
ಚಿಕ್ಕಮಗಳೂರು/ಬೆಂಗಳೂರು (ಮೇ 04): ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಪೋಸ್ಟಲ್ ಬ್ಯಾಲೆಟ್ (Postal Ballot) ಮರುಎಣಿಕೆ ಪ್ರಕ್ರಿಯೆಯು ಈಗ ಕಾನೂನು ಸಮರವಾಗಿ ಮಾರ್ಪಟ್ಟಿದೆ. ಮತ ಎಣಿಕೆಯ ವೇಳೆ ಬ್ಯಾಲೆಟ್ ಪೇಪರ್ ತಿದ್ದಿದ್ದಾರೆ ಎಂಬ ಗಂಭೀರ ಆರೋಪದ ಅಡಿಯಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಡಿ.ಎನ್. ಜೀವರಾಜ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, ಇದರ ಬೆನ್ನಲ್ಲೇ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಶೃಂಗೇರಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಪೋಸ್ಟಲ್ ಬ್ಯಾಲೆಟ್‌ಗಳ ಮರುಎಣಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಈ ಮರುಎಣಿಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಡಿ.ಎನ್. ಜೀವರಾಜ್ ಅವರು ಬ್ಯಾಲೆಟ್ ಪೇಪರ್‌ಗಳನ್ನು ತಿದ್ದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಶಾಸಕ ಟಿ.ಡಿ. ರಾಜೇಗೌಡ ಅವರ ಪರವಾಗಿ ಕೌಂಟಿಂಗ್ ಏಜೆಂಟ್ ಆಗಿದ್ದ ಸುಧೀರ್ ಕುಮಾರ್ ಮುರೋಳಿ ಅವರು ಈ ಬಗ್ಗೆ ದೂರು ನೀಡಿದ್ದರು. ಸುಧೀರ್ ಕುಮಾರ್ ಮುರೋಳಿ ನೀಡಿದ ದೂರಿನ ಅನ್ವಯ, ಜೀವರಾಜ್ ಸೇರಿದಂತೆ ಒಟ್ಟು ಮೂವರ ವಿರುದ್ಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ಯತ್ನಿಸಿದ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದ್ದು, ಜಿಲ್ಲಾ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ ಎಂದು ವಾದಿಸಿರುವ ಡಿ.ಎನ್. ಜೀವರಾಜ್, ಇಂದು (ಸೋಮವಾರ) ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ (High Court) ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮೇಲಿನ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜೀವರಾಜ್ ಅವರು ಸಲ್ಲಿಸಿರುವ ಈ ಅರ್ಜಿ ನಾಳೆ (ಮಂಗಳವಾರ) ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಮರುಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಜೀವರಾಜ್ ಬೆಂಬಲಿಗರು ವಾದಿಸುತ್ತಿದ್ದರೆ, ಸಾಕ್ಷ್ಯಗಳ ಆಧಾರದ ಮೇಲೆಯೇ ದೂರು ನೀಡಲಾಗಿದೆ ಎಂದು ಕಾಂಗ್ರೆಸ್ ಪಾಳಯ ಹೇಳುತ್ತಿದೆ.
ಶೃಂಗೇರಿ ಕ್ಷೇತ್ರದಲ್ಲಿ ಟಿ.ಡಿ. ರಾಜೇಗೌಡ ಮತ್ತು ಡಿ.ಎನ್. ಜೀವರಾಜ್ ನಡುವಿನ ರಾಜಕೀಯ ವೈಷಮ್ಯ ಹೊಸದೇನಲ್ಲ. ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೋಲು-ಗೆಲುವು ನಿರ್ಧಾರವಾಗಿತ್ತು. ಪೋಸ್ಟಲ್ ಬ್ಯಾಲೆಟ್‌ಗಳ ವಿಚಾರದಲ್ಲಿ ನಡೆಯುತ್ತಿರುವ ಈ ಕಾನೂನು ಹೋರಾಟವು ಕ್ಷೇತ್ರದ ರಾಜಕೀಯ ಭವಿಷ್ಯದ ಮೇಲೆ ಮಹತ್ತರ ಪರಿಣಾಮ ಬೀರುವ ಸಾಧ್ಯತೆಯಿದೆ.
ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಅಂಶಗಳು ಮತ್ತು ಜೀವರಾಜ್ ಅವರ ಹೈಕೋರ್ಟ್ ಅರ್ಜಿ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ನಾಳೆ ಹೈಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡರೆ, ಜೀವರಾಜ್ ಅವರಿಗೆ ಬಿಗ್ ರಿಲೀಫ್ ಸಿಗುತ್ತಾ ಅಥವಾ ಕಾನೂನು ಸಂಕಷ್ಟ ಮುಂದುವರಿಯುತ್ತಾ ಎಂಬುದು ಸ್ಪಷ್ಟವಾಗಲಿದೆ.