ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ನ.12): ಮುಸ್ಲಿಮರಲ್ಲಿ ಮೂರ್ತಿ ಪೂಜೆಗೆ ಅವಕಾಶ ಇಲ್ಲ. ಅವರು ಅಲ್ಲಾಹ್ ಬಿಟ್ಟರೆ ಪೈಗಂಬರರನ್ನೂ ಪೂಜೆ ಮಾಡೋದಿಲ್ಲ. ಹೀಗಿರುವಾಗ ಟಿಪ್ಪು ಪ್ರತಿಮೆ ನಿರ್ಮಿಸಲು ಹೊರಟಿರುವುದು ನೋಡಿದರೆ, ಮುಸ್ಲಿಮರು ಮೂರ್ತಿ ಪೂಜೆ ಪ್ರಾರಂಭಿಸಿದ್ದೇವೆ ಎಂದು ಒಪ್ಪಿಕೊಂಡಂತೆ ಆಯ್ತು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತನ್ವೀರ್ ಸೇಠ್ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ ಅಂತಾ ಒಪ್ಪಿಕೊಳ್ಳಬೇಕು. ನಮ್ಮ ದೇವಸ್ಥಾನಗಳನ್ನ ಬಿಟ್ಟುಕೊಡಬೇಕು. ಮೈಸೂರು ನಮ್ಮ ಸ್ವಾಭಿಮಾನದ ಸಾಂಸ್ಕೃತಿಕ ಕೇಂದ್ರ. ಮೈಸೂರು ಮಹಾರಾಣಿಯನ್ನ ಬಂಧಿಸಿ, ಮೋಸದಿಂದ ರಾಜ್ಯಭಾರ ಮಾಡಿದ ವ್ಯಕ್ತಿ ಟಿಪ್ಪು. ಅವನ ಮೂರ್ತಿಯನ್ನ ನೂರು ಅಲ್ಲ, ಒಂದಿಂಚು ಜಾಗದಲ್ಲೂ ನಿರ್ಮಾಣ ಮಾಡೋದಕ್ಕೆ ಬಿಡೋದಿಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪುಜಯಂತಿ ಆಚರಿಸಿದ ಸ್ಥಳ ಗೋಮೂತ್ರದಿಂದ ಶುದ್ಧೀಕರಣ ಮಾಡಿದ ಮುತಾಲಿಕ್
ಟಿಪ್ಪು ಸುಲ್ತಾನನ 100 ಅಡಿ ಮೂರ್ತಿ ಮಾಡುತ್ತೇವೆ ಅನ್ನೋದು ಇಸ್ಲಾಂಗೆ ವಿರುದ್ಧ ಅಷ್ಟೇ ಅಲ್ಲ ಇದು ಸೊಕ್ಕಿನ ಮಾತು. ಇವೆಲ್ಲಾ ನಡೆಯೋದಿಲ್ಲ. ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಮೂರ್ತಿ ಇದೆ ಅದನ್ನು ಬಿಟ್ಟುಕೊಡಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲೂ ದೇವಸ್ಥಾನದ ಸ್ವರೂಪ ಸಿಕ್ಕಿದೆ. ಅದನ್ನೂ ಬಿಡಬೇಕು. ಶ್ರೀರಂಗಪಟ್ಟಣದ ಹನುಮನ ಮಂದಿರ ಇಂದು ಮದರಸ ಆಗಿದೆ. ಅದನ್ನೂ ಬಿಟ್ಟುಕೊಡಬೇಕು ಇಲ್ಲ, ತನ್ವೀರ್ ಸೇಠ್ ವಿರುದ್ಧ ಫತ್ವಾ ಹೊರಡಿಸಬೇಕು, ಬಹಿಷ್ಕಾರ ಹಾಕಬೇಕು ಎಂದಿದ್ದಾರೆ.
ನೀವು ಇವುಗಳನ್ನ ಮಾಡ್ತೀರೋ ಇಲ್ವೋ ಗೊತ್ತಿಲ್ಲ. ಆದರೆ, ಯಾವುದೇ ಪರಿಸ್ಥಿತಿಯಲ್ಲೂ ಮೈಸೂರಲ್ಲಿ ಮೂರ್ತಿ ನಿರ್ಮಾಣಕ್ಕೆ ನಾವು ಬಿಡಲ್ಲ. ಬಾಬರಿ ಮಸೀದಿ ಒಡೆದ ರೀತಿಯಲ್ಲೇ ಲಕ್ಷಾಂತರ ಜನ ಬಂದು ಮೂರ್ತಿಯನ್ನ ಒಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ದತ್ತಮಾಲಾ ಅಭಿಯಾನ: ನಾಳೆ ಚಿಕ್ಕಮಗಳೂರಿನಲ್ಲಿ ಶೋಭಾ ಯಾತ್ರೆ
ಚುನಾವಣೆಯಲ್ಲಿ ಸ್ಪರ್ಧೆ ಖಚಿತ :
ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಎದುರಾಗುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವೆಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದಾರೆ. ರಾಜ್ಯದ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವುದು ಇನ್ನೂ ಖಚಿತವಾಗಿಲ್ಲ ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು ಯಾವ ಕ್ಷೇತ್ರ ಎನ್ನುವುದನ್ನು ಡಿಸೆಂಬರ್ ಹೊತ್ತಿಗೆ ಘೋಷಣೆ ಮಾಡುವುದಾಗಿ ತಿಳಿಸಿದರು. ಕ್ಷೇತ್ರದ ಬಗ್ಗೆ ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದ್ದು ಉಡುಪಿ, ಕಾರ್ಕಳ , ಶೃಂಗೇರಿ ಬಾಗಲಕೋಟೆ ಜಿಲ್ಲೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ ಎಂದರು.