ಚುನಾವಣೆ ಗೆಲ್ಲುವುದಕ್ಕೋ ಇಲ್ಲ ಜನರಿಗೆ ಅನುಕೂಲ ಮಾಡುವುದಕ್ಕೋ ಒಟ್ಟಿನಲ್ಲಿ ಕಾಂಗ್ರೆಸ್ ಐದು ಯೋಜನೆಗಳನ್ನು ಘೋಷಣೆ ಮಾಡಿತ್ತು. ಗೆದ್ದು ಬರುತ್ತಿದ್ದಂತೆ ಯೋಜನೆಗಳನ್ನು ಜಾರಿಯೂ ಮಾಡಿತು. ಆದರೆ ಕೊಡಗು ಜಿಲ್ಲೆಯಲ್ಲಿ ಇಂದಿಗೂ ಬರೋಬ್ಬರಿ 10 ಸಾವಿರ ಕುಟುಂಬಗಳು ಗೃಹಜ್ಯೋತಿ ಯೋಜನೆಯಿಂದ ವಂಚಿತವಾಗಿವೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜ.11): ಚುನಾವಣೆ ಗೆಲ್ಲುವುದಕ್ಕೋ ಇಲ್ಲ ಜನರಿಗೆ ಅನುಕೂಲ ಮಾಡುವುದಕ್ಕೋ ಒಟ್ಟಿನಲ್ಲಿ ಕಾಂಗ್ರೆಸ್ ಐದು ಯೋಜನೆಗಳನ್ನು ಘೋಷಣೆ ಮಾಡಿತ್ತು. ಗೆದ್ದು ಬರುತ್ತಿದ್ದಂತೆ ಯೋಜನೆಗಳನ್ನು ಜಾರಿಯೂ ಮಾಡಿತು. ಆದರೆ ಕೊಡಗು ಜಿಲ್ಲೆಯಲ್ಲಿ ಇಂದಿಗೂ ಬರೋಬ್ಬರಿ 10 ಸಾವಿರ ಕುಟುಂಬಗಳು ಗೃಹಜ್ಯೋತಿ ಯೋಜನೆಯಿಂದ ವಂಚಿತವಾಗಿವೆ. ಇದನ್ನು ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಆದರೂ ಇದು ಸತ್ಯ. ಜಿಲ್ಲೆಯಲ್ಲಿ ಒಟ್ಟು 1,59,299 ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ಅರ್ಹತೆ ಪಡೆದಿರುವ ಕುಟುಂಬಗಳಿವೆ. ಈ ಎಲ್ಲಾ ಕುಟುಂಬಗಳಿಗೆ ಯೋಜನೆಯ ಭಾಗ್ಯ ನೀಡಿ ಶೇ 100 ರಷ್ಟು ಸಾಧನೆ ಮಾಡಲು ಸಾಧ್ಯವೇ ಆಗಿಲ್ಲ.
undefined
ಜಿಲ್ಲೆಯಲ್ಲಿ 1,59,299 ಕುಟುಂಬಗಳು ಈ ಯೋಜನೆಯ ಪಡೆಯಲು ಅರ್ಹರಿದ್ದರೂ ಇದುವರೆಗೆ ಜಿಲ್ಲೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿರುವುದೇ 1.49,714 ಕುಟುಂಬಗಳಿಗೆ. ಅಂದರೆ ಇನ್ನುಳಿದ 9,585 ಕುಟುಂಬಗಳಿಗೆ ಇಂದಿಗೂ ಯೋಜನೆಯ ಭಾಗ್ಯವಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ಕುಟುಂಬಗಳು ಯೋಜನೆಯಿಂದ ಹೊರಗುಳಿದಿರುವುದರಲ್ಲಿ ಪೊನ್ನಂಪೇಟೆ ತಾಲ್ಲೂಕಿನಲ್ಲೇ ಅತೀ ಹೆಚ್ಚು. ಹೌದು ಪೊನ್ನಂಪೇಟೆ ತಾಲ್ಲೂಕಿನ ಶೇ 82.66 ರಷ್ಟು ಮಾತ್ರವೇ ಸಾಧನೆ ಆಗಿದ್ದರೆ, ಮಡಿಕೇರಿ ತಾಲ್ಲೂಕಿನಲ್ಲಿ 93.24 ರಷ್ಟು ಸಾಧನೆ ಮಾಡಲಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಶೇ 93.66 ರಷ್ಟು ಕುಟುಂಬಗಳಿಗೆ ಯೋಜನೆಯನ್ನು ಕಲ್ಪಿಸಿದ್ದರೆ, ಸೋಮವಾರಪೇಟೆ ತಾಲ್ಲೂಕಿನಲ್ಲಿ 98.33 ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ 98.86 ರಷ್ಟು ಅಂದರೆ ಅತೀ ಹೆಚ್ಚಿನ ಸಾಧನೆ ಆಗಿದೆ.
ಪ್ರತಿ ಕೆಲಸಕ್ಕೂ ಸಲ್ಲದ ನಿಯಮದಿಂದ ಹೈರಾಣಾದ ಮಡಿಕೇರಿ ನಗರದ ಜನತೆ: ತಪ್ಪಿದ ಕೋಟ್ಯಂತರ ಆದಾಯ!
