ಮೀನುಗಾರ ಮಹಿಳೆಯರಿಗೆ ಸರ್ಕಾರದಿಂದ ಬೈಕ್

By Kannadaprabha NewsFirst Published Feb 27, 2020, 1:04 PM IST
Highlights

ಬುಟ್ಟಿ ಹೊತ್ತು ಮನೆ ಮನೆಗೆ ಬರುತ್ತಿದ್ದ ಮೀನುಗಾರ ಮಹಿಳೆಯರಿನ್ನು ಬೈಕಿನಲ್ಲಿ ಮೀನು ತರಲಿದ್ದಾರೆ. ಸರ್ಕಾರ ಮಹಿಳೆಯರಿಗೆ ಬೈಕ್ ವಿತರಿಸಲಿದೆ. 

ಹಾವೇರಿ [ಫೆ.27]:  ಈ ವರೆಗೆ ಬುಟ್ಟಿಯಲ್ಲಿ ಮೀನು ಹೊತ್ತು ಓಣಿ ಓಣಿ ಸುತ್ತಿ ಮಾರಾಟ ಮಾಡುತ್ತಿದ್ದ ಮಹಿಳೆಯರು ಇನ್ನು ಮುಂದೆ ಬೈಕ್ ಮೇಲೆ ಮೀನು ತರಲಿದ್ದಾರೆ! ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪ್ರಸಕ್ತ ರಾಜ್ಯ ಬಜೆಟ್ ನಲ್ಲಿ ಮಹಿಳಾ ಮೀನುಗಾರರಿಗೆ ದ್ವಿಚಕ್ರವಾಹನ ವಿತರಿಸುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದರು.

 ಸರ್ಕಾರಕ್ಕೆ ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಮೂಲಕ ಮಹಿಳಾ ಮೀನುಗಾರರ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ಒತ್ತು ನೀಡಲು ಚಿಂತನೆ ನಡೆಸಿದೆ. ಮೀನುಗಾರಿಕೆ ಕಡಿಮೆ ಇರುವ ಪ್ರದೇಶದಲ್ಲಿ ಮೀನು ಸಾಗಾಣಿಕೆಗೆ ಉತ್ತೇಜನ ನೀಡಲು ಇಲಾಖೆ ಯಿಂದ ಕೆರೆಗಳ ಪುನಶ್ಚೇತನ ಕೇಂದ್ರ, ಮೀನು ಮರಿಗಳ ಉತ್ಪಾದನೆ ಕೇಂದ್ರ ತೆರೆದು ವಿತರಣೆಗೆ ಚಿಂತನೆ ನಡೆದಿದೆ. ಮೀನುಗಾರಿಕೆ ಬಗ್ಗೆ ರೈತರಿಗೆ, ಮೀನು ಕೃಷಿಕರಿಗೆ ಮಾಹಿತಿ ಒದಗಿಸಲು ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ವಿಚಾರ ಸಂಕಿರಣ ನಡೆಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುವುದು. ಮೀನುಗಾರಿಕೆಯನ್ನು ಲಾಭದಾಯಕವಾಗಿಸಲು ಸರ್ವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೆರೆ ವಿಲೇವಾರಿಗೆ ಹೊಸ ತಂತ್ರ: ಮೀನು ಸಾಕಣೆ ವ್ಯವಸ್ಥಿತಗೊಳಿಸಲು ರಾಜ್ಯದಲ್ಲಿರುವ ಕೆರೆಗಳು, ಜಲಾಶಯಗಳನ್ನು ಹರಾಜು ಮೂಲಕ ವಿಲೇವಾರಿ ಮಾಡುವ ಪದ್ಧತಿಯಲ್ಲಿ ಬದಲಾವಣೆ ತರಲಾಗುವುದು. ಪಾರದರ್ಶಕತೆ ತರಲು ಹೊಸ ಸೂತ್ರ ಅಳವಡಿಸಲು ಚಿಂತನೆ ನಡೆದಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.

ಬಲೆಗೆ ಬಿತ್ತು 200 ಕೆಜಿ ತೂಗುವ ಅಪರೂಪದ ಮೀನು, ಇದರ ಚಂದ ನೋಡಿ...
 
