ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದಲ್ಲಿ ಅಮಾನವೀಯ ಘಟನೆ| ತಹಸೀಲ್ದಾರ್ ಸ್ಥಳಕ್ಕಾಗಿಮಿಸದ ಮೇಲೆಯೇ ಸಮಸ್ಯೆ ಇತ್ಯರ್ಥ| ಸ್ಮಶಾನ ಭೂಮಿ ಇಲ್ಲದ್ದರಿಂದ ಸತ್ತಾಗಲೆಲ್ಲ ಸಮಸ್ಯೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.08): ಇಲ್ಲಿ ಸ್ವಂತ ಭೂಮಿ ಇದ್ದವರು ಸತ್ತರೆ ಮಾತ್ರ ಸುಲಭವಾಗಿ ಅಂತ್ಯ ಸಂಸ್ಕಾರ ನಡೆಯುತ್ತದೆ. ಇಲ್ಲದಿದ್ದರೆ ಅವರ ಪಾಡು ದೇವರಿಗೆ ಪ್ರೀತಿ. ಅದರಲ್ಲೂ ಬಡವರು, ಭೂಮಿ ಇಲ್ಲದವರು ಸತ್ತರೆ ಅಂತ್ಯ ಸಂಸ್ಕಾರ ಮಾಡುವುದೇ ಅಸಾಧ್ಯ ಎಂಬಂತಹ ಸ್ಥಿತಿ ಇದೆ.
ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಯಾರಾದರೂ ಸತ್ತರೆ ಹೂಳುವುದಕ್ಕೆ, ಸುಡುವುದಕ್ಕೆ ಅಂಗೈ ಅಗಲ ರುದ್ರಭೂಮಿ ಇಲ್ಲ. ಶ್ರೀಮಂತರು, ಭೂಮಿ ಇದ್ದವರ ಮನೆಯಲ್ಲಿ ಸತ್ತರೆ ಈ ಸಮಸ್ಯೆಯಾಗುವುದಿಲ್ಲ. ಅವರವರ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿಕೊಳ್ಳುತ್ತಾರೆ. ಆದರೆ, ಭೂಮಿ ಇಲ್ಲದವರು ಸತ್ತರೆ ಅವರ ಅಂತ್ಯಸಂಸ್ಕಾರ ಮಾಡುವುದೇ ದೊಡ್ಡ ಸಮಸ್ಯೆ.
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ಮೆಚ್ಚಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ಮೂರು ಗಂಟೆ ಕಾಯ್ದರು:
ಎಸ್ಟಿ ಕುಟುಂಬದ ಮಹಿಳೆ ಶಿವಗಂಗಮ್ಮ ಅವರು ಶನಿವಾರ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಮಾಡಲು ಮಧ್ಯಾಹ್ನ ಮೂರು ಗಂಟೆಗೆ ಶವ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಇದು ಸ್ಮಶಾನವಲ್ಲ, ನಮ್ಮ ಭೂಮಿ. ಹೀಗಾಗಿ, ಇಲ್ಲಿ ಹೂಳುವುದಕ್ಕೆ, ಸುಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೊಲದ ಮಾಲೀಕರು ಪಟ್ಟು ಹಿಡಿಯುತ್ತಾರೆ.
ಸುಮಾರು 50 ವರ್ಷಗಳಿಂದ ಇಲ್ಲಿಯೇ ಹೂಳಲಾಗುತ್ತದೆ. ಆದರೆ, ಇತ್ತೀಚಿಗೆ ಹೊಲದ ಮಾಲೀಕರು ಹೂಳುವುದಕ್ಕಾಗಲಿ, ಸುಡುವುದಕ್ಕಾಗಲಿ ಅವಕಾಶ ನೀಡುತ್ತಿಲ್ಲ. ಗ್ರಾಮದಲ್ಲಿ ಪ್ರತ್ಯೇಕ ಸ್ಮಶಾನ ಇಲ್ಲದೆ ಇರುವುದರಿಂದ ಈ ಸಮಸ್ಯೆ ತಲೆದೂರುತ್ತಲೇ ಇರುತ್ತದೆ. ಆದರೂ ಇದು ವರೆಗೂ ಜಿಲ್ಲಾಡಳಿತ ಇತ್ಯರ್ಥ ಮಾಡುವಲ್ಲಿ ವಿಫಲವಾಗಿದೆ. ಹೊಲದ ಮಾಲೀಕರು ಹೀಗೆ ಪಟ್ಟು ಹಿಡಿದಿದ್ದರಿಂದ ಶಿವಗಂಗಮ್ಮನ ಅಂತ್ಯಕ್ರಿಯೆ ಮಾಡುವುದಕ್ಕೆ ಅವಕಾಶವೇ ಸಿಗಲಿಲ್ಲ.
ತಹಸೀಲ್ದಾರ್ ಆಗಮನ:
ಕೊನೆಗೆ ತಹಸೀಲ್ದಾರ್ ಅವರಿಗೆ ದೂರು ನೀಡಿದ ಮೇಲೆ ಅವರು ಸ್ಥಳಕ್ಕೆ ಆಗಮಿಸಿದರು. ಪರಿಸ್ಥಿತಿಯನ್ನು ಅರಿತ ಅವರು, ಹೊಲದ ಮಾಲೀಕರ ಮನವೊಲಿಸಿ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಅಷ್ಟೋತ್ತಿಗೆ ಕತ್ತಲಾಗಿತ್ತು.
ನಮ್ಮೂರಲ್ಲಿ ಬಡವರು ಸತ್ತರೆ ಇದೇ ಸಮಸ್ಯೆ. ಸುಮಾರು ಮೂರು ಗಂಟೆಗಳ ಕಾಲ ಕಾಯ್ದು, ಕಾದಾಡಿದ ಮೇಲೆ ಶಿವಗಂಗಮ್ಮನ ಹೆಣವನ್ನು ಸುಡುವುದಕ್ಕೆ ಅವಕಾಶ ನೀಡಲಾಯಿತು. ಅದು ತಹಸೀಲ್ದಾರ್ ಅವರು ಆಗಮಿಸಿದ ಮೇಲೆ ಎಂದು ಗ್ರಾಮದ ನಿವಾಸಿ ಮತ್ತು ಮೃತರ ಸಂಬಂಧಿ ರಂಗಪ್ಪ ಅವರು ತಿಳಿಸಿದ್ದಾರೆ.
ಹ್ಯಾಟಿ ಮುಂಡರಗಿ ಗ್ರಾಮಕ್ಕೆ ರುದ್ರಭೂಮಿಗಾಗಿ ಜಾಗವನ್ನು ಗುರುತಿಸಲಾಗಿದೆ. ಸರ್ಕಾರಿ ಭೂಮಿಯೇ ಇದ್ದು, ಅದು ದೂರವಾಗುತ್ತದೆ ಎಂದು ಅಲ್ಲಿಗೆ ಹೋಗುತ್ತಿಲ್ಲ. ಹೀಗಾಗಿ ಸಮಸ್ಯೆಯಾಗಿದ್ದು, ಇತ್ಯರ್ಥ ಮಾಡಲಾಗಿದೆ ಎಂದು ತಹಸೀಲ್ದಾರ ಜೆ.ಬಿ. ಮಜ್ಜಿಗಿ ಅವರು ಹೇಳಿದ್ದಾರೆ.