SSLC ಫಲಿತಾಂಶ: ಸಿಲಿಕಾನ್ ಸಿಟಿ ಬೆಂಗಳೂರಿಗೆ 'B' ಗ್ರೇಡ್

By Kannadaprabha NewsFirst Published Aug 11, 2020, 11:03 AM IST
Highlights

ರಾಜ್ಯರಾಜಧಾನಿ, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಬಿ ಗ್ರೇಡ್‌ಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಬಿಬಿಎಂಪಿ ಶಾಲೆ ಕೇವಲ ಶೇ.50 ಸಾಧನೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ...

ಬೆಂಗಳೂರು(ಆ.11): ಐಟಿ ಸಿಟಿ ಬೆಂಗಳೂರು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಬಾರಿ ‘ಬಿ’ ಶ್ರೇಣಿಗೆ ಖುಷಿಪಡಬೇಕಿದೆ.

ನಗರದ ಉತ್ತರ ಮತ್ತು ದಕ್ಷಿಣದ ತಲಾ ನಾಲ್ಕು ತಾಲೂಕುಗಳ ಪೈಕಿ ಕೇವಲ ಒಂದು ತಾಲೂಕಿನಲ್ಲಿ ಮಾತ್ರ ‘ಎ’ ಶ್ರೇಣಿ ಫಲಿತಾಂಶ ಬಂದಿದೆ. ಉಳಿದ ಆರು ತಾಲೂಕಿನಲ್ಲಿ ’ಬಿ’ ಶ್ರೇಣಿ ಹಾಗೂ ದಕ್ಷಿಣ ಒಂದು ತಾಲೂಕು ‘ಸಿ’ ಶ್ರೇಣಿ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶೂನ್ಯ ಫಲಿತಾಂಶ ಶಾಲೆ ಕೂಡ ಸೇರಿದೆ.

ಬಿಬಿಎಂಪಿ ಶಾಲೆ ಕೇವಲ ಶೇ.50:

ಬಿಬಿಎಂಪಿಯ 32 ಶಾಲೆಯ 1,525 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, 776 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.50.10 ಫಲಿತಾಂಶ ಲಭ್ಯವಾಗಿದೆ. ಕಳೆದ ಸಾಲಿನಲ್ಲಿ ಶೇ.52 ಫಲಿತಾಂಶ ಲಭ್ಯವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.2 ರಷ್ಟು ಬಿಬಿಎಂಪಿ ಶಾಲೆಗಳ ಫಲಿತಾಂಶ ಕುಸಿತಗೊಂಡಿದೆ. 

ಕಳೆದ ವರ್ಷ ಕೇವಲ 22 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಈ ವರ್ಷ 35 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗ ವಿಶೇಷ ಆಯುಕ್ತ ಮಂಜುನಾಥ ಜೆ. ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಾಲಿನಲ್ಲಿ ಪರೀಕ್ಷೆ ಬರೆದ ಕೌಶಿಕ್‌ ಫಸ್ಟ್‌ ಕ್ಲಾಸ್‌ ಪಾಸ್‌

‘ಈ ಬಾರಿ 60ಕ್ಕೂ ಹೆಚ್ಚಿನ ಫಲಿತಾಂಶ ಪಡೆಯುವ ಗುರಿ ಹೊಂದಲಾಗಿತ್ತು. ಆದರೆ, ಪರೀಕ್ಷೆ ಹತ್ತಿರ ಬಂದಾಗ ಕೊನೆಯ ಸಂದರ್ಭದಲ್ಲಿ ಮಕ್ಕಳಿಗೆ ಪುನರಾವರ್ತನೆ ತರಗತಿ ನಡೆಸಲು ಅನುಕೂಲವಾಗದ ಹಿನ್ನೆಲೆಯಲ್ಲಿ ಫಲಿತಾಂಶ ಕಡಿಮೆಯಾಗಿದೆ. ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಹೆಚ್ಚಿನ ಫಲಿತಾಂಶ ಲಭ್ಯವಾಗುವಂತೆ ಕ್ರಮವಹಿಸಲಾಗುವುದು’ ಎಂದರು.

ಉತ್ತೀರ್ಣಗೊಂಡ ವಿದ್ಯಾರ್ಥಿಗಳ ಪೈಕಿ 35 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿಬಿಎಂಪಿ 32 ಶಾಲೆಗಳ ಪೈಕಿ 2 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಹೇರೋಹಳ್ಳಿಯ ಬಿಬಿಎಂಪಿ ಶಾಲೆಯ ಶೇ.92.16 ರಷ್ಟು ಫಲಿತಾಂಶ ಪಡೆಯುವ ಮೂಲಕ ಅತಿ ಹೆಚ್ಚಿನ ಫಲಿತಾಂಶ ಪಡೆದ ಬಿಬಿಎಂಪಿ ಶಾಲೆಯಾಗಿದೆ. ಈ ಶಾಲೆಯಲ್ಲಿ 102 ವಿದ್ಯಾರ್ಥಿಗಳಲ್ಲಿ 94 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶ್ರೀರಾಂಪುರ ಪ್ರೌಢಶಾಲೆಯ 90 ವಿದ್ಯಾರ್ಥಿಗಳಲ್ಲಿ 68 ಮಂದಿ ಉತ್ತೀರ್ಣರಾಗಿದ್ದು, ಶೇ.75.56 ಫಲಿತಾಂಶ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ.
 

click me!