
ಬೆಂಗಳೂರು: ಕನಕಪುರ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಕೆಲವು ವಾರಗಳಿಂದ ಮಕ್ಕಳಲ್ಲಿ ಕರುಳುಬೇನೆ (Gastroenteritis) ಪ್ರಕರಣಗಳು ಹೆಚ್ಚುತ್ತಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ದಿನವೂ 4–5 ಮಕ್ಕಳಿಗೆ ವಾಂತಿ, ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಇಲ್ಲಿಯವರೆಗೆ 206 ಮಕ್ಕಳು ಮತ್ತು ವಯಸ್ಕರು ಕರುಳುಬೇನೆಯಿಂದ ಬಳಲಿದ್ದು, ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದೇ ತಿಂಗಳಲ್ಲಿ ಮಾತ್ರ 177 ನಿವಾಸಿಗಳು ಸ್ಥಳೀಯ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುವುದು ಆರೋಗ್ಯ ಇಲಾಖೆಯನ್ನು ಎಚ್ಚರಕ್ಕೆ ತಂದಿದೆ.
ಅಪಾರ್ಟ್‌ಮೆಂಟ್‌ನಲ್ಲಿ ದಾಖಲಾಗುತ್ತಿರುವ ಹೆಚ್ಚಿನ ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ನಗರದ ಪಾಲಿಕೆ ಆರೋಗ್ಯ ಸಿಬ್ಬಂದಿಗಳು ಪ್ರೆಸ್ಟೀಜ್ ಫಾಲ್ಕನ್ ಸಿಟಿಗೆ ಭೇಟಿ ನೀಡಿ ವಸತಿ ಸಂಕೀರ್ಣದ ಮೂಲಭೂತ ಸೌಲಭ್ಯಗಳು, ನೀರು ಪೂರೈಕೆ ವ್ಯವಸ್ಥೆ, ಟ್ಯಾಂಕ್‌ಗಳ ಸ್ವಚ್ಛತೆ ಮತ್ತು ಪೈಪ್‌ಲೈನ್‌ಗಳನ್ನು ಪರಿಶೀಲಿಸಿದ್ದಾರೆ. ಪಾಲಿಕೆ ಅಧಿಕಾರಿಗಳ ಪ್ರಾಥಮಿಕ ಶಂಕೆಯಂತೆ, ಕರುಳುಬೇನೆಗೆ ಕಲುಷಿತ ನೀರು ಕಾರಣವಾಗಿರುವ ಸಾಧ್ಯತೆ ಇರುವುದರಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಅಂತಿಮ ವರದಿ ಹೊರಬರಬೇಕಿದೆ.
ವಾಸ್ತವಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಪಾಲಿಕೆ ಅಧಿಕಾರಿಗಳು ಮತ್ತು ಅಪಾರ್ಟ್‌ಮೆಂಟ್ ನಿವಾಸಿಗಳ ನಡುವೆ ಸಭೆ ನಡೆಸಲಾಯಿತು. ಪಾಲಿಕೆ ತಂಡವು ಅಪಾರ್ಟ್‌ಮೆಂಟ್‌ನಲ್ಲಿ ಮಕ್ಕಳು ಮತ್ತು ವಯಸ್ಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಿದೆ. ಪೋಷಕರು ಹೇಳುವಂತೆ, ಮಕ್ಕಳಲ್ಲಿ ಪದೇ ಪದೇ ಕರುಳುಬೇನೆ ಕಾಣಿಸಿಕೊಳ್ಳುತ್ತಿರುವುದರಿಂದ ಕುಟುಂಬಗಳಲ್ಲಿ ಆತಂಕ ಹೆಚ್ಚಾಗಿದೆ. “ನೀರಿನ ಗುಣಮಟ್ಟದ ಬಗ್ಗೆ ಸ್ಪಷ್ಟತೆ ಇಲ್ಲ. ನಾವು ಬಳಸುವ ಪ್ರತಿಯೊಂದು ವಸ್ತು ಕೂಡ ಮಕ್ಕಳ ಆರೋಗ್ಯಕ್ಕೆ ಸುರಕ್ಷಿತವೇ ಎಂಬ ಭಯದಲ್ಲಿ ಇದ್ದೇವೆ” ಎಂದು ನಿವಾಸಿಗಳು ಹೇಳಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಇದೇ ಅಪಾರ್ಟ್‌ಮೆಂಟ್‌ನಲ್ಲಿ 8 ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದಕ್ಕೆ ಕಲುಷಿತ ನೀರು ಕಾರಣವೆಂದು ಕೆಲವರು ವದಂತಿ ಹಬ್ಬಿಸಿದ್ದರೂ, ಪಾಲಿಕೆ ಆರೋಗ್ಯ ಇಲಾಖೆ ಈ ಆರೋಪವನ್ನು ಖಂಡಿಸಿದೆ. ಮೃತ ಮಗು ಕಳೆದ 2 ವರ್ಷಗಳಿಂದ “ನೆಫ್ರೋಟಿಕ್ ಸಿಂಡ್ರೋಮ್” ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿತ್ತು. ಮಲ್ಟಿ-ಡ್ರಗ್ ರೆಸಿಸ್ಟೆಂಟ್ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ದೃಢಪಟ್ಟಿತ್ತು. ನಿರಂತರವಾಗಿ ಸ್ಟೆರಾಯ್ಡ್ ಔಷಧಿಗಳ ಚಿಕಿತ್ಸೆಯಲ್ಲಿ ಮಗುವಿನ ರೋಗನಿರೋಧಕ ಶಕ್ತಿ ದುರ್ಬಲಗೊಂಡಿತ್ತು. ಹೀಗಾಗಿ ಮಗುವಿನ ಸಾವಿಗೆ ಕಲುಷಿತ ನೀರಿಗೂ ಯಾವುದೇ ಸಂಬಂಧವಿಲ್ಲ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ ಕರುಳುಬೇನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಬೆಂಗಳೂರು ದಕ್ಷಿಣ ಪಾಲಿಕೆ ಆಯುಕ್ತ ರಮೇಶ್ ಹೇಳಿಕೆ. ನೀಡಿ, ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ 2 ಸಾವಿರಕ್ಕೂ ಅಧಿಕ ಫ್ಲಾಟ್ ಗಳಿವೆ. ಕಳೆದ ಹಲವು ದಿನಗಳಿಂದ ಅಲ್ಲಿ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ. ತಮ್ಮ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದೆ. ಜಲಮಂಡಳಿ ಹಾಗೂ ಬೋರ್ ವೆಲ್ ಮತ್ತು ವಾಟರ್ ಟ್ಯಾಂಕರ್ ನೀರು ಬಳಕೆ ಮಾಡುತ್ತಿದ್ದಾರೆ. ನೀರು ಕಲುಷಿತವಾಗಿದೆ ಅಂತಾ ಪರಿಶೀಲನೆ ಮಾಡಲಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳಿಗೆ ಚಿಕಿತ್ಸೆ ನೀಡಿರುವ ಸ್ಥಳೀಯ ಆಸ್ಪತ್ರೆಯ ವೈದ್ಯರ ವರದಿಯನ್ನು ಪಡೆದುಕೊಳ್ಳಲಾಗಿದೆ. ಹೆಚ್ಚಿನ ಕ್ರಮಕ್ಕೆ ಪಾಲಿಕೆ ವೈದ್ಯರನ್ನ ನಿಯೋಜನೆ ಮಾಡಲಾಗಿದೆ. ಮಗುವೊಂದು ಮೃತಪಟ್ಟಿತ್ತು, ಅದಕ್ಕೂ ಕಲುಷಿತ ನೀರಿಗೂ ಸಂಬಂಧವಿಲ್ಲ ಎಂದಿದ್ದಾರೆ.