ರಾಮನಗರ : ಗುಂಡೀಗೆರೆ ಗ್ರಾಮದಲ್ಲೊಂದು ಅಪರೂಪದ ಸರ್ಕಾರಿ ಶಾಲೆ

By Kannadaprabha News  |  First Published Jul 17, 2024, 10:12 AM IST

ಇದೊಂದು ಪುಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ. ಈ ಶಾಲೆಯಲ್ಲಿ 2400 ಪುಸ್ತಕಗಳಿರುವ ಗ್ರಂಥ ಭಂಡಾರವಿದೆ. ಮಕ್ಕಳಿಗೆ ಬಿಡುವು ಸಿಕ್ಕರೆ ಸಾಕು, ಗ್ರಂಥಾಲಯಕ್ಕೆ ಹೋಗಿ ತಮಗೆ ಬೇಕಾದ ಪುಸ್ತಕ ತೆಗೆದುಕೊಂಡು ಓದಲು ಆರಂಭಿಸುತ್ತಾರೆ. ಇಂತಹದ್ದೊಂದು ಅಪರೂಪದ ಶಾಲೆಯನ್ನು ನೀವು ಕುದೂರು ಹೋಬಳಿಯ ಗುಂಡೀಗೆರೆ ಗ್ರಾಮದಲ್ಲಿ ಕಾಣಬಹುದು.


ಗಂ.ದಯಾನಂದ ಕುದೂರು

 ಕುದೂರು :  ಇದೊಂದು ಪುಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ. ಈ ಶಾಲೆಯಲ್ಲಿ 2400 ಪುಸ್ತಕಗಳಿರುವ ಗ್ರಂಥ ಭಂಡಾರವಿದೆ. ಮಕ್ಕಳಿಗೆ ಬಿಡುವು ಸಿಕ್ಕರೆ ಸಾಕು, ಗ್ರಂಥಾಲಯಕ್ಕೆ ಹೋಗಿ ತಮಗೆ ಬೇಕಾದ ಪುಸ್ತಕ ತೆಗೆದುಕೊಂಡು ಓದಲು ಆರಂಭಿಸುತ್ತಾರೆ. ಇಂತಹದ್ದೊಂದು ಅಪರೂಪದ ಶಾಲೆಯನ್ನು ನೀವು ಕುದೂರು ಹೋಬಳಿಯ ಗುಂಡೀಗೆರೆ ಗ್ರಾಮದಲ್ಲಿ ಕಾಣಬಹುದು.

Latest Videos

undefined

ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುತ್ತಿರುವಾಗ ಪುಟ್ಟ ಗ್ರಾಮದಲ್ಲಿರುವ ಈಯು ಯಾವುದೇ ಖಾಸಗಿ ಶಾಲೆಗಳಲ್ಲಿ ಇರದಂತಹ ಓದುವ ಸಂಸ್ಕೃತಿಯನ್ನು ಮಕ್ಕಳಲ್ಲಿ ರೂಪಿಸಿರುವುದು ಎಂತಹವರನ್ನು ಅಚ್ಚರಿ ಮೂಡಿಸಿದೆ.

ಮಾಗಡಿ ತಾಲೂಕು ಗುಂಡೀಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಬ್ಬರು ಶಿಕ್ಷಕರಿದ್ದಾರೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಟ್ಟ ಪುಟ್ಟ ಆರುನೂರು ಪುಸ್ತಕಗಳನ್ನು ಮಕ್ಕಳು ನಿತ್ಯವೂ ಓದುತ್ತಾರೆ. ಸ್ವಾಮಿ ವಿವೇಕಾನಂದರು, ಪರಮಹಂಸರು, ಶಾರದಾ ಮಾತೆ, ಗಾಂಧಿ, ಬಸವ, ಬುದ್ಧ, ಅಂಬೇಡ್ಕರ್, ಎಸ್.ಎಲ್.ಭೈರಪ್ಪ ರಂತಹ ಬರಹಗಾರರ ಪುಸ್ತಕಗಳು, ದೇಶಭಕ್ತಿಯ ಹಾಗೂ ರಾಮಾಯಣ, ಮಹಾಭಾರತ, ವಚನಗಳು, ದಾಸರ ಪದಗಳು, ಶಿಶುನಾಳ ಷರೀಪ, ಜನಪದ ಇಂತಹ ಅನೇಕ ಪುಸ್ತಕಗಳನ್ನು ಕೈಯಲ್ಲಿಡಿದು, ಪುಟ್ಟ ಮಕ್ಕಳಿಗೆ ಇಂತಹ ಬರಹಗಳು ಅರ್ಥವಾಗದೇ ಹೋದರೂ ಅದನ್ನು ಹಿಡಿದು ಪುಸ್ತಕ ತಿರುವಿ ಹಾಕುತ್ತಾರೆ. ಪುಸ್ತಕದಲ್ಲಿರುವ ಹಾಡುಗಳನ್ನು ಕಲಿತು ಗುನುಗುತ್ತಾರೆ. ಚಿಕ್ಕಂದಿನಿಂದಲೇ ಪಠ್ಯದ ಜೊತೆಗೆ ಇತರೆ ಪುಸ್ತಕಗಳನ್ನು ಓದುವ ಹುಚ್ಚನ್ನು ಹಿಡಿಸುವಲ್ಲಿ ಇಲ್ಲಿನ ಶಿಕ್ಷಕರು ಯಶಸ್ವಿಯಾಗಿದ್ದಾರೆ. ಶಿಶುಗೀತೆಗಳು, ಕುವೆಂಪು, ಬೇಂದ್ರೆ, ಶಿವರುದ್ರಪ್ಪನವರ ಕವಿತೆಗಳನ್ನು ಶಿಕ್ಷಕರು ಓದಿ ಹೇಳಿ ವಿವರಿಸುತ್ತಾರೆ.

