ಆಕಾಂಕ್ಷಿಗಳ ತೆರೆಮರೆಯ ಪ್ರಯತ್ನ ಶುರು| ಹಿರಿಯ ನಾಯಕರ ಕೃಪಾಕಟಾಕ್ಷಕ್ಕಾಗಿ ಪೈಪೋಟಿ| ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ ಬುಡಾ ಮಾಜಿ ಅಧ್ಯಕ್ಷ ಜೆ.ಎಸ್. ಆಂಜಿನೇಯಲು|
ಕೆ.ಎಂ. ಮಂಜುನಾಥ್
ಬಳ್ಳಾರಿ(ಜು.13): ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ತೆರೆಮರೆಯ ಪ್ರಯತ್ನ ಶುರುವಾಗಿದೆ.ಈ ಬಾರಿ ಯುವಕರಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಸಾಮರ್ಥ್ಯ ಇರುವವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಕೂಗು ಕಾಂಗ್ರೆಸ್ ಯುವ ಸಮುದಾಯದಲ್ಲಿ ಕೇಳಿ ಬಂದಿದ್ದು ಪಕ್ಷ ಬಲವರ್ಧನೆಯ ವಿಶ್ವಾಸದಲ್ಲಿರುವ ಪಕ್ಷದ ಅನೇಕರು ತಮ್ಮದೇ ಆದ ಹಿರಿ ನಾಯಕರ ಕೃಪಾಕಟಾಕ್ಷ ಪಡೆದು ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿಗಿಳಿದಿದ್ದಾರೆ.
ಏತನ್ಮಧ್ಯೆ ಹಾಲಿ ಅಧ್ಯಕ್ಷ ಮಹ್ಮದ್ ರಫೀಕ್ ಅವರು ಜಿಲ್ಲಾಧ್ಯಕ್ಷರಾಗಿ ಮುಂದುವರಿಯುವ ಆಸ್ಥೆ ತೋರಿಸಿದ್ದಾರೆ. ‘ನನ್ನ ಅಧ್ಯಕ್ಷ ಅವಧಿಯೇ ಪೂರ್ಣಗೊಂಡಿಲ್ಲ. ಹೀಗಾಗಿ ಹೊಸ ಅಧ್ಯಕ್ಷರನ್ನು ನೇಮಿಸುವ ಪ್ರಮೇಯವೇ ಬರುವುದಿಲ್ಲ’ ಎಂದು ಪ್ರತಿಕ್ರಿಯಿಸಿರುವ ರಫೀಕ್, ಕೆಪಿಸಿಸಿ ತನ್ನನ್ನೇ ಮುಂದುವರಿಸಬಹುದು ಎಂಬ ವಿಶ್ವಾಸದಲ್ಲಿದ್ದಾರೆ.
ಗಡಿಯಲ್ಲಿ ಆಂಧ್ರದ ಸಂಪರ್ಕದಿಂದ ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳ..!
ಆಕಾಂಕ್ಷಿಗಳು ಯಾರ‍್ಯಾರು?
