ಮುಂದಿನ ಮೂರೂವರೆ ವರ್ಷದಲ್ಲಿ ರಾಜ್ಯದ ಅಭಿವೃದ್ಧಿಯ ಚಿತ್ರಣವನ್ನೇ ಬದಲು ಮಾಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು(ಡಿ.12): ಮುಂದಿನ ಮೂರೂವರೆ ವರ್ಷದಲ್ಲಿ ರಾಜ್ಯದ ಅಭಿವೃದ್ಧಿಯ ಚಿತ್ರಣವನ್ನೇ ಬದಲು ಮಾಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬುಧವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಆಯೋಜಿಸಿದ್ದ ‘100 ದಿನಗಳ ಉತ್ತಮ ಆಡಳಿತ’ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
undefined
ಸಿಎಂ ಭೇಟಿ ಮಾಡಿದ ಹೊರಟ್ಟಿ: ರಹಸ್ಯ ಮಾತುಕತೆ!
ನಮ್ಮ ಮೇಲೆ ನಂಬಿಕೆ ಇಟ್ಟು ಜನತೆ ಸರ್ಕಾರಕ್ಕೆ ಬಹುಮತ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಕ್ತಿಮೀರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜತೆಗೆ ವಿಶ್ವದ ಗಮನ ಸೆಳೆದಿರುವ ಬೆಂಗಳೂರಿಗೆ ನಾಲ್ಕೈದು ತಿಂಗಳಲ್ಲಿ ವಿಶೇಷ ಆದ್ಯತೆ ನೀಡಿ ಅಭಿವೃದ್ಧಿ ಮಾಡಲಾಗುವುದು. ರಾಜ್ಯದಲ್ಲಿ ಸಾಧನೆ ಮಾತನಾಡಬೇಕು, ಮಾತನಾಡುವುದೇ ಸಾಧನೆ ಆಗಬಾರದು. ಅದುವೇ ನಮ್ಮ ಸರ್ಕಾರದ ಅಪೇಕ್ಷೆ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಿಕೆಶಿ, ಎಂಬಿಪಾ ಲಾಬಿ!
ಕೇಂದ್ರದ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದಲ್ಲಿ ಹೆದ್ದಾರಿ ಯೋಜನೆಗಳ ಜಾರಿ ಮತ್ತು ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರು. ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಮಾನವ ಸಂಪನ್ಮೂಲಗಳ ಸದ್ಬಳಕೆ ಆಗÜಬೇಕು. ವೈದ್ಯಕೀಯ ವಿದ್ಯಾರ್ಥಿಗಳ ಸಮಸ್ಯೆ ನಿವಾರಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ. ಮುಂದಿನ ಫೆಬ್ರವರಿ ಬಜೆಟ್‌ನಲ್ಲಿ ಸ್ಟೈಪೆಂಡ್ ಹೆಚ್ಚಿಸುವ ಮತ್ತು ಶುಲ್ಕದಲ್ಲಿ ವಿನಾಯಿತಿ ನೀಡುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ವಿದೇಶದ ಹುಚ್ಚು ಬಿಡಿ:
ರಾಜ್ಯದ ಜನರ ತೆರಿಗೆ ಹಣದಿಂದ ಸರ್ಕಾರವು ಕಷ್ಟಪಟ್ಟು ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಆದರೆ, ವೃತ್ತಿಶಿಕ್ಷಣ ಪೂರ್ಣಗೊಂಡ ಬಳಿಕ ಯಾರೂ ಸಹ ತಾಲೂಕು ಕೇಂದ್ರಗಳು, ಗ್ರಾಮೀಣ ಪ್ರದೇಶಗಳಿಗೆ ಹೋಗಿ ಸೇವೆ ಮಾಡಲು ಸಿದ್ಧರಾಗುವುದಿಲ್ಲ. ಹಲವರಿಗೆ ಹೊರದೇಶದ ಹುಚ್ಚು ಹಿಡಿದಿದೆ. ಈ ನಾಡಿನ ಋುಣ ತೀರಿಸುತ್ತೇನೆ ಎಂಬ ಮನೋಭಾವನೆಯೇ ಬರದಿರುವುದು ವಿಷಾದನೀಯ. ಇಲ್ಲಿನ ಜನರ ತೆರಿಗೆ ಹಣದಿಂದ ತಾವು ಶಿಕ್ಷಣ ಪಡೆದಿದ್ದೇವೆ ಎನ್ನುವ ಕುರಿತು ಕಿಂಚಿತ್ತು ಉಪಕಾರ ಸ್ಮರಣೆಯಾದರೂ ಇರಬೇಕು. ಯುವ ವೈದ್ಯರ ಇಂತಹ ಕೀಳರಿಮೆಯಿಂದಾಗಿ ನಿವೃತ್ತರಾದ ವೈದ್ಯರನ್ನು ಪುನಃ ಸೇವೆಗೆ ಕರೆಯುವಂತಹ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯ ಶಿಕ್ಷಣದಲ್ಲಿ ಭಾರಿ ಬದಲಾವಣೆ:
ಉಪ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಮಾತನಾಡಿ, ರಾಜ್ಯದ ವೈದ್ಯಕೀಯ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತರಲು ವಿಷನ್ ಗ್ರೂಪ್ ಸ್ಥಾಪಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 450 ಹಾಸಿಗೆಯ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಮಂಡಳಿ 100 ಕೋಟಿ ರು.ಗಳ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮೆಟ್ರಿಕ್ ನಂತರದ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದ ಹಂಚಿಕೆ ಪಾರದರ್ಶಕ ಮತ್ತು ಕಾಗದ ರಹಿತವಾಗಿಸಲು ಬ್ಲ್ಯಾಕ್‌ಚೈನ್ ತಂತ್ರಜ್ಞಾನ ಆಧಾರಿತ ಇಂಟಿಗ್ರೇಟೆಡ್ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ ನಿರ್ಮಿಸಲಾಗುತ್ತಿದೆ. ಒಟ್ಟಾರೆ ವೈದ್ಯಕೀಯ ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಸಚ್ಚಿದಾನಂದ, ಬೆಂಗಳೂರು ಸೆಂಟ್ರಲ್ ವಿವಿ ಕುಲಪತಿ ಡಾ.ಜಾಫಟ್, ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿಶೆಟ್ಟಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಜಾವೇದ್ ಅಖ್ತರ್, ರಾಜಕುಮಾರ್ ಖತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.