ಹೊರಗಡೆ ಹೋಗುವ ಮುನ್ನ ಎಚ್ಚರ: ಸಿಕ್ಕ ಸಿಕ್ಕವರಿಗೆ ಕಚ್ಚುತ್ತಿರುವ ಬೀದಿನಾಯಿಗಳು!

By Web DeskFirst Published Sep 29, 2019, 2:32 PM IST
Highlights

ಬೀದಿ ನಾಯಿಗಳ ಕಾಟ ಜೋರಾಗಿದ್ದು, ನಾಯಿಗಳ ಹಾವಳಿಯಿಂದ ಜನರು ತಿರುಗಾಡುವುದೇ ಕಷ್ಟವಾಗಿದೆ| ಬೀದಿ ನಾಯಿಗಳ ಹಾವಳಿಯಿಂದ ರೋಸಿ ಹೋದ ಜನರು| ತಿರುಗಾಡುವ ಸಂದರ್ಭದಲ್ಲಿ ನಾಯಿ ಇದೆಯಾ ಎಂದು ನೋಡಿಕೊಂಡು ಹೋಗುವಂತಾಗಿದೆ| ಕಳೆದ ಆರು ತಿಂಗಳಲ್ಲಿ ತಾಲೂಕಿನಲ್ಲಿ 336 ಜನರಿಗೆ ಕಚ್ಚಿದ ಬೀದಿನಾಯಿಗಳು| ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿದೆ| 

ರಾಘವೇಂದ್ರ ಹೆಬ್ಬಾರ್ 

ಭಟ್ಕಳ(ಸೆ.29): ತಾಲೂಕಿನಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ನಾಯಿಗಳ ಹಾವಳಿಯಿಂದಾಗಿ ತಿರುಗಾಡುವುದೇ ಕಷ್ಟ ಎಂಬಂತಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದು, ತಿರುಗಾಡುವ ಸಂದರ್ಭದಲ್ಲಿ ನಾಯಿ ಇದೆಯಾ ಎಂದು ನೋಡಿಕೊಂಡು ಹೋಗುವಂತಾಗಿದೆ. 

336 ಜನರಿಗೆ ಕಚ್ಚಿದ ಬೀದಿ ನಾಯಿಗಳು

ಕಳೆದ ಆರು ತಿಂಗಳ ಹಿಂದೆ ಮುಂಡಳ್ಳಿಯಲ್ಲಿ ಮಹಿಳೆ ಬೀದಿ ನಾಯಿಗೆ ಬಲಿಯಾದ ನಂತರ ನಾಯಿಗಳನ್ನು ಹಿಡಿಯುವ ವ್ಯವಸ್ಥೆ ಮಾಡಿದ್ದರೂ ಮತ್ತೆ ಮತ್ತೆ ಕಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಆರು ತಿಂಗಳಲ್ಲಿ ತಾಲೂಕಿನಲ್ಲಿ 336 ಜನರಿಗೆ ನಾಯಿ ಕಚ್ಚಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದು ಸರ್ಕಾರಿ ಆಸ್ಪತ್ರೆಯಲ್ಲಿ ಸಿಕ್ಕ ಅಧಿಕೃತ ಮಾಹಿತಿ. 

ಇನ್ನು ನಾಯಿ ಕಡಿತಕ್ಕೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ ಎಷ್ಟಿದೆಯೋ. ಇಷ್ಟೊಂದು ಪ್ರಮಾಣದಲ್ಲಿ ನಾಯಿ ಕಚ್ಚಿಸಿಕೊಂಡಿರುವುದು ಜಿಲ್ಲೆಯಲ್ಲಿ ಎಲ್ಲೂ ಇರಲಿಕ್ಕಿಲ್ಲ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ನಾಯಿ ಕಡಿತಕ್ಕೊಳಗಾಗುವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಕೊಡುವ ಎಆರ್‌ವಿ ಚುಚ್ಚು ಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಸೆಪ್ಟೆಂಬರ್ ತಿಂಗಳೊಂದರಲ್ಲೇ 32 ಮಂದಿಗೆ ನಾಯಿಗಳು ಕಚ್ಚಿವೆ ಎಂದರೆ ಭಟ್ಕಳದಲ್ಲಿ ಬೀದಿ ನಾಯಿ ಉಪಟಳ ಎಷ್ಟಿರಬಹುದು ಎಂದು ಊಹಿಸಬಹುದು. ತಾಲೂಕಿನಲ್ಲಿ ಬೀದಿ ನಾಯಿಗಳ ಉಪಟಳ ಆರು ತಿಂಗಳು, ಒಂದು ವರ್ಷದಿಂದ ಇಲ್ಲ. ಇಲ್ಲಿ ವರ್ಷಂಪ್ರತಿ ನಾಯಿಗಳ ಉಪಟಳ ಇದ್ದಿದ್ದೇ. ಸಾಗರ ರಸ್ತೆಯ ಕಸ ವಿಲೇವಾರಿ ಘಟಕದ ಬಳಿ ನಾಯಿಗಳ ಹಿಂಡೇ ಇರುತ್ತದೆ. ಈ ಪ್ರದೇಶವೇ ಬೀದಿ ನಾಯಿಗಳ ಕೇಂದ್ರ ಸ್ಥಾನವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. 

ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಶ್ವಾನಗಳು

ಈ ಪ್ರದೇಶದಲ್ಲಿ ನಾಯಿಗಳು ಅಡ್ಡ ಬಂದು ಎಷ್ಟೋ ಜನ ದ್ವಿಚಕ್ರ ವಾಹನ ಸವಾರರು ಬಿದ್ದು ಪೆಟ್ಟಾಗಿ ಆಸ್ಪತ್ರೆಗೆ ಸೇರಿದ ಉದಾಹರಣೆ ಸಾಕಷ್ಟಿವೆ. ಪಟ್ಟಣದ ಕೆಲ ರಸ್ತೆಯಲ್ಲೂ ಬೀದಿ ನಾಯಿಗಳ ಹಾವಳಿ ಕಡಿಮೆಯಾಗಿಲ್ಲ. ನಾಯಿಗಳ ಹಾವಳಿಯಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿದೆ. ಪಟ್ಟಣ ಭಾಗದಲ್ಲಿ ರಸ್ತೆಯ ಸನಿಹದಲ್ಲಿರುವ ತ್ಯಾಜ್ಯ ತೊಟ್ಟಿ ಬಳಿ ಎಸೆಯುವ ಮಾಂಸ ತಿಂದು ರೊಚ್ಚಿಗೆದ್ದಿರುವ ನಾಯಿಗಳು ಮಾಂಸ ಸಿಗದೇ ಇರುವ ಸಂದರ್ಭದಲ್ಲಿ ಸಹಜವಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. 

ಗೋಳಿಕಟ್ಟೆಯಲ್ಲಿರುವ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲೂ ಮಾಂಸದ ತ್ಯಾಜ್ಯ ಸಿಗುವುದರಿಂದ ಇದನ್ನು ತಿನ್ನಲು ನಾಯಿಗಳು ಮುಗಿ ಬೀಳುತ್ತಿವೆ. ಬೀದಿ ನಾಯಿಗಳ ಉಪಟಳ ಕಡಿಮೆ ಮಾಡಲು ಇನ್ನಾದರೂ ಸಂಬಂಧಿಸಿದ ಪುರಸಭೆ, ತಾಲೂಕು ಆಡಳಿತ ಹಾಗೂ ಗ್ರಾಪಂ ಆಡಳಿತ ಕ್ರಮ ಕೈಗೊಳ್ಳಬೇಕಿದೆ.

ಈ ಬಗ್ಗೆ ಮಾತನಾಡಿದ ದ್ವಿಚಕ್ರವಾಹನ ಸವಾರ ನಾಗೇಶ ಗಣೇಶ ಹೆಬ್ಬಾರ ಅವರು, ಭಟ್ಕಳ ಸಾಗರ ರಸ್ತೆ, ಗೋಳಿಕಟ್ಟೆ ಪ್ರದೇಶದಲ್ಲಿ ಬೀದಿನಾಯಿಗಳ ಉಪಟಳ ಜೋರಿದೆ. ಬೀದಿನಾಯಿಗಳಿಂದಾಗಿ ಎಷ್ಟೋ ದ್ವಿಚಕ್ರವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲವರಿಗೆ ನಾಯಿ ಕಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಪಡೆದಿದ್ದಾರೆ. ಹೀಗಾಗಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

click me!