ಗ್ರಾಮದ ದಾನಿಗಳ ಉದಾರತೆ:

ಗುಂಡೀಗೆರೆ ಗ್ರಾಮ ಸುಮಾರು ಎಪತ್ತೆಂಬತ್ತು ಮನೆಗಳಿರುವ ಪುಟ್ಟ ಗ್ರಾಮ. ಈ ಗ್ರಾಮಕ್ಕೆ ಬಂದು ಭೂಮಿ ಕೊಂಡು ತೋಟ ಮಾಡಿಕೊಂಡಿರುವ ನಗರ ಪ್ರದೇಶದ ಜನರು, ಗ್ರಾಮಸ್ಥರು ಸೇರಿ ಗ್ರಾಮದ ಸರ್ಕಾರಿ ಶಾಲೆಯನ್ನು ಮಾದರಿ ಮಾಡಬೇಕೆಂದು ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜು ಅವರನ್ನು ಕೇಳಿದಾಗ ಅವರಲ್ಲಿ ಮೊದಲಿನಿಂದಲೂ ಚಿಗುರೊಡೆಯುತ್ತಿದ್ದ ಗ್ರಂಥಾಲಯದ ಪರಿಕಲ್ಪನೆಯನ್ನು ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮಸ್ಥರು ಖುಷಿಗೊಂಡು ಸುಮಾರು 2400ಕ್ಕೂ ಹೆಚ್ಚು ವಿವಿಧ ರೀತಿಯ ಪುಸ್ತಕಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಪುಸ್ತಕಗಳನ್ನು ಕ್ರಮವಾಗಿ ವಿಭಾಗ ಮಾಡಿ ಜೋಡಿಸಲು ಪುಸ್ತಕ ಕಪಾಟುಗಳನ್ನು ಮಾಡಿಕೊಡಲಾಯಿತು.

ಸಮುದಾಯವೂ ಭಾಗಿ:

ಈ ಗ್ರಂಥಾಲಯ ಶಾಲೆಯೊಳಗಿದ್ದರೂ ಗ್ರಾಮದ ಜನರು ಕೂಡಾ ಶಾಲೆಗೆ ಬಂದು ತಮಗೆ ಬೇಕಾದ ಪುಸ್ತಕ ತೆಗೆದುಕೊಂಡು ಅಲ್ಲಿಯೇ ಓದಬಹುದು ಅಥವಾ ವಾರದಮಟ್ಟಿಗೆ ಮನೆಗೆ ತೆಗೆದುಕೊಂಡು ಹೋಗಿ ಓದಿ ವಾಪಸ್ ತಂದು ಕೊಡಬೇಕು ಎಂಬ ಓದಿನ ಸಲಿಗೆ ನೀಡಿದರು. ಇದರಿಂದಾಗಿ ಗ್ರಾಮದ ಮಹಿಳೆಯರು, ಮಕ್ಕಳು, ಓದುವ ಆಸೆಯುಳ್ಳ ವೃದ್ಧರು ಶಾಲೆಗೆ ಬಂದು ಪುಸ್ತಕ ಓದಲಾರಂಭಿಸಿದರು. ಇದರಿಂದ ಗ್ರಾಮದ ಪ್ರತಿಯೊಬ್ಬರಿಗೂ ಇದು ನಮ್ಮ ಶಾಲೆ ಎಂಬ ಭಾವವನ್ನು ಬಿತ್ತಿದರು. ಹೇಗಾದರೂ ಮಾಡಿ ನಮ್ಮ ಗ್ರಾಮದಲ್ಲಿ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಗ್ರಾಮದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಾರಂಭಿಸಿದರು.

