SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ವಾಟ್ಸಪ್‌ನಲ್ಲಿ ಸೋರಿಕೆ

By Kannadaprabha NewsFirst Published Feb 19, 2020, 10:19 AM IST
Highlights

ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ ಪೊಲೀಸ್‌ ವಶಕ್ಕೆ| ಬಯಲು ಮಾಡಿದ ಶಿಕ್ಷಕರನ್ನು ಗುರುತಿಸಲು ಪೊಲೀಸ್‌ ತನಿಖೆ| ಸಿಕ್ಕಿಬಿದ್ದ ಶಿಕ್ಷಕರು ಮುಖ್ಯ ಪರೀಕ್ಷೆಯ ವಾರ ಮೊದಲು ವಶಕ್ಕೆ| ಗಣಿತ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಬಯಲು|

ಬೆಂಗಳೂರು(ಫೆ.19): ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಎರಡನೇ ದಿನವಾದ ಮಂಗಳವಾರ ನಡೆದ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪರೀಕ್ಷೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಪ್ರಶ್ನೆ ಪತ್ರಿಕೆ ವಾಟ್ಸಪ್‌ಗಳಲ್ಲಿ ಹರಿದಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಪ್ರಶ್ನೆಪತ್ರಿಕೆಗಳ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗುವ ಶಿಕ್ಷಕರನ್ನು ಮುಂದೆ ನಡೆಯಲಿರುವ ಮುಖ್ಯ ಪರೀಕ್ಷೆ ನಡೆಯುವ ಒಂದು ವಾರದ ಮೊದಲು ಪೊಲೀಸ್‌ ವಶಕ್ಕೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದ್ದಾರೆ. ಮುಖ್ಯ ಪರೀಕ್ಷೆಗೆ ಕೇವಲ ಒಂದು ತಿಂಗಳಷ್ಟೇ ಬಾಕಿ ಇರುವ ಮಧ್ಯೆಯೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಪ್ರಾಮಾಣಿಕವಾಗಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಪೋಷಕರ ಆತಂಕಕ್ಕೂ ಕಾರಣವಾಗಲಿದೆ. ಈ ಪ್ರಶ್ನೆ ಪತ್ರಿಕೆ ಯಾವ ರೀತಿ ಹೊರ ಬಂದಿದೆ ಎಂದು ಗುರುತಿಸಲು ವಾಟ್ಸಪ್‌ ಮಾಡಿದ ಮೊಬೈಲ್‌ ಸಂಖ್ಯೆಯನ್ನು ಪತ್ತೆ ಹಚ್ಚಿ ಕಾನೂನಿನ ಕ್ರಮ ಜರುಗಿಸುವಂತೆ ಕೋರಿ ದೂರು ದಾಖಲಿಸಲಾಗಿದೆ. ಪೊಲೀಸರು ಪತ್ತೆ ಹಚ್ಚಿದವರನ್ನು ಹಾಗೂ ನಿಯಮಬಾಹಿರವಾಗಿ ಕೃತ್ಯ ಎಸಗುವವರನ್ನು ಗುರುತಿಸಿ ವಾರ್ಷಿಕ ಪರೀಕ್ಷೆಗೂ ಮೊದಲು ಪೊಲೀಸ್‌ ವಶಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕ್ಯುಆರ್‌ ಕೋಡ್‌ನಲ್ಲಿ SSLC ಪ್ರಶ್ನೋತ್ತರ!

ಒಂದು ವೇಳೆ ಪ್ರಕರಣ ಮರುಕಳಿಸಿದರೆ ಶಾಲಾ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ ಮೊಬೈಲ್‌ ಫೋನ್‌ಗಳನ್ನು ಕೊಂಡೊಯ್ಯದಂತೆ ಮುಖ್ಯ ಶಿಕ್ಷಕರು ಗಮನ ಹರಿಸಬೇಕು ಎಂದು ಸುಮಂಗಲಾ ಹೇಳಿದ್ದಾರೆ.
 

click me!