ಕೊರೋನಾ ವಾರಿಯ​ರ್ಸ್‌ ಕುಟುಂಬಗಳಿಗೆ ವ್ಯಾಕ್ಸಿನ್‌ ಗಗನಕುಸುಮ..!

By Kannadaprabha News  |  First Published Jun 11, 2021, 3:36 PM IST

* ಕೋವಿಡ್‌-19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪಂಚಾಯ್ತಿ ಸಿಬ್ಬಂದಿಗಳ ಕುಟುಂಬಕ್ಕೆ ಲಸಿಕೆ ಸಿಕ್ಕಿಲ್ಲ
* ಕೊರೋನಾ 2ನೇ ಅಲೆಯು ಹೆಚ್ಚಿನ ತೀವ್ರತೆಯಲ್ಲಿ ಹರಡಿ ಸಾವನ್ನಪ್ಪಿದ ಅನೇಕ ಜನರು
* ಸೋಂಕು ತಡೆಗಟ್ಟಲು ತಮ್ಮ ಪ್ರಾಣ ಅಡವಿಟ್ಟು ಜನರನ್ನು ರಕ್ಷಿಸುತ್ತಿರುವ ಕೊರೋನಾ ವಾರಿಯರ್ಸ್‌ 


ಮೊಗುಲಪ್ಪ ಬಿ. ನಾಯಕಿನ್‌

ಗುರುಮಠಕಲ್‌(ಜೂ.11): ಮನೆ ಮನೆಗಳಿಗೆ ತೆರಳಿ ಜನರನ್ನು ಕೊರೋನಾ ವ್ಯಾಕ್ಸಿನ್‌ ಹಾಕಿಸುವಲ್ಲಿ ಶ್ರಮಿಸುತ್ತಿರುವ ಕೊರೋನಾ ವಾರಿಯ​ರ್ಸ್‌ ಅವರ ಕುಟುಂಬಗಳಿಗೆ ಇನ್ನೂ ವ್ಯಾಕ್ಸಿನ್‌ ವ್ಯವಸ್ಥೆಯಿಲ್ಲ ಎನ್ನಲಾಗಿದೆ.

Tap to resize

Latest Videos

undefined

ಕೊರೋನಾ ನಿಯಂತ್ರಿಸುವಲ್ಲಿ ವ್ಯಾಕ್ಸಿನ್‌ ಪ್ರಮಾಣ ತ್ವರಿತವಾಗಿ ಹೆಚ್ಚಿಸಬೇಕು ಎಂದು ದೇಶದ ಪ್ರಧಾನ ಮಂತ್ರಿಗಳು ’ಮನ್‌ ಕಿ ಬಾತ್‌’ನಲ್ಲಿ ಕರೆ ನೀಡಿದ್ದಾರೆ. ಪ್ರಸ್ತುತ 18ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ಹಾಕಲು ಚಾಲನೆ ನೀಡಿದ್ದಾರೆ. ಆಟೋ, ಟ್ಯಾಕ್ಸಿ ಚಾಲಕರಿಗೆ ಮತ್ತು ಬೀದಿ ವ್ಯಾಪಾರಸ್ಥರಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದೆ. ಆದರೆ ಸಮರೋಪಾದಿಯಲ್ಲಿ ಕೊರೋನಾ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಕುಟುಂಬಗಳಿಗೆ ಲಸಿಕೆ ಹಾಕಿಸಿಕೊಳ್ಳುವ ಅದ್ಯತಾ ಪಟ್ಟಿಯಿಂದ ದೂರ ಉಳಿದಿದ್ದಾರೆ.