ಗುಂಡೀಗೆರೆ ಗ್ರಾಮ ಅತ್ಯಂತ ಪುಟ್ಟದ್ದು. ಶಾಲೆಯೂ ಚಿಕ್ಕದ್ದೇ ಆಗಿದ್ದರೂ ಇಲ್ಲಿನ ಮುಖ್ಯ ಶಿಕ್ಷಕ ಬಸವರಾಜು, ರಾಘವೇಂದ್ರ ಇವರ ಶ್ರದ್ಧೆ ಮತ್ತು ಉತ್ಸಾಹದಿಂದಾಗಿ ಶಾಲೆಯ ವಾತಾವರಣ ಅಚ್ಚುಕಟ್ಟಾಗಿದೆ. ಅತ್ಯಂತ ರುಚಿಯಾಗಿ ಬಿಸಿಯೂಟವನ್ನು ಮಾಡಿ ಮಕ್ಕಳಿಗೆ ಬಡಿಸುವ ಸಿಬ್ಬಂದಿ ಇದೆಲ್ಲದರಿಂದಲೂ ಶಾಲೆಗೆ ಮಕ್ಕಳು ತಪ್ಪಿಸಿಕೊಳ್ಳದೇ ಬರುತ್ತಾರೆ. ಹಾಗೆ ತಪ್ಪಿಸಿಕೊಂಡ ಮಕ್ಕಳ ವಿಚಾರಣೆಗೆ ಸ್ವಯಂ ಶಿಕ್ಷಕರೇ ವಿಚಾರಿಸುತ್ತಾರೆ. ಇಂತಹ ಉತ್ಸಾಹಿ ಗ್ರಾಮಸ್ಥರು, ಶಿಕ್ಷಕರು ಗ್ರಾಮದಲ್ಲಿದ್ದರೆ ಸರ್ಕಾರಿ ಶಾಲೆಗಳು ಮತ್ತೆ ಚೇತನಹಾರಿಯಾಗಿ ಕಾರ್‍ಯನಿರ್ವಹಿಸುವಲ್ಲಿ ಯಾವುದೇ ಅನುಮಾನವಿಲ್ಲ.

ಟಿವಿ, ಮೊಬೈಲ್‌ಗಳಿಂದಾಗಿ ಇಂದು ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಮಕ್ಕಳು ಪುಸ್ತಕ ಹಿಡಿದು ಓದುತ್ತಿದ್ದರೆ ಅವರೊಳಗೊಂದು ಚಿತ್ರಣ ಮೂಡುತ್ತದೆ, ಒಂದು ಕಲ್ಪನಾ ಲೋಕ ನಿರ್ಮಾಣ ಮಾಡಿಕೊಳ್ಳುತ್ತಾರೆ. ಓದಿದ ಪ್ರತಿಯೊಬ್ಬರೂ ಡಾಕ್ಟರ್, ಇಂಜಿನಿಯರ್ ಪ್ರೊಫೆಸರ್, ಲಾಯರ್‌ಗಳೇ ಆದರೆ ಕವಿಗಳು, ಸಾಹಿತಿಗಳು, ಬರಹಗಾರರು ಸೃಷ್ಟಿಯಾಗುವುದಾದರೂ ಹೇಗೆ ? ಅದಕ್ಕಾಗಿ ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳು ಚಿಕ್ಕ ಚಿಕ್ಕ ಪುಸ್ತಕಗಳನ್ನು ಓದುತ್ತಾ, ಓದುವ ಅಭ್ಯಾಸ ಉಸಿರಾಟದಷ್ಟೇ ಸಹಜವಾಗಬೇಕು ಎಂದು ಈ ಶಾಲೆಯಲ್ಲಿ ದಾನಿಗಳ ಸಹಾಯದಿಂದ ಗ್ರಂಥಾಲಯ ನಿರ್ಮಾಣ ಮಾಡಲಾಯಿತು.

- ಬಸವರಾಜು. ಮುಖ್ಯೋಪಾಧ್ಯಾಯರು. ಪ್ರಾಥಮಿಕ ಶಾಲೆ ಗುಂಡೀಗೆರೆ

 ಇಂತಹದ್ದೊಂದು ಪ್ರಯೋಗವನ್ನು ಪುಟ್ಟದೊಂದು ಸರ್ಕಾರಿ ಶಾಲೆ ಮಾಡಿದೆ ಎಂದರೆ ನಮಗೆ ಹೆಮ್ಮೆಯಾಗುತ್ತದೆ. ಇಂತಹ ಅಭ್ಯಾಸ ಎಲ್ಲಾ ಶಾಲೆಗಳಲ್ಲೂ ಆಗಬೇಕಿದೆ. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಗುಂಡೀಗೆರೆ ಶಾಲೆಗೆ ಭೇಟಿ ನೀಡುತ್ತೇನೆ. ಶಿಕ್ಷಕರೆಂದರೆ ನಮಗೆ ಅತೀವವಾದ ಗೌರವವಿದೆ. ಅದರಲ್ಲೂ ತಮ್ಮ ಕರ್ತವ್ಯಕ್ಕೆ ಅರ್ಪಣೆ ಮಾಡಿಕೊಂಡು ಕೆಲಸ ನಿರ್ವಹಿಸುವ ಇಂತಹ ಶಿಕ್ಷಕರನ್ನು ಕಂಡಾಗ ಅಭಿನಂದಿಸಬೇಕು ಎನಿಸುತ್ತದೆ.

-ಎಚ್.ಸಿ.ಬಾಲಕೃಷ್ಣ., ಶಾಸಕರು, ಮಾಗಡಿ

click me!