬದಿ ವ್ಯಾಪಾರಿಗಳಿದ್ದು, ಸಮಿತಿ ಆಯ್ಕೆಗೆ ಡಿ. 21ರಂದು ಚುನಾವಣೆ ನಡೆಯಲಿದೆ. ಒಟ್ಟು 10 ನಿರ್ದೇಶಕರ ಸ್ಥಾನವಿದ್ದು ಎಸ್ಸಿಗೆ ಒಂದು, ಎಸ್ಟಿಗೆ ಒಂದು, ಮೂವರು ಮಹಿಳೆಯರು, ಇಬ್ಬರು ಸಾಮಾನ್ಯ, ಒಂದು ಅಲ್ಪಸಂಖ್ಯಾತ, ಒಂದು ಹಿಂದುಳಿದ ವರ್ಗ ಮತ್ತು ಒಂದು ಸ್ಥಾನ ವಿಕಲಚೇತನರಿಗೆ ಮೀಸಲಿದೆ. ಡಿ. 9 ರಿಂದ ನಾಮಪತ್ರ ಸಲ್ಲಿಸುವ ಕಾರ್ಯ ನಡೆದಿದ್ದು ಡಿ. 14ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ. 15ರಂದು ನಾಮಪತ್ರ ಹಿಂಪಡೆಯುವ ದಿನವಾಗಿದೆ.
ಸಮಿತಿ ಉದ್ದೇಶ:
ಸಮಿತಿಗೆ ಆಯ್ಕೆಯಾಗುವ ಸದಸ್ಯರು ನಗರಸಭೆ ಸದಸ್ಯರಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಈ ಸಮಿತಿ ಸಹಕಾರಿಯಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುವ ಜತೆಗೆ ಅವರ ಸಂಕಷ್ಟಗಳು ಹೆಚ್ಚಿವೆ. ಇವುಗಳ ನಿವಾರಣೆಗೆ ಈ ಸಮಿತಿ ನೆರವಾಗಲಿದೆ.
1387 ಬೀದಿ ವ್ಯಾಪಾರಿಗಳು:
2014ರಲ್ಲಿ ನಗರಸಭೆ ಸರ್ವೇ ಮಾಡಿದಾಗ 1387 ಬೀದಿ ಬದಿ ವ್ಯಾಪಾರಿಗಳು ಕಂಡು ಬಂದಿದ್ದಾರೆ. ನಿತ್ಯ ತೊಂದರೆ ಅನುಭವಿಸುವ ಇವರು ಸಮಿತಿಗೆ ಆಯ್ಕೆಯಾಗುವ ಮೂಲಕ ವ್ಯಾಪಾರಿಗಳ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂಬ ಛಲ ತೊಟ್ಟಿದ್ದಾರೆ. ಈ ಸಮಿತಿಗೆ ಆಯ್ಕೆಯಾದವರು ನಗರಸಭೆ ಸದಸ್ಯರ ಸಮನಾಧಿಕಾರ ಎನ್ನುವ ಸೂಚನೆ ಹಿನ್ನೆಲೆಯಲ್ಲಿ ಚುನಾವಣೆಗೆ ಉತ್ಸುಕರಾಗಿದ್ದಾರೆ.
11 ನಾಮಪತ್ರ ಸಲ್ಲಿಕೆ
ಬೀದಿ ಬದಿ ವ್ಯಾಪಾರಸ್ಥರ ಸಮಿತಿಯ 10 ನಿರ್ದೇಶಕ ಹುದ್ದೆಗೆ ಒಟ್ಟು 11 ನಾಮಪತ್ರ ಸಲ್ಲಿಕೆಯಾಗಿವೆ. ಮಹಿಳೆಯರಿಗೆ ಮೂರು ಸ್ಥಾನ ಮೀಸಲಿದ್ದರೂ ಕೇವಲ ಒಬ್ಬರು, ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ಇದ್ದರೂ ಯಾರು ನಾಮಪತ್ರ ಸಲ್ಲಿಸಿಲ್ಲ. ಅದೇ ರೀತಿ ಎರಡು ಸಾಮಾನ್ಯ ಸ್ಥಾನಕ್ಕೆ ಮೂವರು, ಒಂದು ಅಲ್ಪ ಸಂಖ್ಯಾತರ ಹುದ್ದೆಗೆ ಇಬ್ಬರು, ಒಂದು ಹಿಂದುಳಿದ ವರ್ಗದ ಸ್ಥಾನಕ್ಕೆ ಇಬ್ಬರು, ವಿಕಲಚೇತನರಿಗೆ ಮೀಸಲಿದ್ದ ಒಂದು ಸ್ಥಾನಕ್ಕೆ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೀದಿ ಬರಿ ವ್ಯಾಪಾರಸ್ಥರಿಗೆ ತೊಂದರೆಯಾಗಬಾರದು ಹಾಗೂ ಅವರಿಗೆ ಸೌಲಭ್ಯ ದೊರಕಬೇಕು ಎಂದು ಕಾರಣಕ್ಕೆ ಸಮಿತಿ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರ್ಕಾರಿಗೆ ಸಮಿತಿ ಜಾರಿಗೆ ತಂದಿದೆ. ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ನಗರಸಭೆ ಸದಸ್ಯರಿಗೆ ಇದ್ದ ಅಧಿಕಾರವೇ ಇರುತ್ತದೆ ಎಂದು ಗಂಗಾವತಿ ಡೇ ನಲ್ಮ್ ಯೋಜನೆ ಸಿಇಒ ಸರಸ್ವತಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ನಿಬಂಧಕರು ಸಹಕಾರಿ ಇಲಾಖೆ ಹಾಗೂ ಚುನಾವಣಾಧಿಕಾರಿ ಬಿ.ಎ. ಕೇಸರಿಮಠ ಅವರು, ಚುನಾವಣೆಗೆ 11 ನಾಮಪತ್ರಗಳು ಸಲ್ಲಿಕೆಯಾಗಿದ್ದು 10 ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ. 1387 ಸದಸ್ಯರಿಗೆ ಗುರುತಿನ ಚೀಟಿ ನೀಡಿದ್ದು ಸಹಕಾರಿ ಇಲಾಖೆಯ ನಿಯಮದಂತೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.