ಸರ್ಕಾರ ಕೆಎಂಫ್ ರೈತ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ಅದರಂತೆಯೇ ಹಣ್ಣು, ತರಕಾರಿ ಬೆಳೆಯುವ ರೈತರಿಗೂ ಪ್ರೋತ್ಸಾಹಧನ ನೀಡಬೇಕೆಂದು ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಮಿರ್ಲೆ ಅಣ್ಣೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಸೂರು : ಸರ್ಕಾರ ಕೆಎಂಫ್ ರೈತ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ಅದರಂತೆಯೇ ಹಣ್ಣು, ತರಕಾರಿ ಬೆಳೆಯುವ ರೈತರಿಗೂ ಪ್ರೋತ್ಸಾಹಧನ ನೀಡಬೇಕೆಂದು ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಮಿರ್ಲೆ ಅಣ್ಣೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ಕಾರ ರೈತ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 5 ರು. ಉತ್ತೇಜನ ನೀಡುತ್ತಿರುವುದು ಸಂತೋಷದ ವಿಷಯ. ಅಂತೆಯೇ ತೋಟಗಾರಿಕೆ ಬೆಳೆಗಾರರ ಹಿತದೃಷ್ಟಿಯಿಂದ 1996ರಂದು ಕರ್ನಾಟಕ ತೋಟಗಾರಿಗೆ ಮಹಾಮಂಡಳ (ಕೆಎಚ್ ಎಫ್) ನಾಮಾಂಕಿತದಲ್ಲಿ ಸ್ಥಾಪಿತವಾಗಿದೆ. ಇದರಿಂದ ರಾಜ್ಯದ 29 ಜಿಲ್ಲೆಗಳಲ್ಲಿ ಜಿಲ್ಲಾ ಹಾಪ್ಕಾಮ್ಸ್ ಎಂಬ ತೋಟಗಾರಿಕೆ ಬೆಳೆಗಾರರೊಂದಿಗೆ ಸಹಕಾರದ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತರು ಬೆಳೆಯುವ ಹಣ್ಣು ಮತ್ತು ತರಕಾರಿಗಳು ಬೇಗ ನಶಿಸಿ ಹೋಗುವ ಪದಾರ್ಥಗಳಾಗಿದ್ದು, ಪ್ರತಿದಿನ ಮಾರುಕಟ್ಟೆಯಲ್ಲಿ ದರಗಳು ಏರಿಳಿತವಾಗುವುದು ಸಾಮಾನ್ಯವಾಗಿದೆ ಅವರು ಹೇಳಿದ್ದಾರೆ.
ಇದರಿಂದಾಗಿ ಅನ್ನದಾತರಿಗೆ ತಾವು ಬೆಳೆಯುವ ಪದಾರ್ಥದಿಂದ ದುಡಿಮೆಗೆ ತಕ್ಕ ಫಲ ಸಿಗುವುದು ಅನುಮಾನವಾಗಿದೆ. ಇದರಿಂದಾಗಿ ಸಣ್ಣ ಮತ್ತು ದೊಡ್ಡ ಹಿಡುವಳಿದಾರರಿಗೆ ಹಣ್ಣು ಮತ್ತು ತರಕಾರಿಗಳ ಬೆಳೆಯಿಂದ ಅತಿ ಹೆಚ್ಚು ನಷ್ಟ ಉಂಟಾಗುತ್ತಿದೆ. ಆದ್ದರಿಂದ ಕೆಎಂಎಫ್ ನ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ ನೀಡುವ ಉತ್ತೇಜನ ಹಣದಂತೆ, ತೋಟಗಾರಿಕೆ ಉತ್ಪನ್ನಗಳ ಬೆಳೆಗಾರರಿಗೆ ಸರ್ಕಾರದ ಕಾಳಜಿಯಿಂದ ಬಾಳೆಹಣ್ಣಿಗೆ ಕೆಜಿ ಒಂದಕ್ಕೆ ರು. 5 ಪ್ರತಿ ತರಕಾರಿಗಳಿಗೆ ಕೆಜಿ ಒಂದಕ್ಕೆ ರು. 30 ಸರ್ಕಾರದ ವತಿಯಿಂದ ಉತ್ತೇಜನ ಹಣ ನೀಡಿದರೆ ತೋಟಗಾರಿಕೆ ಬೆಳೆಗಾರರು ಸಹಾ ಹೆಚ್ಚಿನ ಪ್ರಮಾಣದ ಹಣ್ಣು ಮತ್ತು ತರಕಾರಿಗಳನ್ನು ಬೆಳೆದು ಆಯಾ ಜಿಲ್ಲಾ ಹಾಪ್ ಕಾಮ್ಸ್ ಗಳ ಮೂಲಕ ಮಾರಾಟ ಮಾಡುವ ಮೂಲಕ ಅವರ ದುಡಿಮೆಯ ಬೆವರಿಗೆ ಕಿಂಚಿತ್ತಾದರೂ ಬೆಲೆ ಸಿಗುವಂತಾಗುತ್ತದೆ. ಇದರಿಂದಾಗಿ ರೈತರು ಭರಿಸುವ ಸಾಗಾಣಿಕೆ ವೆಚ್ಚ ಹಾಗೂ ಪದಾರ್ಥಗಳು ಒಣಗುವುದರಿಂದಾಗುವ ನಷ್ಟವನ್ನು ಭರಿಸಿಕೊಂಡಂತಾಗುತ್ತದೆ. ಈ ವಿಚಾರವಾಗಿ ತೋಟಗಾರಿಕಾ ಸಚಿವರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.