ಬುಡಾ ಮಾಜಿ ಅಧ್ಯಕ್ಷ ಜೆ.ಎಸ್. ಆಂಜಿನೇಯಲು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಂಜಿನೇಯಲು ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯೊಡ್ಡಬಹುದು ಎಂದು ಹಲವರಿಗೆ ಗುಮಾನಿ ಇತ್ತು. ಆದರೆ, ಆಂಜಿನೇಯಲು ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವುದರಿಂದ ರಾಜ್ಯಮಟ್ಟದಲ್ಲಿಯೇ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂಬ ಅಂದಾಜಿದೆ. ಆಂಜಿನೇಯಲು ಸಹ ರಾಜ್ಯಮಟ್ಟದಲ್ಲಿಯೇ ಸ್ಥಾನ ಪಡೆಯುವ ಉಮೇದಿನಲ್ಲಿದ್ದಾರೆ. ಹೀಗಾಗಿ ಜಿಲ್ಲಾಧ್ಯಕ್ಷರಾಗಬೇಕು ಎಂಬ ಕನಸು ಹೊತ್ತವರಿಗೆ ಆಂಜಿನೇಯಲು ಅಡ್ಡಿಯಾಗುವುದಿಲ್ಲ ಎಂಬುದು ಖಾತ್ರಿಯಾದಂತಾಗಿದೆ. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂಜಾರಿ ಗಾದೆಪ್ಪ ಅವರ ಹೆಸರು ಸಹ ಕೇಳಿ ಬಂದಿತ್ತಾದರೂ, ಗಾದೆಪ್ಪ ಅವರು ತಮ್ಮ ಹೆಸರು ಚಾಲ್ತಿಗೆ ಬಂದಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರಲ್ಲದೆ, ‘ಜಿಲ್ಲಾಧ್ಯಕ್ಷ ಆಗಲು ನಾನು ಯಾವ ಪ್ರಯತ್ನವೂ ಮಾಡಿಲ್ಲ. ಯಾರ ಬಳಿಯೂ ಪ್ರಸ್ತಾಪಿಸಿಯೂ ಇಲ್ಲ. ನನ್ನ ಹೆಸರು ಹೇಗೆ ಬಂದಿದೆಯೋ ಗೊತ್ತಿಲ್ಲ’ ಎಂದಿದ್ದಾರಲ್ಲದೆ, ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಖಚಿತಪಡಿಸಿದ್ದಾರೆ.
ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜ್, ಅಸುಂಡಿ ನಾಗರಾಜ್, ಜಿಪಂ ಸದಸ್ಯ ಅಲ್ಲಂ ಪ್ರಶಾಂತ್, ಕಟ್ಟೆಮ್ಯಾಗಳ ನಾಗೇಂದ್ರ ಇತರರ ಹೆಸರು ಚಾಲ್ತಿಯಲ್ಲಿವೆ. ಜಿಲ್ಲೆಯ ವಿವಿಧ ತಾಲೂಕುಗಳ ಕೆಲ ಮುಖಂಡರು ಸಹ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಒಡ್ಡಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಸಿಸಿ ಅಧ್ಯಕ್ಷರಾಗಲು ಉತ್ಸುಕರಾಗಿರುವ ಆಕಾಂಕ್ಷಿಗಳು ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪಕ್ಷದ ಪ್ರಭಾವಿ ಮುಖಂಡರ ಬೆಂ‘ಬಲ’ ಪಡೆದು ಹುದ್ದೆ ಏರುವ ವಿಶ್ವಾಸದಲ್ಲಿದ್ದಾರೆ.
ಡಿಸಿಸಿ ಅಧ್ಯಕ್ಷನಾಗಿ ಪಕ್ಷ ಸಂಘಟಿಸಬೇಕು ಎಂಬ ಆಸೆ ಇರುವುದಂತೂ ನಿಜ. ಈ ಸಂಬಂಧ ಎಲ್ಲ ಹಿರಿಯ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬಳ್ಳಾರಿ ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜ್ ಅವರು ತಿಳಿಸಿದ್ದಾರೆ.
ನನ್ನ ಅಧಿಕಾರ ಅವಧಿಯೇ ಮುಗಿದಿಲ್ಲ. ಹೀಗಾಗಿ ಹೊಸ ಅಧ್ಯಕ್ಷರ ನೇಮಕದ ಪ್ರಸ್ತಾಪವೇ ಬರುವುದಿಲ್ಲ. ನಾನೇ ಮುಂದುವರಿಯುವ ವಿಶ್ವಾಸವಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್ ಅವರು ಹೇಳಿದ್ದಾರೆ.
ನಾನಾಗಿಯೇ ಯಾರ ಬಳಿ ಹೋಗಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಕೇಳೋದಿಲ್ಲ. ಪಕ್ಷ ಗುರುತಿಸಿ ಜವಾಬ್ದಾರಿ ಕೊಟ್ಟರೆ ಖಂಡಿತ ನಿರ್ವಹಿಸುತ್ತೇನೆ ಎಂದು ಬಳ್ಳಾರಿ ಜಿಪಂ ಸದಸ್ಯ ಅಲ್ಲಂ ಪ್ರಶಾಂತ್ ಅವರು ಹೇಳಿದ್ದಾರೆ.