ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ಸೆ.23ರಿಂದ 25ರವರೆಗೆ 44ನೇ ನೇ ರಾಜ್ಯ ಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳ, ಚುಂಚಶ್ರೀ ಪ್ರಶಸ್ತಿ ಪ್ರದಾನ ಹಾಗೂ ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಗುರು ಸಂಸ್ಮರಣೋತ್ಸವ ಸಮಾರಂಭ ನಡೆಯಲಿದೆ.
ನಾಗಮಂಗಲ : ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ಸೆ.23ರಿಂದ 25ರವರೆಗೆ 44ನೇ ನೇ ರಾಜ್ಯ ಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳ, ಚುಂಚಶ್ರೀ ಪ್ರಶಸ್ತಿ ಪ್ರದಾನ ಹಾಗೂ ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಗುರು ಸಂಸ್ಮರಣೋತ್ಸವ ಸಮಾರಂಭ ನಡೆಯಲಿದೆ.
ಆಧುನಿಕ ನಾಗರೀಕತೆಯ ಅಬ್ಬರದಲ್ಲಿ ಉಪೇಕ್ಷೆಗೊಳಗಾಗಿ ನಶಿಸಿ ಹೋಗುತ್ತಿರುವ ಮನುಕುಲದ ಸಂಸ್ಕೃತಿಯಾದ ಕಲೆಯನ್ನು ಸಂರಕ್ಷಿಸಿ ಅದರ ಪುರೋಭಿವೃದ್ಧಿಗಾಗಿ ಚಿಂತಿಸುತ್ತಿದ್ದ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಆಶಯದಂತೆ ಜನಪದ ಕಲೆ, ಸಾಹಿತ್ಯವನ್ನು ರಕ್ಷಿಸಿ, ಉಳಿಸಿ ಬೆಳೆಸುವ ಜೊತೆಗೆ, ಶೋಚನೀಯ ಸ್ಥಿತಿಯಲ್ಲಿರುವ ಜನಪದ ಕಲಾವಿದರ ಬದುಕು ಹಸನಗೊಳಿಸುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಮಟ್ಟದ ಜಾನಪದ ಕಲಾ ಮೇಳವನ್ನು ಸೆ.23ರ ಸಂಜೆ 6.30ಕ್ಕೆ ಶ್ರೀಗಳ ಜೊತೆಗೂಡಿ ಗಣ್ಯರು ಉದ್ಘಾಟಿಸುವರು. ಸೆ.24ರ ಬೆಳಗ್ಗೆ 9.30ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಂಜೆ 5 ಗಂಟೆಗೆ ಮಠದ ಪೀಠಾಧ್ಯಕ್ಷರು ಸರ್ವಾಲಂಕೃತ ಮುತ್ತಿನ ಪಾಲಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ರಾತ್ರಿ 7ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಲಿದೆ.
ಸೆ.25ರ ಬೆಳಿಗ್ಗೆ 9.30 ಗಂಟೆಗೆ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಶ್ರೀಗುರು ಸಂಸ್ಮರಣೋತ್ಸವ ಮತ್ತು ರಾಜ್ಯಮಟ್ಟದ 44ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭ ನಡೆಯಲಿದೆ. ಜಾನಪದ ಕ್ಷೇತ್ರದ ವಿವಿಧ ಗಣ್ಯರು ಪಾಲ್ಗೊಳ್ಳುವರು.
ಜಾನಪದ ಕಲಾ ಮೇಳದಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೆ ಉಚಿತ ಊಟ, ವಸತಿಯ ಜೊತೆಗೆ ಸ್ತ್ರೀ ಕಲಾವಿದರಿಗೆ ಸೀರೆ ಮತ್ತು ಕಣವನ್ನು, ಪುರುಷ ಕಲಾವಿದರಿಗೆ ಪಂಚೆ ಮತ್ತು ಟವಲ್‌ಗಳನ್ನು ನೀಡಲಾಗುವುದು. ಜಾನಪದ ಕಲಾ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ತಮ್ಮ ಆಧಾರ್‌ಕಾರ್ಡ್ ಜೊತೆಗೆ ತಮ್ಮ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾಗವಹಿಸುವಿಕೆಯ ಪತ್ರವನ್ನು ಕಡ್ಡಾಯವಾಗಿ ತರಬೇಕು. ಪತ್ರ ತರುವ ಕಲಾವಿದರಿಗೆ ಮಾತ್ರ ಪ್ರಯಾಣಭತ್ಯೆ ನೀಡಲಾಗುವುದು. ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.9448124141,9448048433,9845565696 ಸಂಪರ್ಕಿಸುವಂತೆ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ತಿಳಿಸಿದ್ದಾರೆ.