ಮುಂಬೈನಿಂದ ಹಾವೇರಿ ಬರಲಿದೆ ರೈಲು: ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌..!

By Kannadaprabha News  |  First Published May 21, 2020, 8:27 AM IST

ಮುಂಬೈನಿಂದ ಬರಲಿದೆ ರೈಲು, ಮುಂದಿದೆ ಕೊರೋನಾ ಸವಾಲು| ಈಗಾಗಲೇ ಮುಂಬೈ ನಂಟಿನಿಂದ ಬಂದಿದೆ ಮೂರು ಕೇಸ್‌| ಹಾವೇರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ 1,200 ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಶೀಘ್ರದಲ್ಲಿಯೇ ಬರಲಿದೆ| ಈ ರೈಲನ್ನು ಬರಮಾಡಿಕೊಳ್ಳಲು ಜಿಲ್ಲೆಯ ಅ​ಧಿಕಾರಿಗಳು ಅಗತ್ಯ ಸಿದ್ಧತಾ ಕ್ರಮಗಳನ್ನು ಈಗಾಗಲೇ ನಡೆಸಿದ್ದಾರೆ|


ಹಾವೇರಿ(ಮೇ.21): ಮೇ 3ರ ವರೆಗೆ ಕೊರೋನಾ ಮುಕ್ತವಾಗಿದ್ದ ಜಿಲ್ಲೆಗೆ ಮುಂಬೈನಿಂದ ಬಂದ ಮೂವರು ಸೋಂಕು ಹೊತ್ತು ತಂದ ಪರಿಣಾಮ ಜಿಲ್ಲೆಯು ಹಸಿರು ವಲಯದಿಂದ ಕಿತ್ತಳೆ ವಲಯವಾಗಿ ಮಾರ್ಪಟ್ಟಿದೆ. ಆದರೂ ಸದ್ಯ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿರುವ ಈ ಸಮಯದಲ್ಲಿ ಮಹಾರಾಷ್ಟ್ರದ ಮುಂಬೈನಿಂದ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಇಲ್ಲಿಗೆ ಕರೆತರುವ ಕಾರ್ಯ ನಡೆದಿದೆ. ಹಾವೇರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ 1,200 ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಶೀಘ್ರದಲ್ಲಿಯೇ ಜಿಲ್ಲೆಗೆ ಬರಲಿದೆ. ಈ ರೈಲನ್ನು ಬರಮಾಡಿಕೊಳ್ಳಲು ಜಿಲ್ಲೆಯ ಅ​ಧಿಕಾರಿಗಳು ಅಗತ್ಯ ಸಿದ್ಧತಾ ಕ್ರಮಗಳನ್ನು ಈಗಾಗಲೇ ನಡೆಸಿದ್ದಾರೆ.

ಮುಂಬೈನಿಂದ ರೈಲು:

Tap to resize

Latest Videos

ಮಹಾರಾಷ್ಟ್ರದಲ್ಲಿ ವಿವಿಧ ಕೆಲಸಗಳಿಗೆ ಹೋಗಿ ಸಿಲುಕಿಕೊಂಡಿರುವವರು ಹಾಗೂ ಅಲ್ಲಿ ವಲಸೆ ಹೋಗಿದ್ದ ರಾಜ್ಯದವರನ್ನು ರಾಜ್ಯಕ್ಕೆ ಕರೆತರುವ ಸರ್ಕಾರದ ಕ್ರಮದ ಪರಿಣಾಮವಾಗಿ ಮುಂಬೈನಿಂದ ನೇರವಾಗಿ ಹಾವೇರಿಗೆ ವಿಶೇಷ ರೈಲು ಬರಲಿದೆ. ವಿಶೇಷ ರೈಲಿನಲ್ಲಿ ಸುಮಾರು 1,200 ಪ್ರಯಾಣಿಕರು ಬರಲಿದ್ದಾರೆ. ಇದರಲ್ಲಿ ಶೇ. 60ರಷ್ಟು ಪ್ರಯಾಣಿಕರು ಹಾವೇರಿ ಜಿಲ್ಲೆಯವರೇ ಆಗಿರುವುದರಿಂದ ಮಹಾರಾಷ್ಟ್ರದಿಂದ ನೇರವಾಗಿ ಹಾವೇರಿ ರೈಲ್ವೆ ನಿಲ್ದಾಣಕ್ಕೆ ರೈಲು ಆಗಮಿಸಲಿದೆ. ಸುತ್ತಮುತ್ತಲಿನ ಜಿಲ್ಲೆಯವರು ಸೇರಿ ಎಲ್ಲರನ್ನೂ ಹಾವೇರಿ ನಿಲ್ದಾಣದಲ್ಲಿಯೇ ಇಳಿಸಲಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್‌ ಕಣಕೇಕೆ ಹಾಕುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಮಹಾರಾಷ್ಟ್ರದಿಂದ ಬಂದವರಿಂದಲೇ ಸೋಂಕು ವ್ಯಾಪಿಸುತ್ತಿದೆ. ಆದ್ದರಿಂದ ವಿಶೇಷ ರೈಲಿನಲ್ಲಿ ಸಾವಿರಾರು ಜನರು ಬಂದರೆ ಅವರಿಂದ ಜಿಲ್ಲೆಯಲ್ಲೂ ಸೋಂಕು ಹಬ್ಬುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರಿಗೆ ಆತಂಕ ಶುರುವಾಗಿದೆ.

