ಬದುಕು ನರಕವಾಗಿಸುವ ನಶೆಗಳಿಂದ ದೂರವಿರಿ: ನಟಿ ಪೂಜಾಗಾಂಧಿ

By Govindaraj SFirst Published Jan 11, 2024, 10:47 PM IST
Highlights

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್, ದೊಡ್ಡಬಳ್ಳಾಪುರ ಉಪವಿಭಾಗದಿಂದ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಮ್ಯಾರಥಾನ್‌ಗೆ ಚಿತ್ರನಟಿ ಪೂಜಾಗಾಂಧಿ ಚಾಲನೆ ನೀಡಿದರು. 

ದೊಡ್ಡಬಳ್ಳಾಪುರ (ಜ.11): ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್, ದೊಡ್ಡಬಳ್ಳಾಪುರ ಉಪವಿಭಾಗದಿಂದ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಮ್ಯಾರಥಾನ್‌ಗೆ ಚಿತ್ರನಟಿ ಪೂಜಾಗಾಂಧಿ ಚಾಲನೆ ನೀಡಿದರು. ಯುವ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪೂಜಾಗಾಂಧಿ, ತಮ್ಮಲ್ಲಿನ ಮಾನಸಿಕ ಒತ್ತಡ ನಿವಾರಣೆಗೆ ಹಲವಾರು ಮಾರ್ಗಗಳಿವೆ. ಬದುಕನ್ನು ನರಕವಾಗಿಸುವ ನಶೆಗಳಿಂದ ದೂರವಾಗಿರುವ ಕುರಿತು ಯುವಜನರು ಚಿಂತನೆ ನಡೆಸಬೇಕು. ನಮ್ಮಲ್ಲಿ ಪ್ರೀತಿಯ ನಶೆ, ಆರೋಗ್ಯದ ನಶೆ, ದೇಶದ ಜನರನ್ನು ಗೌರವಿಸುವ ನಶೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಮಾದಕ ವಸ್ತುಗಳ ರುಚಿ ಒಮ್ಮೆ ನೋಡಲು ಹೋದರೆ ಸದಾ ಅದು ತನ್ನತ್ತ ಸೆಳೆಯುತ್ತದೆ. ಹಾಗಾಗಿ ಒಮ್ಮೆಯೂ ಅದರ ಕಡೆಗೆ ಯೋಚನೆಯನ್ನೇ ಮಾಡಬಾರದು. ಮಾದಕ ವಸ್ತುಗಳ ವ್ಯಸನಿಗಳಾದರೆ ಸ್ನೇಹಿತರು, ಹೆತ್ತವರು ಸೇರಿದಂತೆ ಎಲ್ಲರಿಂದಲೂ ದೂರವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಾದಕ ವಸ್ತುಗಳ ಪತ್ತೆ ಹಚ್ಚುವುದು ಸೇರಿದಂತೆ ರಾಜ್ಯ ಒಳಗಿನ ಜನರು ಸುರಕ್ಷಿತವಾಗಿ ಬದುಕಲು ಪೊಲೀಸರ ಶ್ರಮವನ್ನು ಗೌರವಿಸಬೇಕು. ಮಾದಕ ವಸ್ತುಗಳ ಪತ್ತೆ, ನಿಯಂತ್ರಣಕ್ಕೆ ಜನರ ಸಹಕಾರ ಇರಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಾದಕ ವಸ್ತುಗಳ ತಡೆ ಕುರಿತಂತೆ ಜನರ ಜಾಗೃತಿ ಮೂಡಿಸುವುದು, ಮಾದಕ ವ್ಯಸನಿಗಳ ತಡೆಯುವಲ್ಲಿ ಸಾರ್ವಜನಿಕ ಜನರ ಸಹಕಾರ ಮುಖ್ಯ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ, ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಜಾಗೃತಿ ಮ್ಯಾರಥಾನ್‌ಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!

ಜಿಲ್ಲಾ ಪೊಲೀಸ್‌ ಹೆಚ್ಚುವರಿ ವರಿಷ್ಠಾಧಿಕಾರಿ ಪುರುಷೋತ್ತಮ್, ನಾಗರಾಜ್, ಚಿತ್ರನಟ ರಘುನಂದನ್, ಡಾ.ಅರ್ಜುನ್‌, ಡಿವೈಎಸ್‌ಪಿ ಪಿ.ರವಿ, ಜಗದೀಶ್‌, ಆರಕ್ಷಕ ನಿರೀಕ್ಷಕ ಅಮರೇಶ್‌ ಗೌಡ, ಮುನಿಕೃಷ್ಣ, ಎಂ.ಆರ್.ಹರೀಶ್, ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಜಶೇಖರ್ ಮತ್ತಿತರರು ಭಾಗಿಯಾಗಿದ್ದರು. ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳಿಂದ ಯುವಜನರು ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡರು.

click me!