ತಗ್ಗಿದ ಕೊರೋನಾ: ಗ್ರಾಮೀಣದಲ್ಲಿ ತೀವ್ರ ಇಳಿಕೆ ಕಂಡ ಸೋಂಕು..!

By Kannadaprabha NewsFirst Published Jun 11, 2021, 3:03 PM IST
Highlights

* ಹಳ್ಳಿಗಳ ಕಡೆ ವೈದ್ಯರ ನಡಿಗೆಯ ಫಲಶ್ರುತಿ
* 449 ಹಳ್ಳಿಗಳು ಕೋವಿಡ್‌ ಮುಕ್ತ
* ಆಶಾ-ಅಂಗನವಾಡಿ ಕಾರ್ಯಕರ್ತೆಯರ ಶ್ರಮವೂ ಹೆಚ್ಚು
 

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜೂ.11): ಕೋವಿಡ್‌ ಎರಡನೇ ಅಲೆ ಗ್ರಾಮೀಣ ಭಾಗದಲ್ಲೂ ಹಬ್ಬಿ ಭಾರೀ ಸಾವು-ನೋವಿನ ಆತಂಕ ಮೂಡಿಸಿತ್ತು. ಆದರೆ, ಸಕಾಲಕ್ಕೆ ಎಚ್ಚೆತ್ತುಕೊಂಡ ಜಿಲ್ಲಾಡಳಿತದ ನಿಲುವು ಹಾಗೂ ವೈದ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ನಿರಂತರ ಪರಿಶ್ರಮ ಫಲವಾಗಿ ಹಳ್ಳಿಜನರು ಕೋವಿಡ್‌ನಿಂದ ಪಾರಾಗಿದ್ದಾರೆ. ನೂರಾರು ಹಳ್ಳಿಗಳು ಕೋವಿಡ್‌ ಮುಕ್ತ ಗ್ರಾಮಗಳಾಗಿ ನಿರಮ್ಮಳವಾಗುತ್ತಿವೆ. ಇದೇ ವೇಳೆ ‘ಹಳ್ಳಿಗಳ ಕಡೆ ವೈದ್ಯರ ನಡಿಗೆ’ ಫಲ ನೀಡಿದ್ದು ಹಳ್ಳಿಜನರ ಆರೋಗ್ಯ ಸ್ಥಿತಿಗತಿಯನ್ನು ಅರಿಯಲು ಇದರಿಂದ ಸಾಧ್ಯವಾಗಿದೆ.

ಹಾಗೆ ನೋಡಿದರೆ ಬಳ್ಳಾರಿ ಜಿಲ್ಲೆಯ ಬಹುತೇಕ ಗ್ರಾಮೀಣರು ಸೋಂಕಿನ ಲಕ್ಷಣಗಳು ಕಂಡು ಬಂದರೂ ನಾನಾ ಆತಂಕಗಳಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿಲ್ಲ. ಹೀಗಾಗಿಯೇ ಅನೇಕರು ಸೋಂಕು ಉಲ್ಬಣಗೊಂಡು ಸಾವಿನ ಮನೆಯ ಕದ ತಟ್ಟಿದರು. ಗ್ರಾಮೀಣ ಭಾಗದ ಪ್ರತಿ ಮನೆಯ ಸರ್ವೇ ಕಾರ್ಯ ಆರಂಭಿಸಿ, ಪ್ರತಿಮನೆಯ ಸದಸ್ಯರ ಆರೋಗ್ಯ ಸ್ಥಿತಿಗತಿಯ ಕಡೆ ಗಮನ ಹರಿಸಿದ್ದರಿಂದ ಸಾವಿರಾರು ಜನರಿಗೆ ಸೋಂಕಿನ ಲಕ್ಷಣ ಇರುವುದು ಪತ್ತೆಯಾಯಿತಲ್ಲದೆ, ಕೂಡಲೇ ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ, ಸ್ಥಳೀಯವಾಗಿ ನಿರ್ಮಿಸಲಾಗಿದ್ದ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಲಾಯಿತು. ಈ ನಿರ್ಧಾರ ಸೋಂಕಿನ ಲಕ್ಷಣವುಳ್ಳವರ ಜೀವ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಯಿತು.

ಬ್ಯಾಡಗಿ: ಕೋವಿಡ್‌ ಟೆಸ್ಟ್‌ಗೆ ಹೆದರಿ ಊರನ್ನೇ ತೊರೆದ ಗ್ರಾಮಸ್ಥರು..!

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದ್ದ 1892 ರೋಗಿಗಳನ್ನು ಜಿಲ್ಲೆಯ ವಿವಿಧೆಡೆಯ ಕೋವಿಡ್‌ ಕೇರ್‌ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಈ ಪೈಕಿ 1609 ಜನರು ಗುಣಮುಖರಾಗಿದ್ದು ಇನ್ನು 95 ಜನರು ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗಳಿಗೆ ದಾಖಲಾದರು.

