ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ (3.36 ಕಿ.ಮೀ.) ನಿರ್ಮಾಣ ಆಗಿರುವ ದಕ್ಷಿಣ ಭಾರತದ ಪ್ರಥಮ ಡಬಲ್ ಡೆಕ್ಕರ್ (ಎಲಿವೆಟೆಡ್ ರೋಡ್ ಕಂ ಮೆಟ್ರೋ ಫ್ಲೈಓವರ್) ಇಂದು ಉದ್ಘಾಟನೆಯಾಗಲಿದೆ.
ಬೆಂಗಳೂರು (ಜು.17): ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ (3.36 ಕಿ.ಮೀ.) ನಿರ್ಮಾಣ ಆಗಿರುವ ದಕ್ಷಿಣ ಭಾರತದ ಪ್ರಥಮ ಡಬಲ್ ಡೆಕ್ಕರ್ (ಎಲಿವೆಟೆಡ್ ರೋಡ್ ಕಂ ಮೆಟ್ರೋ ಫ್ಲೈಓವರ್) ಇಂದು ಉದ್ಘಾಟನೆಯಾಗಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಮಧ್ಯಾಹ್ನ 3 ಗಂಟೆಗೆ ಡಬಲ್ ಡೆಕ್ಕರ್ ಉದ್ಘಾಟಿಸಲಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮೆಟ್ರೋ ಹಳದಿ (ಆರ್.ವಿ.ರಸ್ತೆ - ಬೊಮ್ಮಸಂದ್ರ) ಮಾರ್ಗದಲ್ಲಿ ಈ ಡಬಲ್ ಡೆಕ್ಕರ್ ನಿರ್ಮಾಣವಾಗಿದೆ.
ನಗರದಲ್ಲಿ ವಿಪರೀತ ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಒಂದಾಗಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಡಬಲ್ ಡೆಕ್ಕರ್‌ನಿಂದ ಟ್ರಾಫಿಕ್ ಸಮಸ್ಯೆಗೆ ಹೆಚ್ಚಿನ ಪರಿಹಾರ ಸಿಗುವ ನಿರೀಕ್ಷೆಯಿದೆ. ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮವು ರೂಪಿಸಿದ ಈ ಡಬಲ್ ಡೆಕ್ಕರ್ ಸಂಪೂರ್ಣ ಪ್ರಯೋಜನವನ್ನು ಮುಂದಿನ ವರ್ಷದಿಂದಲೇ ನಿರೀಕ್ಷಿಸಬಹುದಾಗಿದೆ. ನೆಲಮಟ್ಟದಿಂದ 8 ಮೀಟರ್ ಎತ್ತರದಲ್ಲಿ ವಾಹನ ಓಡಾಟಕ್ಕಾಗಿ ಮೇಲ್ಸೇತುವೆ ನಿರ್ಮಾಣವಾಗಿದ್ದು, 16 ಮೀಟರ್ ಎತ್ತರದಲ್ಲಿ ಮೆಟ್ರೋ ಹಳದಿ ಮಾರ್ಗವಿದೆ. ಇಲ್ಲಿ ವರ್ಷಾಂತ್ಯಕ್ಕೆ ಚಾಲಕರಹಿತ ರೈಲಿನ ಸಂಚಾರ ಶುರುವಾಗುವ ಸಾಧ್ಯತೆಯಿದೆ.
ಜೆಡಿಎಸ್ ನಾಯಕರು ಗೋಡಂಬಿ, ದ್ರಾಕ್ಷಿ ತಿನ್ನಲು ಬಂದಿದ್ದರಾ?: ಡಿ.ಕೆ.ಶಿವಕುಮಾರ್
3.36 ಕಿ.ಮೀ. ಮಧ್ಯೆ ಎಲ್ಲಿಯೂ ರಸ್ತೆಗೆ ಇಳಿಯಲು ಅವಕಾಶವಿಲ್ಲ. ಆದರೆ, ತಿರುಗಿ ಬರಲು ಮೂರು ಕಡೆ ಯು ಟರ್ನ್ ಒದಗಿಸಲಾಗಿದೆ. ಜೊತೆಗೆ ಮೇಲ್ಸೇತುವೆ ಮೇಲ್ಭಾಗದಲ್ಲಿ ದೇಶದ ಅತೀ ಎತ್ತರದ ಮೆಟ್ರೋ ನಿಲ್ದಾಣ ಎನ್ನಿಸಿಕೊಳ್ಳಲಿರುವ ಜಯದೇವ ಮೆಟ್ರೋ ಸ್ಟೇಷನ್, ಬಿಟಿಎಂ ಲೇಔಟ್ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್‌ಗಳಿವೆ. ಈ ದ್ವಿಪಥ ಮೇಲ್ಸೇತುವೆಯ ಪೈಕಿ ಸದ್ಯ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಡೆಗೆ ಬರುವ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ರಾಗಿಗುಡ್ಡ ಕಡೆಗೆ ತೆರಳುವ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇನ್ನೊಂದು ವರ್ಷದಲ್ಲಿ ಸಂಚಾರಕ್ಕೆ ಲಭ್ಯವಾಗಲಿದೆ.