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಷ್ಟು ಕಡಿಮೆ ಸಾಧನೆ ಆಗಿರುವುದಕ್ಕೆ ಆ ತಾಲ್ಲೂಕಿನ ಕಾಫಿ ತೋಟಗಳಲ್ಲಿ ಅತೀ ಹೆಚ್ಚು ಲೈನ್ಮನೆಗಳು ಇರುವುದೇ ಕಾರಣ ಎನ್ನುವುದು ಚೆಸ್ಕಾಂ ಇಲಾಖೆ ಅಭಿಪ್ರಾಯ. ಹೌದು ಅತೀ ಹೆಚ್ಚು ಲೈನ್ ಮನೆಗಳು ಇರುವುದರಿಂದ ಈ ಲೈನ್ಮನೆಗಳಲ್ಲಿ ಇರುವ ಕುಟುಂಬಗಳು ಈ ಗೃಹಜ್ಯೋತಿ ಯೋಜನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಕಾಫಿ ತೋಟದ ಮಾಲೀಕರು ಎನ್ನುತ್ತಾರೆ ಚೆಸ್ಕಾಂ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಅವರು. ಕಾಫಿ ತೋಟದ ಲೈನ್ಮನೆಗಳಲ್ಲಿ ವಾಸಿಸುವವರು ಈ ಯೋಜನೆಗೆ ಒಳಪಡಬೇಕಾದರೆ ಆ ಮನೆಗಳ ಮಾಲೀಕರು ಬಾಡಿಗೆ ಕಾರರಾರು ಪತ್ರ ಮಾಡಿಕೊಡಬೇಕು.
ಆದರೆ ಮಾಲೀಕರು ಕರಾರು ಪತ್ರ ಮಾಡಿಕೊಡುವುದಿಲ್ಲ. ಹೀಗಾಗಿ ಆ ಕುಟುಂಬಗಳು ಯೋಜನೆಯಿಂದ ಹೊರಗೆ ಉಳಿದಿವೆ ಎನ್ನುತ್ತಾರೆ. ಜೊತೆಗೆ ಜಿಲ್ಲೆಯಲ್ಲಿ ಒಂದಷ್ಟು ಜನರು ಮನೆಬಿಟ್ಟು ಹೊರ ಜಿಲ್ಲೆಯಲ್ಲಿ ಇದ್ದಾರೆ. ಇದರಿಂದಾಗಿಯೂ ಪೂರ್ಣ ಪ್ರಮಾಣದಲ್ಲಿ ಯೋಜನೆಯ ಗುರಿ ಸಾಧಿಸಿಲ್ಲ. ಇದರ ಜೊತೆಗೆ ಮತ್ತೊಂದಷ್ಟು ಕುಟುಂಬಗಳ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸುವ ಸಂದರ್ಭ ಹೊಂದಾಣಿಕೆಯಾಗುತ್ತಿಲ್ಲ. ಇವೆಲ್ಲಾ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಾಜೇಶ್ ಯಲ್ಲಪ್ಪ, ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವುದಕ್ಕಾಗಿಯೇ ಸರ್ಕಾರ ಈಗಾಗಲೇ ಸಮಿತಿ ರಚಿಸುವುದಕ್ಕೆ ನಿರ್ಧರಿಸಿದೆ.
ಕೊಡಗಿನ ಕುಂದಬೆಟ್ಟದ ತಪ್ಪಲಿನಲ್ಲಿ ಪಾಂಡವರ ಕಾಲದ ಪುರಾತನ ಶಿವಲಿಂಗ ಪತ್ತೆ!
ಈ ತಿಂಗಳು ಕೊನೆಯಷ್ಟರಲ್ಲಿ ಸಮಿತಿ ನೇಮಕವಾಗಲಿದ್ದು ಇಂತಹ ಪ್ರಕರಣಗಳನ್ನು ಆದಷ್ಟು ಶೀಘ್ರವೇ ಇತ್ಯರ್ಥಪಡಿಸಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪಿಸಲು ಕ್ರಮಕೈಗೊಳ್ಳಾಗುವುದು ಎಂದಿದ್ದಾರೆ. ಏನೇ ಆಗಲಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಸರ್ಕಾರವೇನೋ ಹೇಳಿದೆ. ಆದರೆ ಕೂಲಿ ಕೆಲಸ ಮಾಡಿಕೊಂಡು ಲೈನ್ಮನೆಗಳಲ್ಲಿ ಬದುಕುವ ಸಾವಿರಾರು ಕುಟುಂಬಗಳು ಈ ಯೋಜನೆಯಿಂದ ವಂಚಿತರಾಗಿರುವುದು ಸರ್ಕಾರದ ಯೋಜನೆ ಎಷ್ಟರ ಮಟ್ಟಿಗೆ ತಲುಪುತ್ತಿದೆ ಎನ್ನುವುದನ್ನು ಪ್ರಶ್ನಿಸುವಂತೆ ಮಾಡಿದೆ.