ಬೆಳಗಾವಿಯಲ್ಲೇ ಅಧಿವೇಶನ ನಡೆಸುವಂತೆ ಸಿಎಂಗೆ ಪತ್ರ: ಹೊರಟ್ಟಿ

Kannadaprabha News   | Asianet News
Published : Jul 14, 2021, 02:52 PM ISTUpdated : Jul 14, 2021, 03:14 PM IST
ಬೆಳಗಾವಿಯಲ್ಲೇ ಅಧಿವೇಶನ ನಡೆಸುವಂತೆ ಸಿಎಂಗೆ ಪತ್ರ: ಹೊರಟ್ಟಿ

ಸಾರಾಂಶ

* ಈ ತಿಂಗಳಾಂತ್ಯ, ಆಗಸ್ಟ್‌ ಮೊದಲ ವಾರದಲ್ಲಿ ಅಧಿವೇಶನ ಕರೆಯಬಹುದು * ಸಚಿವ ಸಂಪುಟದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ  * ಕೋವಿಡ್‌-19 ನೆಪದಲ್ಲಿ ಕಲಿಕೆಯಿಂದ ಮಕ್ಕಳನ್ನು ದೂರ ಮಾಡೋದು ಸರಿಯಲ್ಲ   

ಬೆಳಗಾವಿ(ಜು.14): ಉತ್ತರ ಕರ್ನಾಟಕದ ಶಕ್ತಿ ಸೌಧವಾಗಿರುವ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಬೇಕೆಂದು ಕಳೆದ 15 ದಿನಗಳ ಹಿಂದೆಯೇ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದೇನೆ. ಅವರು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 15 ದಿನಗಳ ಹಿಂದೆಯೇ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಪತ್ರ ಬರೆದಿದ್ದೇನೆ. 2018 ಡಿಸೆಂಬರ್‌ ಬಳಿಕ ಈವರೆಗೂ ಬೆಳಗಾವಿಯಲ್ಲಿ ಅಧಿವೇಶನ ಕರೆದಿಲ್ಲ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳ ಕುರಿತು ಚರ್ಚಿಸಲು ಬೆಳಗಾವಿಯಲ್ಲಿಯೇ ವಿಧಾನಮಂಡಳ ಅಧಿವೇಶನ ನಡೆಸಲು ಸಿಎಂಗೆ 15 ದಿನಗಳ ಹಿಂದೆಯೇ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಸಚಿವ ಸಂಪುಟ ಸಭೆ ಕರೆದು ಚರ್ಚಿಸಿ ತೀರ್ಮಾನಿಸುವುದಾಗಿ ಸಿಎಂ ತಿಳಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವಾಗ ಅಧಿವೇಶನ ನಡೆಸಬೇಕು ಎಂಬುದು ಮಾಹಿತಿ ಇಲ್ಲ ಎಂದರು.

ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಅಲ್ಲದೆ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸುವುದು ಸೂಕ್ತ ಎಂದ ಅವರು, ಸಚಿವ ಸಂಪುಟದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರಬೇಕು. ಅದುವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಅಧಿವೇಶನ ಕುರಿತು ಸಂಪುಟದಲ್ಲಿ ಚರ್ಚಿಸಿ ನಿರ್ಧಾರ: ಸಚಿವ ಶೆಟ್ಟರ್‌

ನಾನು ಉತ್ತರ ಕರ್ನಾಟಕದವನು. ವಿಧಾನಸಭೆ ಸಭಾಧ್ಯಕ್ಷ, ಉಪ ಸಭಾಧ್ಯಕ್ಷ, ಕಾನೂನು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸರ್ಕಾರಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಪ್ರಮುಖ ಖಾತೆ ಸಚಿವರು ಉತ್ತರ ಕರ್ನಾಟಕದವರು. ಈ ಹಿನ್ನೆಲೆ ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಬೇಕೆಂಬ ಆಸೆ ನಮ್ಮದಿದೆ. ಹೀಗೆ ಅಧಿವೇಶನ ಮಾಡಿ ಅಂತಾ ನಿರ್ದೇಶನ ಕೊಡುವ ಅಧಿಕಾರ ನಮಗಿಲ್ಲ. ಸಚಿವ ಸಂಪುಟದಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ಸದ್ಯ ಜುಲೈ ಅಂತ್ಯ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಕರೆಯಬಹುದು ಎಂದು ತಿಳಿಸಿದರು.

ಮೇಕೆದಾಟು ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಸಮಸ್ಯೆ ಬಂದಾಗ ಎಲ್ಲ ಪಕ್ಷದವರು ಒಗ್ಗೂಡುವುದು ಸೂಕ್ತ. ಗಡಿ ಭಾಗ, ಮೇಕೆದಾಟು, ಆಲಮಟ್ಟಿ, ಕಾವೇರಿ ಈ ರೀತಿ ರಾಜ್ಯದ ಸಮಸ್ಯೆ ಬಂದಾಗ ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು.

ಬೇರೆ ರಾಜ್ಯದವರಂತೆ ನಮ್ಮವರೂ ಒಗ್ಗೂಡಲ್ಲ ಎಂಬ ಕೊರತೆ ಎದ್ದು ಕಾಣುತ್ತದೆ ಎಂದ ಅವರು, ಈಗಷ್ಟೇ ಅಲ್ಲ, ಯಾವುದೇ ಸರ್ಕಾರ ಬಂದಾಗ ಇದು ಕಾಣುತ್ತದೆ. ನಮ್ಮ ಹೃದಯ ಬಹಳ ದೊಡ್ಡದಿದೆ, ಆ ದೊಡ್ಡ ಹೃದಯ ಕೆಲವೊಮ್ಮೆ ಸಮಸ್ಯೆ ಮಾಡುತ್ತೆ. ಅದು ಆಗಬಾರದು ಎಂದು ಹೇಳಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಕರೆಯುವುದು ಸೂಕ್ತ. ಆದರೆ, ಅಧಿವೇಶನ ಕರೆದರೆ ಬೆಳಗಾವಿಗೆ 600 ಅಧಿಕಾರಿಗಳು ಬರಬೇಕಾಗುತ್ತದೆ. ಕೊರೋನಾ ಇದೆ ಅಂತಾ ಕೆಲವು ಅಧಿಕಾರಿಗಳು ಹೇಳಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ಕರೆಯುವ ಬಗ್ಗೆ ಸಚಿವ ಸಂಪುಟ ತೀರ್ಮಾನಿಸುತ್ತೆ. ಸಂಪುಟ ಸಭೆ ದಿನಾಂಕ ಫಿಕ್ಸ್‌ ಮಾಡಿದ್ರೆ ನಾವು ಮುಂದಿನ ಬಗ್ಗೆ ನೋಡಿಕೊಳ್ತೇವೆ ಎಂದರು.

ಕೋವಿಡ್‌-19 ನೆಪದಲ್ಲಿ ಕಲಿಕೆಯಿಂದ ಮಕ್ಕಳನ್ನು ದೂರ ಮಾಡುವುದು ಸರಿಯಲ್ಲ. ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೆ ಹಂತ ಹಂತವಾಗಿ ತರಗತಿಗಳನ್ನು ನಡೆಸುವುದು ಸೂಕ್ತ. ಈ ಕುರಿತು ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಿದ್ದೇನೆ. ಅಧಿಕಾರಿಗಳು ಕಾಳಜಿ ವಹಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಆನ್‌ಲೈನ್‌ ತರಗತಿಗಳಿಂದ ಮಕ್ಕಳ ಶಿಕ್ಷಣ ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದರು.
 

PREV
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