ಪ್ರಾಪರ್ಟಿ ಕಾರ್ಡ್ ಯೋಜನೆ ರಾಜ್ಯಾದ್ಯಂತ ಜಾರಿ: ಸಚಿವ ಯು.ಟಿ ಖಾದರ್

First Published Jul 26, 2018, 2:02 PM IST
Highlights

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಯೋಜನೆಯಲ್ಲಿ ಸಮಸ್ಯೆಗಳಿವೆ ಎಂಬ ದೂರುಗಳು ಇವೆ. ಆದರೆ ಯಾವುದೇ ಯೋಜನೆ ಜಾರಿಯ ಆರಂಭದಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯ. ಇವುಗಳನ್ನು ಸರಿಪಡಿಸಲಾಗುವುದು. ಇದೊಂದು ಉತ್ತಮ ಯೋಜನೆಯಾಗಿರುವುದರಿಂದ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದರು.

ಶಿವಮೊಗ್ಗ[ಜು.26]: ಶಿವಮೊಗ್ಗ ಮತ್ತು ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಜಿಕವಾಗಿ ಜಾರಿಯಲ್ಲಿರುವ ಪ್ರಾಪರ್ಟಿ ಕಾರ್ಡ್ ಯೋಜನೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಯೋಜನೆಯಲ್ಲಿ ಸಮಸ್ಯೆಗಳಿವೆ ಎಂಬ ದೂರುಗಳು ಇವೆ. ಆದರೆ ಯಾವುದೇ ಯೋಜನೆ ಜಾರಿಯ ಆರಂಭದಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯ. ಇವುಗಳನ್ನು ಸರಿಪಡಿಸಲಾಗುವುದು. ಇದೊಂದು ಉತ್ತಮ ಯೋಜನೆಯಾಗಿರುವುದರಿಂದ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದರು. ಸ್ಮಾರ್ಟ್ ಸಿಟಿ ಯೋಜನೆಯನ್ನು ನಿಗದಿತ ಕಾಲಮಿತಿಯ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯ ಸಮಿತಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಸ್ಥಳೀಯವಾಗಿ ಯೋಜನೆಯನ್ನು ರೂಪಿಸಿ ಜನರ ಸಹಭಾಗಿತ್ವದಲ್ಲಿ ಯೋಜನೆಯ ಅನುಷ್ಟಾನಕ್ಕೆ ಸೂಚನೆ ನೀಡಲಾಗಿದೆ. ಸಧ್ಯ ನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳು ಆರಂಭವಾಗಿದ್ದು, ಇನ್ನೂ 900 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಮೂರು ತಿಂಗಳ ಒಳಗಾಗಿ ಪ್ರಾಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ 36 ಕೋಟಿ ರು. ವೆಚ್ಚದ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ನೆಹರು ಕ್ರೀಡಾಂಗಣದಲ್ಲಿ ವಾಲಿಬಾಲ್ ಕೋರ್ಟ್, ಹಾಕಿ ಕೋರ್ಟ್, ವಾಕಿಂಗ್ ಪಾಥ್ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಈ ಕಾಮಗಾರಿಗಳು ಮುಂದಿನ 11 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಸ್ ನಿಲ್ದಾಣದಿಂದ ಅಲ್ಕೋಳವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯನ್ನು 26 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ.  ತುಂಗಾ ನದಿ ಪಾತ್ರದ ರಕ್ಷಣೆ ಹಾಗೂ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದ್ದು, ಆದಷ್ಟು ಬೇಗನೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ಇಲ್ಲಿ ಸೈಕಲ್ ಪಾಥ್, ಉದ್ಯಾಾನವನ ಸೇರಿದಂತೆ ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.

ಅಮೃತ್ ಯೋಜನೆಯಡಿ ನಿರಂತರ ಕುಡಿಯುವ ನೀರು ಪೂರೈಸುವ 65 ಕೋಟಿ ರೂ. ವೆಚ್ಚದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಮುಂದಿನ 3 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. 115 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಒಳಚರಂಡಿ ನಿರ್ಮಾಣ ಕಾರ್ಯ ಶೇ.85 ರಷ್ಟು ಪೂರ್ಣಗೊಂಡಿದ್ದು ಯೋಜನೆ ಪೂರ್ಣಗೊಳಿಸಲು ಜನರ ಸಹಕಾರ ಅಗತ್ಯವಿದೆ ಎಂದು ಸಚಿವರು ಹೇಳಿದರು.

ನಗರ ವಸತಿಗೆ ಆದ್ಯತೆ: 

ಸರ್ಕಾರ ನಗರ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದು, ಪ್ರತಿಯೊಬ್ಬರಿಗೂ ಸೂರು ಒದಗಿಸಲು ಕಾರ್ಯಕ್ರಮ ರೂಪಿಸಿದೆ. ಶಿವಮೊಗ್ಗ ನಗರದ ಅನುಪಿನಕಟ್ಟೆ ಮತ್ತು ಗೋವಿಂದಪುರದಲ್ಲಿ ಮನೆಗಳ ನಿರ್ಮಾಣಕ್ಕಾಾಗಿ 64ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇಲ್ಲಿ 4836 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿಗಳು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದು, ಅರ್ಜಿಗಳ ಪರಿಶೀಲನಾ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಸ್ಥಳ ಪರಿಶೀಲನೆ: 

ಇದಕ್ಕೆ ಮುನ್ನ ಸಚಿವರು ಸ್ಮಾರ್ಟ್ ಸಿಟಿ ಯೋಜನೆಯಡಿ ನೆಹರು ಕ್ರೀಡಾಂಗಣದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳು, ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿರುವ ಕುಡಿಯುವ ನೀರಿನ ಟ್ಯಾಂಕ್, ಅನುಪಿನಕಟ್ಟೆ ಮತ್ತು ಗೋವಿಂದಪುರದಲ್ಲಿ ವಸತಿ ಸಮುಚ್ಚಯಗಳ ನಿರ್ಮಾಣಕ್ಕಾಗಿ ಮೀಸಲಾಗಿರಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

click me!