ಗುರುಮಠಕಲ್‌ ಮತ್ತು ಯಾದಗಿರಿ ತಾಲೂಕಿನಲ್ಲಿ ಒಟ್ಟು 40 ಗ್ರಾಮ ಪಂಚಾಯ್ತಿಗಳಿದ್ದು 38 ಪಿಡಿಓಗಳು, 12 ಜನರು ಗ್ರೇಡ್‌-1 ಸೆಕ್ರೆಟರಿ, 22 ಗ್ರೆಡ್‌-2 ಸೆಕ್ರೆಟರಿಗಳಿದ್ದು, ಎಲ್ಲ ಗ್ರಾ.ಪಂ.ಗಳಲ್ಲಿ ಬಿಲ್‌ ಕಲೆಕ್ಟರ್‌, ಪಂಪ್‌ ಅಪರೇಟರ್‌, ಸಿಪಾಯಿಗಾರರು, ಕಂಪ್ಯೂಟರ್‌ ಅಪರೇಟರ್‌ಗಳು ಸೇರಿ ಒಟ್ಟು ಅಂದಾಜು 500ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಯಾದಗಿರಿ: ಪೊಲೀಸರನ್ನ ಕಂಡು ಏಪ್ರಾನ್‌ ಧರಿಸಿದ ಮಹಿಳೆ..!

ತಾಲೂಕಿನ 175 ಹಳ್ಳಿಗಳಲ್ಲಿ ಕೊರೋನಾದ 2ನೇ ಅಲೆಯು ಹೆಚ್ಚಿನ ತೀವ್ರತೆಯಲ್ಲಿ ಹರಡಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಇನ್ನಷ್ಟು ಕೊರೋನಾ ಸೋಂಕು ತಡೆಯಲು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಯುದ್ಧೋಪಾದಿಯಲ್ಲಿ ಗ್ರಾಮಗಳಲ್ಲಿ ಸ್ಯಾನಿಟೈಜರ್‌ ಸಿಂಪಡಣೆ ಮಾಡಿ, ಹಳ್ಳಿಗಳಿಗೆ ವಲಸೆಯಿಂದ ಮರಳಿ ಸ್ವಗ್ರಾಮಕ್ಕೆ ಬರುವ ಜನರನ್ನು ಗುರುತಿಸಿ ಕ್ವಾರೈಂಟನ್‌ ವ್ಯವಸ್ಥೆ ಮಾಡುವುದರಲ್ಲಿ ಹಾಗೂ ಅವರಿಗೆ ನರೇಗಾ ಯೋಜನೆ ಅಡಿಯಲ್ಲಿ ಕೆಲಸದ ಸೌಲಭ್ಯ ಒದಗಿಸುವಲ್ಲಿ, ಲಾಕ್‌ಡೌನ್‌ ಅನುಷ್ಠಾನ ಸರಿಯಾಗಿ ಜಾರಿಯಾಗುವಂತೆ ಕಟ್ಟುನಿಟ್ಟಿನ ಕ್ರಮ ವಹಿಸುವಲ್ಲಿ, ಜನರಿಗೆ ಮಾಸ್ಕ್‌ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಅರಿವು ಮೂಡಿಸುವಲ್ಲಿ, ಮನೆಗಳಲ್ಲಿ ಇರುವ ಜನರನ್ನು ಲಸಿಕೆ ಕೇಂದ್ರಕ್ಕೆ ಕರೆದುಕೊಂಡು ಬಂದು ಕೊರೋನಾ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿ ಹಗಲುರಾತ್ರಿ ದುಡಿಯುತ್ತಿದ್ದಾರೆ.

ಅವರನ್ನೆ ನಂಬಿರುವ ಕುಟುಂಬಗಳಿಗೆ ಸರಕಾರ ವ್ಯಾಕ್ಸಿನ್‌ಗೆ ಅವಕಾಶ ಮಾಡಿಕೊಟ್ಟಿಲ್ಲ. ಗುರುಮಠಕಲ್‌ ತಾಲೂಕಿನ ಕರ್ತವ್ಯನಿರತ ಪುಟಪಾಕ್‌ ಗ್ರಾ.ಪಂ. ಬಿಲ್‌ ಕಲೆಕ್ಟರ್‌ ಹಾಗೂ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾ.ಪಂ. ಪಂಪ್‌ ಅಪರೇಟರ್‌ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುತ್ತಾರೆ. ತಾಲೂಕಿನ ವರ್ಕನಹಳ್ಳಿ, ಕಳೆಬೆಳಗುಂದಿ,ಎಲ್ಹೇರಿ ಇನ್ನು ಹಲವು ಗ್ರಾ.ಪಂ.ನ ಸಿಬ್ಬಂದಿ ಕೊರೋನಾ ಸೋಂಕಿಗೆ ಒಳಗಾಗಿರುತ್ತಾರೆ ಮತ್ತು ಅನೇಕ ಗ್ರಾ.ಪಂ. ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರನ್ನು ಕೊರೋನಾ ಕಾಯಿಲೆಯಿಂದ ಕಳೆದುಕೊಂಡಿರುತ್ತಾರೆ.