ಲಾಕ್‌ಡೌನ್‌ 4.0: ಹಾವೇರಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ರೂಪಿಸಿ, ಸಚಿವ ಬೊಮ್ಮಾಯಿ

ಕೌಂಟರ್‌ ವ್ಯವಸ್ಥೆಗೆ ಸಿದ್ಧತೆ:

ರೈಲಿನ ಪ್ರತಿ ಬೋಗಿಯಲ್ಲಿ 50 ಜನರು ಪ್ರಯಾಣಿಸಲು ಮಾತ್ರ ಅವಕಾಶ ಕೊಡಲಾಗಿದೆ. ಅಂದಾಜು 22ರಿಂದ 24 ಬೋಗಿಗಳಲ್ಲಿ ಪ್ರಯಾಣಿಕರು ಹಾವೇರಿ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್‌ಫಾರಂಗೆ ಬಂದಿಳಿಯಲ್ಲಿದ್ದಾರೆ.
ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಇಳಿಯಲಿರುವ ಜಿಲ್ಲೆಯ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್‌ಗೆ ಕಳುಹಿಸಲು ತಾಲೂಕಾವಾರು ಕೌಂಟರ್‌ಗಳನ್ನು ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲ್ಲಿಂದ ಆಯಾ ತಾಲೂಕು ಹಾಗೂ ಜಿಲ್ಲೆಗಳಿಗೆ ಕರೆದೊಯ್ಯಲು ಬಸ್‌ಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ.

ಸವಣೂರಿನಲ್ಲಿ ಪತ್ತೆಯಾಗಿರುವ ಎರಡು ಕೊರೋನಾ ಪಾಸಿಟಿವ್‌ ಮತ್ತು ಶಿಗ್ಗಾಂವಿ ತಾಲೂಕು ಅಂದಲಗಿಯ ಒಬ್ಬ ವ್ಯಕ್ತಿಯಲ್ಲಿ ಕೊರೋನಾ ಕೇಸ್‌ ಪತ್ತೆಯಾಗಿದೆ. ಈ ಮೂವರೂ ಮುಂಬೈನಿಂದ ಬಂದವರು ಎನ್ನುವುದು ವಿಶೇಷ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಮುಂಬೈನಿಂದ ಬಂದವರೆಂದರೆ ಆತಂಕ ಬರುವಂತಾಗಿದೆ. ಆದ್ದರಿಂದ ಇಂಥ ಸಂದರ್ಭದಲ್ಲಿ ಸಾವಿರಾರು ಜನರು ಮುಂಬೈನಿಂದ ಬರುತ್ತಾರೆ ಎನ್ನುವುದು ಭಯಕ್ಕೆ ಕಾರಣವಾಗಿದೆ. ಆದ್ದರಿಂದ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹುಬ್ಬಳ್ಳಿ ನಿಲ್ದಾಣದಲ್ಲೇ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಕರೆತರುವ ಕಾರ್ಯ ಮಾಡಬೇಕು. ಇದರಿಂದ ಬೇರೆ ಜಿಲ್ಲೆಗಳ ಜನ ಇಲ್ಲಿಗೆ ಬರುವುದನ್ನು ತಡೆಯಬಹುದಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಬಗ್ಗೆ ಮಾತನಾಡಿದ ಅಪರ ಜಿಲ್ಲಾ​ಕಾರಿ ಯೋಗೇಶ್ವರ ಅವರು, ಮಹಾರಾಷ್ಟ್ರದಿಂದ ಜಿಲ್ಲೆಗೆ ರೈಲಿನ ಮೂಲಕ ಜನರನ್ನು ಕಳಿಸಿಕೊಡುವ ಸೂಚನೆ ಬಂದಿದೆ. ಆದರೆ ರೈಲಿನ ವೇಳಾಪಟ್ಟಿಇನ್ನೂ ಸಿದ್ಧವಾಗಿಲ್ಲ. ಯಾವಾಗ ರೈಲು ಬರಲಿದೆ ಎನ್ನುವುದನ್ನು ತಿಳಿಸಿಲ್ಲ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ರೈಲಿನಲ್ಲಿ ಬರುವ ಎಲ್ಲರನ್ನೂ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಸೋಂಕು ಹರಡದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. 
 

click me!