ಮೀನುಗಾರಿಕೆಗೆ ಒಳಪಡುವ ಕೆರೆಗಳು ಸೇರಿದಂತೆ ಜಲಮೂಲಗಳ ಹಂಚಿಕೆ ಕ್ರಮದಲ್ಲಿ ಬದಲಾವಣೆ ತರಲು ಸಲಹೆಗಳನ್ನು ಪಡೆಯಲಾಗುತ್ತಿದೆ. ಅತ್ಯಂತ ಪಾರದರ್ಶಕವಾಗಿ ವಿತರಣೆಯಾಗಬೇಕಾಗಿದೆ. ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಟೆಂಡರ್ ವಿಲೇಗೊಳಿಸಬೇಕೇ ಅಥವಾ ಗ್ರಾಪಂ ಮಟ್ಟದಲ್ಲೇ ಹರಾಜು ಮೂಲಕ ವಿಲೇಗೊಳಿಸಬೇಕೇ ಎಂಬುದನ್ನು ಚರ್ಚಿಸಿ ಅಂತಿಮಗೊಳಿಸಲಾಗುವುದು. ಕೆರೆಗಳನ್ನು ಎ, ಬಿ ಹಾಗೂ ಸಿ ದರ್ಜೆಯ ಕೆರೆಗಳನ್ನಾಗಿ
ವರ್ಗೀಕರಿಸಿ, ಆರ್ಥಿಕ ದುರ್ಬಲರಿಗೂ ಇಂತಿಷ್ಟು ಕೆರೆಗಳೆಂದು ಮೀಸಲಿರಿಸಿ ಗುತ್ತಿಗೆ ನೀಡಲಾಗುವುದು.

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು...

ಮೀನು ಸಾಕಾಣಿಕೆಗೆ ಹಣಕಾಸಿನ ತೊಂದರೆ ಇದ್ದರೆ ಆರ್ಥಿಕ ನೆರವು ನೀಡಲು ಚಿಂತನೆ ನಡೆಸಲಾಗುವುದು. ಕೆರೆಗಳ ವರ್ಗೀಕರಣ ಕಾರ್ಯವನ್ನು ಹಾವೇರಿ ಯಿಂದಲೇ ಆರಂಭಿಸಲಾಗುವುದು ಎಂದರು. 

ಸಾಮೂಹಿಕ ವಿವಾಹ: ಹಿಂದು ದೇವಾಲಯಗಳ ರಕ್ಷಣೆ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ಮುಂದಿನ ಒಂದೂವರೆ ತಿಂಗಳೊಳಗಾಗಿ ರಾಜ್ಯದ ಎಲ್ಲ ದೇವಾಲಯಗಳಿಗೂ ವ್ಯವಸ್ಥಾಪನಾ ಸಮಿತಿ ರಚನೆ ಪೂರ್ಣಗೊಳಿಸಲಾಗುವುದು. ಎ ದರ್ಜೆಯ ಒಂದು ನೂರು ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ವಿವರ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಅಂದಾಜು ಒಂದು ಸಾವಿರ ಎ ಮತ್ತು ಬಿ ದರ್ಜೆಯ ದೇವಾಲ
ಯಗಳು, ಉಳಿದಂತೆ 33 ಸಾವಿರದಷ್ಟು ಸಿ ದರ್ಜೆಯ ದೇವಾಲಯಗಳಿವೆ. ಎ ದರ್ಜೆಯ ದೇವಾಲಯಗಳಿಗೆ ಉಪವಿಭಾಗ ಮಟ್ಟದ ಅಧಿಕಾರಗಳನ್ನು, ಬಿ ದರ್ಜೆಯ ದೇವಾಲಯಗಳಿಗೆ ರೆವಿನ್ಯೂ ಇನ್‌ಸ್ಪೆಕ್ಟರ್ಹಾಗೂ ಸಿ ದರ್ಜೆಯ ದೇವಾಲಯಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡುವ ಚಿಂತನೆ ನಡೆಸಲಾಗಿದೆ ಎಂದರು.

ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಪಂ ಸದಸ್ಯ ಸಿದ್ಧರಾಜ ಕಲಕೋಟಿ, ವಿರೂಪಾಕ್ಷಪ್ಪ ಕಡ್ಲಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಪಂ ಸಿಇಒ ರಮೇಶ ದೇಸಾಯಿ ಇದ್ದರು.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!