ಹಾಸನಾಂಬೆಯ ಹುಂಡಿಯಲ್ಲಿ ಚಿತ್ರ ವಿಚಿತ್ರ ಕೋರಿಕೆಗಳು!

By Web DeskFirst Published Nov 10, 2018, 2:33 PM IST
Highlights

ಕಳೆದ ಬಾರಿ ಹಾಸನಾಂಬೆಯ ಉತ್ಸವಕ್ಕೆ ನಿರೀಕ್ಷಿತ ಮಟ್ಟದಲ್ಲಿ ಭಕ್ತರು ಆಗಮಿಸದಿರುವುದರಿಂದ ಹುಂಡಿ ಹಣ ಸಂಗ್ರಹದಲ್ಲೂ ಭಾರೀ ಇಳಿಕೆಯಾಗಿದೆ. ಕಳೆದ ಬಾರಿ ಒಟ್ಟು 4.14 ಕೋಟಿ ಸಂಗ್ರಹವಾಗಿತ್ತು. ಆದರೆ ಈ ಬಾರಿ ಟಿಕೆಟ್, ಲಡ್ಡು, ಸೀರೆ ಮಾರಾಟ, ದೇವಾಲಯದ ಹುಂಡಿ ಹೀಗೆ ಎಲ್ಲಾ ಮೂಲಗಳಿಂದ ಒಟ್ಟು 2.55 ಕೋಟಿ ಹಣ ಸಂಗ್ರಹವಾಗಿದೆ. 

ಹಾಸನ[ನ.10]: ವರ್ಷಕ್ಕೊಮ್ಮೆ ತನ್ನ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಐತಿಹಾಸಿಕ ಹಾಸನಾಂಬೆ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಳೊಂದಿಗೆ ಈ ಬಾರಿಯ ಉತ್ಸವಕ್ಕೆ ತೆರೆ ಬಿದ್ದಿದೆ. ನವೆಂಬರ್ 1 ರಿಂದ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ಹಾಸನಾಂಬೆಯ ದರ್ಶನ ಭಾಗ್ಯ ಕಲ್ಪಿಸಿಕೊಡಲಾಗಿತ್ತು.

ಕುಸಿದ ಕಾಣಿಕೆ ಸಂಗ್ರಹ

ಕಳೆದ ಬಾರಿ ಹಾಸನಾಂಬೆಯ ಉತ್ಸವಕ್ಕೆ ನಿರೀಕ್ಷಿತ ಮಟ್ಟದಲ್ಲಿ ಭಕ್ತರು ಆಗಮಿಸದಿರುವುದರಿಂದ ಹುಂಡಿ ಹಣ ಸಂಗ್ರಹದಲ್ಲೂ ಭಾರೀ ಇಳಿಕೆಯಾಗಿದೆ. ಕಳೆದ ಬಾರಿ ಒಟ್ಟು 4.14 ಕೋಟಿ ಸಂಗ್ರಹವಾಗಿತ್ತು. ಆದರೆ ಈ ಬಾರಿ ಟಿಕೆಟ್, ಲಡ್ಡು, ಸೀರೆ ಮಾರಾಟ, ದೇವಾಲಯದ ಹುಂಡಿ ಹೀಗೆ ಎಲ್ಲಾ ಮೂಲಗಳಿಂದ ಒಟ್ಟು 2.55 ಕೋಟಿ ಹಣ ಸಂಗ್ರಹವಾಗಿದೆ. ಒಟ್ಟಾರೆಯಾಗಿ ಹಲವಾರು ಗೊಂದಲಗಳಿದ್ದರೂ ಹಾಸನಾಂಬೆಯ ಉತ್ಸವವು ಅದ್ಧೂರಿ ತೆರೆ ಕಂಡಿದೆ.

ಹುಂಡಿಯಲ್ಲಿ ಚಿತ್ರ ವಿಚಿತ್ರ ಕೋರಿಕೆಗಳು

ಹಾಸನಾಂಬೆ ದೇವಾಲಯದ ಆವರಣದಲ್ಲಿಟ್ಟಿರುವ ಹುಂಡಿಯಲ್ಲಿ ಹಣದ ಜತೆಗೆ ಭಕ್ತರ ನಾನಾ ಬಗೆಯ ಕೋರಿಕೆಯ ಪತ್ರಗಳು ಸಹ ಪತ್ತೆಯಾಗಿವೆ. ಇವುಗಳಲ್ಲಿ ಬಂದ ಭಕ್ತರ ವಿಭಿನ್ನ ಕೋರಿಕೆ, ಪ್ರಾರ್ಥನೆಯ, ನೋವಿನ ಕೋರಿಕೆಗಳು ಹೀಗಿವೆ.  

"ತಾಯಿ ನನ್ನ ಗಂಡನಿಗೆ ಒಳ್ಳೆಯ ಬುದ್ಧಿಕೊಡು.ಕುಡಿಯಲು ಮನಸ್ಸು ಬರದಂತೆ ಮಾಡು. ದುಡಿಯುವ ಮನಸ್ಸು ಕೊಡು. ನಿನಗಿದೋ ಕೋಟಿ ನಮಸ್ಕಾರ". 

"

''ಹಾಸನಾಂಭ ಭಗವತಿ, ನಿನ್ನ ಅಭಯ ಆಶೀರ್ವಾದದಿಂದ ಕೋರ್ಟ್‌ನಲ್ಲಿರುವ ಸಿಎಸ್‌ಪಿ ಮತ್ತಿತರ ಪ್ರಕರಣದಲ್ಲಿ ಜಯದ ದಯೆ ಪಾಲಿಸು'' ಎಂದು ಒಬ್ಬರು ಕೋರಿಕೆ ಸಲ್ಲಿಸಿದರೆ, ''ಶ್ರೀ ಹಾಸನಾಂಭಾಯ ನಮಃ" ಎಂದು 108 ಬಾರಿ ಬರೆದು ಹುಂಡಿಗೆ ಹಾಕಿದ್ದಾರೆ. 

ನ. 2ರಂದು ತಮಿಳುನಾಡಿನಿಂದ ಬಂದಿರುವ ಭಕ್ತರೊಬ್ಬರು ತಮಿಳಿನಲ್ಲೇ ತಮ್ಮ ನೋವುಗಳನ್ನು ವ್ಯಕ್ತಪಡಿಸಿ ಪರಿಹಾರ ಕರುಣಿಸು ಎಂದು ಪತ್ರ ಹಾಕಿದ್ದಾರೆ. 'ಪ್ರೇಮ ವಿವಾಹಕ್ಕೆ ಪೋಷಕರನ್ನು ಒಪ್ಪಿಸು, ಮನೆಕಟ್ಟುವ ಕನಸು ಈಡೇರಿಸು, ಅನಗತ್ಯ ತೊಂದರೆ, ಅಪವಾದ ಕೊಡುತ್ತಿರುವ ದುಷ್ಟರಿಗೆ ನೀನೇ ಬುದ್ಧಿ ಕಲಿಸು' ಹೀಗೆ ಹಲವಾರು ಮಂದಿ ತಮ್ಮ ಮನದಾಳದ ನೋವುಗಳನ್ನು ದೇವಿ ಎದುರು ನಿವೇದಿಸಿಕೊಂಡಿದ್ದಾರೆ.

click me!