ಕೊರೋನಾ ಸೋಂಕಿನಿಂದ ಸಾವುನ್ನಪ್ಪಿರುವ ಗ್ರಾ.ಪಂ.ಸಿಬ್ಬಂದಿ ಕುಟುಂಬ ಸದಸ್ಯರಿಗೆ ಸೂಕ್ತ ಪರಿಹಾರ ಒದಗಿಸಿ ಜೀವನ ಭದ್ರತೆ ಒದಗಿಸಬೇಕಾಗಿದೆ ಹಾಗೂ ಇವರ ಕುಟುಂಬಗಳಿಗೆ ಕೊರೋನಾ ಲಸಿಕೆ ಹಾಕಿಸುವ ಆಧ್ಯತಾ ಪಟ್ಟಿಯಲ್ಲಿ ಸೇರಿಸಿ ಕೊರೋನಾ ವಾರಿಯ​ರ್‍ಸ್ಗಳಿಗೆ ರಕ್ಷಣ ಕವಚ ಒದಗಿಸಿ ಕೊರೋನಾ ತಡೆಗಟ್ಟುವಲ್ಲಿ ಇನ್ನಷ್ಟು ಉತ್ತಮ ಕಾರ್ಯನಿರ್ವಾಹಿಸಲು ಅವರಲ್ಲಿ ಆತ್ಮವಿಶ್ವಾಸ ತುಂಬಿಸಬೇಕಾಗಿದೆ.

ನಮ್ಮ ತಾಲೂಕಿನ ಪಂಚಾಯತಿಯಲ್ಲಿ ಬಿಲ್‌ ಕಲೆಕ್ಟರ್‌ ಹಾಗೂ ಪಂಪ್‌ ಅಪರೇಟರ್‌ ಅವರಿಬ್ಬರು ಕರೋನಾ ಸೋಂಕಿನಿಂದ ಮೃತರಾಗಿದ್ದಾರೆ.ಅವರ ಕುಟುಂಬಗಳಿಗೆ ಪರಿಹಾರ ಒದಗಿಸಲು ನಿಯಮಾನುಸರ ಕ್ರಮವಹಿಸಲಾಗುತ್ತಿದೆ ಎಂದು ಗುರುಮಠಕಲ್‌ ಕಾರ್ಯನಿರ್ವಾಹಕ ಅ​ಕಾರಿ ಬಸವರಾಜ ಶರಭ್ಯೆ ತಿಳಿಸಿದ್ದಾರೆ. 

ಕೊರೋನಾ ಸೋಂಕು ತಡೆಗಟ್ಟಲು ಹೊರಗಡೆ ನಮ್ಮ ಪ್ರಾಣ ಅಡವಿಟ್ಟು ಜನರನ್ನು ನಾವು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಕುಟುಂಬಗಳನ್ನು ರಕ್ಷಿಸುವಲ್ಲಿ ಸರಕಾರ ಮುಂದೆಬಂದು ಗ್ರಾ.ಪಂ.ಸಿಬ್ಬಂದಿಗಳ ಕುಟುಂಬಕ್ಕೆ ತ್ವರಿತವಾಗಿ ಕೊರೋನಾ ಲಸಿಕೆ ಹಾಕಿಕೊಳ್ಳುವ ಆಧ್ಯತಾ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೆಸರು ಹೇಳಲು ಇಚ್ಚಿಸದ ಗ್ರಾ.ಪಂ.ಸಿಬ್ಬಂದಿಯೊಬ್ಬರು ಹೇಳಿದ್ದಾರೆ. 
 

click me!