ಕೋವಿಡ್‌ ನಿಯಂತ್ರಣ ಕಾರ್ಯ:

ಗ್ರಾಮೀಣ ಭಾಗದಲ್ಲಿ ಹಬ್ಬಿರುವ ಸೋಂಕು ನಿಯಂತ್ರಿಸಲು ‘ಕುಟುಂಬ ಆರೋಗ್ಯ ಸಂರಕ್ಷಣಾ ತಂಡ’ ರಚಿಸಲಾಗಿತ್ತು. 50 ಕುಟುಂಬಕ್ಕೆ ಒಬ್ಬ ಸಿಬ್ಬಂದಿ/ ಸ್ವಯಂ ಸೇವಕರು ಮನೆ-ಮನೆಗೆ ಸರ್ವೇ ಮಾಡುವ ಕಾರ್ಯದಲ್ಲಿ ತೊಡಿಸಿಕೊಂಡಿದ್ದರು. ಇದರಲ್ಲಿ ನರೇಗಾ ಕಾಯಕ ಬಂಧುಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಮದ ಪದವೀಧರರು, ನೀರುಗಂಟಿಗಳು, ಸ್ವಸಹಾಯ ಗುಂಪಿನ ಸದಸ್ಯರು, ಆಸಕ್ತ ಯುವಕರು ತಂಡದಲ್ಲಿದ್ದರು. ಇದಲ್ಲದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒಗಳು, ಗ್ರಾಮ ಲೆಕ್ಕಿಗರು, ಕಿರಿಯ ಆರೋಗ್ಯ ಸಹಾಯಕರು, ಬೀಟ್‌ ಪೊಲೀಸರು, ಪ್ರಾಥಮಿಕ ಶಾಲೆಗಳ ಮುಖ್ಯಗುರುಗಳು ಹಾಗೂ ಗ್ರಾಮದ ಯುವಕ ಸಂಘದ ಸದಸ್ಯರು ಕಾರ್ಯಪಡೆಯಲ್ಲಿದ್ದು, ಜಿಲ್ಲಾಡಳಿತ ಕೈಗೊಂಡಿದ್ದ ಹಳ್ಳಿಗಳಲ್ಲಿನ ಸೋಂಕು ನಿಯಂತ್ರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಗ್ರಾಮೀಣ ಪ್ರದೇಶಗಳನ್ನು ಕೋವಿಡ್‌ ಮುಕ್ತವನ್ನಾಗಿಸಲು ಶ್ರಮಿಸಿದರು.

449 ಗ್ರಾಮ ಕೋವಿಡ್‌ ಮುಕ್ತ

ಬಳ್ಳಾರಿ ಜಿಲ್ಲೆಯ 449 ಗ್ರಾಮಗಳು ಕೋವಿಡ್‌ ಮುಕ್ತವಾಗಿವೆ. ಕೋವಿಡ್‌ ಪ್ರಕರಣಗಳು ದಾಖಲಾದ ಜಿಲ್ಲೆಯ 11 ತಾಲೂಕುಗಳ 237 ಗ್ರಾಪಂಗಳ 1043 ಗ್ರಾಮಗಳ ಪೈಕಿ 15,421 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಜಿಲ್ಲೆಯಲ್ಲೀಗ ಬರೀ 2687 ಸಕ್ರಿಯ ಪ್ರಕರಣಗಳು ಇದ್ದು, ಇನ್ನು ಕೆಲವೇ ದಿನಗಳಲ್ಲಿ ಸಕ್ರಿಯ ಪ್ರಕರಣಗಳು ತೀವ್ರ ಕುಸಿತ ಕಾಣಲಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕೊಪ್ಪಳ: ಈ ಗ್ರಾಮದತ್ತ ಕಾಲಿಡದ ಕೊರೋನಾ..!

ಜಿಲ್ಲೆಯಲ್ಲಿ 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಗ್ರಾಮಗಳು 66 ಇದ್ದು, 10ಕ್ಕಿಂತ ಕಡಿಮೆ ಹಾಗೂ 5ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಗ್ರಾಮಗಳ ಸಂಖ್ಯೆ 111 ಹಾಗೂ 5ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ಇರುವ ಗ್ರಾಮಗಳು 417 ಇವೆ. ಜಿಲ್ಲೆಯ ಪೈಕಿ ಅತಿ ಹೆಚ್ಚು ಹರಪನಹಳ್ಳಿ ತಾಲೂಕಿನಲ್ಲಿ 553 ಸಕ್ರೀಯ ಪ್ರಕರಣಗಳು ಇದ್ದು, ಕಂಪ್ಲಿ ತಾಲೂಕಿನಲ್ಲಿ ಅತಿ ಕಡಿಮೆ 130 ಇವೆ.

ಶ್ರಮದ ಫಲದಿಂದ ಸೋಂಕಿಗೆ ಕಡಿವಾಣ

ಗ್ರಾಮೀಣ ಭಾಗದಲ್ಲಿ ಸೋಂಕು ತೀವ್ರ ಇಳಿಕೆ ಕಂಡು ಬರುತ್ತಿದ್ದು, ವೈದ್ಯಕೀಯ ತಂಡ, ಆಶಾ, ಅಂಗನವಾಡಿ ಕಾರ್ಯಕರ್ತರ ಹೆಚ್ಚಿನ ಶ್ರಮವಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಜನಾರ್ದನ. ಜಿಲ್ಲಾ ಪಂಚಾಯಿತಿ ವತಿಯಿಂದ ಕೈಗೊಂಡ ಮನೆಮನೆ ಸರ್ವೇಯಿಂದ ಗ್ರಾಮೀಣ ಜನರಲ್ಲಿನ ಸೋಂಕಿತರನ್ನು ಪತ್ತೆ ಹಚ್ಚಲು ಕಾರಣವಾಯಿತು. ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಸೋಂಕು ಉಲ್ಬಣಗೊಳ್ಳುವ ಮುನ್ನವೇ ವೈದ್ಯಕೀಯ ಪರೀಕ್ಷೆಗೆ ಬರುವವರ ಸಂಖ್ಯೆ ಹೆಚ್ಚಾಯಿತು. ಇದು ಸೋಂಕು ನಿಯಂತ್ರಣಕ್ಕೆ ಹೆಚ್ಚು ಸಹಕಾರಿಯಾಯಿತು ಎನ್ನುತ್ತಾರೆ ಡಿಎಚ್‌ಒ ಡಾ. ಜನಾರ್ದನ.
 

click me!