ಜೊತೆಗೆ ಫ್ಲೈಓವರ್ ಒಳಗೊಂಡ ಐದು ರ್ಯಾಂಪ್‌ಗಳ ಪೈಕಿ ಎರಡು (ಡಿ,ಇ) ರ್ಯಾಂಪ್‌ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಇದು ಕೂಡ 2025ಕ್ಕೆ ಮುಗಿಯಲಿದೆ. ಹೀಗಾಗಿ ಫ್ಲೈಓವರ್‌ನ ಪೂರ್ಣ ಪ್ರಯೋಜನ ಸಿಗಲು ಕಾಯುವುದು ಅನಿವಾರ್ಯ. ನೆಲಮಟ್ಟದ ತ್ರಿಪಥ ರಸ್ತೆಯಲ್ಲಿ ಸಂಚಾರ ಎಂದಿನಂತೆ ಇರಲಿದೆ.ನಗರದ ವಾಹನದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಒಂದಾಗಿರುವ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಪ್ರತಿನಿತ್ಯ (ಬೆಳಗ್ಗೆ 6- ರಾತ್ರಿ 10) ಸುಮಾರು 46 ಸಾವಿರ ವಾಹನಗಳು ಸಂಚರಿಸುತ್ತವೆ. ಅವುಗಳಲ್ಲಿ 24 ಸಾವಿರ ಕಾರು, ಭಾರಿ ವಾಹನಗಳು ಸೇರಿವೆ. ಬೆಳಗ್ಗೆ ಮತ್ತು ಸಂಜೆ ವೇಳೆ ಅರ್ಧ ಗಂಟೆಗೂ ಹೆಚ್ಚು ಸಮಯ ಸಂಚಾರ ದಟ್ಟಣೆ ಹಿಡಿಯುತ್ತದೆ.
2019ರಲ್ಲೇ ಆರಂಭವಾಗಿದ್ದ ಈ ಕಾಮಗಾರಿ 2021ರಲ್ಲಿ ಪೂರ್ಣಗೊಳ್ಳಬೇಕಿತ್ತು. ಅದರೆ, ಮೂರು ವರ್ಷ ತಡವಾಗಿ ಉದ್ಘಾಟನೆ ಆಗುತ್ತಿದೆ. ಸದ್ಯ ಒಂದು ಬದಿಯಲ್ಲಿ ವಾಹನ ಸಂಚಾರ ಚಾಲನೆಗೊಳ್ಳಲಿದೆ. ಸಿಗ್ನಲ್ ರಹಿತ ಎಲಿವೆಟೆಡ್ ರಸ್ತೆ ಇದಾಗಿರುವ ಕಾರಣ 5-10 ನಿಮಿಷದಲ್ಲಿ ವಾಹನಗಳು ಕ್ರಮಿಸಲು ಅನುಕೂಲವಾಗಲಿದೆ.
ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ, ನಷ್ಟ: ನೂರಾರು ಮನೆಗಳಿಗೆ ಹಾನಿ
ಯಾರಿಗೆ ಹೆಚ್ಚು ಅನುಕೂಲ?: ಮೇಲ್ಸೇತುವೆಯನ್ನು ನೆಲಮಟ್ಟದಿಂದ ಐದು ರ್ಯಾಂಪ್‌ಗಳು ಸಂಪರ್ಕಿಸಲಿವೆ. ಸದ್ಯಕ್ಕೆ ಎ, ಬಿ, ಸಿ ರ್ಯಾಂಪ್‌ಗಳ ಕಾಮಗಾರಿ ಮುಗಿದಿದೆ. ರ್ಯಾಂಪ್ ‘ಎ’ ರಾಗಿಗುಡ್ಡ ಹಾಗೂ ಹೊಸೂರನ್ನು, ರ್ಯಾಂಪ್ ‘ಬಿ’ ಎಚ್‌ಎಸ್‌ಆರ್ ಲೇಔಟ್, ರ್ಯಾಂಪ್ ‘ಸಿ’ ಬಿಟಿಎಂ ಲೇಔಟ್, ಹೊಸೂರು ರೋಡ್, ಎಚ್‌ಎಸ್‌ಆರ್ ಲೇಔಟ್ ಸಂಪರ್ಕಿಸುತ್ತದೆ. ಕಾಮಗಾರಿ ನಡೆಯುತ್ತಿರುವ ‘ಡಿ’ ರ್ಯಾಂಪ್ ಮೆಟ್ರೋ ಲೈನ್ ಮತ್ತು ರ್ಯಾಂಪ್ ಎ ಮೇಲಿಂದ ಹಾದುಹೋಗಲಿದ್ದು ಎಚ್‌ಎಸ್‌ಆರ್ ಲೇಔಟ್ ಮತ್ತು ರಾಗಿಗುಡ್ಡವನ್ನು ಸಂಪರ್ಕಿಸಲಿದೆ. ಎಚ್‌ಎಸ್ಆರ್ ಲೇಔಟ್‌ನಿಂದ ಡೌನ್ ರ್ಯಂಪ್ ಆಗಿರುವ ‘ಇ’ ಬಿಟಿಎಂ ಲೇಔಟ್ ಸಂಪರ್ಕಿಸಲಿದೆ. ಸದ್ಯಕ್ಕೆ ಮೇಲ್ಸೇತುವೆ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತವಾಗುವುದರಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ತೆರಳುವವರಿಗೆ ಹೆಚ್ಚು ಉಪಯೋಗವಾಗಲಿದೆ. ಜೊತೆಗೆ ಎಚ್‌ಎಸ್‌ಆರ್ ಬಡಾವಣೆಗೆ ಕಡೆಗೆ, ಬಿಟಿಎಂ ಲೇಔಟ್ ಕಡೆಗೆ ಸಂಚರಿಸುವ ವಾಹನಗಳಿಗೂ ಸಮಯ ಉಳಿತಾಯವಾಗಲಿದೆ.