ವಿಶ್ವದ ಅತಿ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್‌​ಫಾರಂ ಶೀಘ್ರ ಲೋಕಾರ್ಪಣೆ

By Kannadaprabha NewsFirst Published Mar 25, 2021, 8:19 AM IST
Highlights

ಹುಬ್ಬಳ್ಳಿಯಲ್ಲಿ ವಿಶ್ವದ ಅತ್ಯಂತ ಉದ್ದದ ರೈಲ್ವೆ ಪ್ಲಾಟ್‌ ಫಾರಂ  ಉದ್ಘಾಟನೆಯಾಗಲಿದೆ.   ಶೀಘ್ರದಲ್ಲೇ ಪ್ರಧಾನಿ ಮೋದಿ ಇದನ್ನು ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ.

ವರದಿ :  ಶಿವಾನಂದ ಗೊಂಬಿ

 ಹುಬ್ಬಳ್ಳಿ (ಮಾ.25):  ಇಲ್ಲಿನ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ’ದಲ್ಲಿರುವ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ನಿರ್ಮಾಣ ಕಾರ್ಯ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಇನ್ನೊಂದು ಪ್ರವೇಶದ್ವಾರದ ಕೆಲಸವೂ ಭರದಿಂದ ಸಾಗಿದೆ. ಶೀಘ್ರದಲ್ಲೇ ಪ್ರಧಾನಿ ಮೋದಿ ಇದನ್ನು ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ.

ಹೌದು, ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರಂ ಕೆಲಸ ಭರದಿಂದ ಸಾಗಿದೆ. ಎಲ್ಲವೂ ಅಂದುಕೊಂಡಂತೆ ಮಾಚ್‌ರ್‍ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಎಷ್ಟಿದೆ ಉದ್ದ?:  ಸದ್ಯ 1ನೇ ಪ್ಲಾಟ್‌​ಫಾರಂ 550 ಮೀಟರ್‌ ಉದ್ದವಿದೆ. ಇದನ್ನು ವಿಸ್ತರಿಸಿ 10 ಮೀಟರ್‌ ಅಗಲದೊಂದಿಗೆ 1505 ಮೀಟರ್‌ ವರೆಗೆ (1.5 ಕಿಮೀ) ವಿಸ್ತರಿಸಲಾಗಿದೆ. ಇದು ಜಗತ್ತಿನಲ್ಲೇ ಅತಿ ಉದ್ದದ ಪ್ಲಾಟ್‌​ಫಾರಂ ಆಗಿ ಹೊರಹೊಮ್ಮಲಿದೆ. ಈವರೆಗೂ ಈಶಾನ್ಯ ರೈಲ್ವೆ ವಲಯದ ಗೋರಖ್‌ಪುರ ನಿಲ್ದಾಣದಲ್ಲಿರುವ 1366 ಮೀಟರ್‌ (1.36 ಕಿ.ಮೀ.) ಉದ್ದದ ಪ್ಲಾಟ್‌​ಫಾರಂ ಅತಿ ಉದ್ದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಉದ್ದದ ಪ್ಲಾಟ್‌​ಫಾರಂನಲ್ಲಿ 3 ಮತ್ತು 8ನೇ ಪ್ಲಾಟ್‌​ಫಾರಂಗಳಿರಲಿವೆ. ಏಕಕಾಲಕ್ಕೆ ಎರಡು ರೈಲುಗಳು ವಿರುದ್ಧ ದಿಕ್ಕಿಗೆ ಸಂಚರಿಸಲು ಅನುಕೂಲವಾಗುವಂತೆ ಈ ಪ್ಲಾಟ್‌​ಫಾರಂ ವಿನ್ಯಾಸಗೊಳಿಸಲಾಗಿದೆ.

ನಾಮಫಲಕ ಎಡವಟ್ಟು ಮಾಡಿದ ನೈಋುತ್ಯ ರೈಲ್ವೆ

ಈ ಕಾಮಗಾರಿ ಪೂರ್ಣಗೊಂಡ ನಂತರ, ಪ್ರಸ್ತುತ ಐದು ಪ್ಲಾಟ್‌ಫಾರಂಗಳನ್ನು ಹೊಂದಿರುವ ಇಲ್ಲಿನ ರೈಲ್ವೆ ನಿಲ್ದಾಣವನ್ನು ಎಂಟು ಪ್ಲಾಟ್‌ಫಾರಂಗೆ ಮೇಲ್ದರ್ಜೆಗೇರಲಿದೆ. ಈ ಮೂಲಕ ರೈಲುಗಳ ಸಂಚಾರ ಸುಲಭಗೊಳಿಸಲಾಗುತ್ತಿದೆ.

ವಿಶ್ವದ ಅತಿ ಉದ್ದದ ಪ್ಲಾಟ್‌​ಫಾರಂ ಕೆಲಸವೆಲ್ಲ ಇದೀಗ ಮುಕ್ತಾಯದ ಹಂತಕ್ಕೆ ತಲುಪಿದೆ. ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಬಹುದು. ಮೂರನೆಯ ಪ್ರವೇಶದ್ವಾರದ ಕಾಮಗಾರಿಯೂ ಭರದಿಂದ ಸಾಗಿದೆ.

- ಅರವಿಂದ ಮಾಲಖೇಡೆ, ರೈಲ್ವೆ ವಿಭಾಗೀಯ ನಿಯಂತ್ರಣಾಧಿಕಾರಿ, ಹುಬ್ಬಳ್ಳಿ

3ನೇ ಪ್ರವೇಶ ದ್ವಾರ: ಇನ್ನು ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ 2 ಪ್ರವೇಶದ್ವಾರಗಳಿವೆ. ಒಂದು ಮುಖ್ಯಪ್ರವೇಶದ್ವಾರವಾದರೆ, ಇನ್ನೊಂದು ಗದಗ ರಸ್ತೆಯಲ್ಲಿನ ಪ್ರವೇಶ ದ್ವಾರ. ಇದೀಗ ಉದ್ದ ಪ್ಲಾಟ್‌ಫಾರಂ ನೇರವಾಗಿ ಪ್ರವೇಶಿಸುವ ಹಾಗೆ ಮಂಟೂರು ರಸ್ತೆಯಲ್ಲಿ ಮತ್ತೊಂದು ಪ್ರವೇಶ ದ್ವಾರ ಮಾಡಲಾಗುತ್ತಿದೆ. 3ನೇ ಪ್ರವೇಶದ್ವಾರದ ಕಾಮಗಾರಿಯೂ ಭರದಿಂದ ಸಾಗಿದೆ. ಅದು ಕೂಡ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಪ್ರವೇಶ ದ್ವಾರವೂ ಪೂರ್ಣಗೊಂಡರೆ 3 ಪ್ರವೇಶದ್ವಾರ ಹೊಂದಿರುವ ದೇಶದ ಕೆಲವೇ ಕೆಲ ನಿಲ್ದಾಣಗಳಲ್ಲಿ ಹುಬ್ಬಳ್ಳಿ ನಿಲ್ದಾಣವೂ ಒಂದಾಗಲಿದೆ.

ಈ ಪ್ಲಾಟ್‌​ಫಾರಂ ನಿರ್ಮಾಣ ಕಾರ್ಯವನ್ನು 2019ರ ಅಕ್ಟೋಬರ್‌ನಲ್ಲಿ .9 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿತ್ತು. ಇನ್ನು ಯಾರ್ಡ್‌ ನವೀಕರಣ, ಇನ್ನೆರಡು ಪ್ಲಾಟ್‌ಫಾರಂ ನಿರ್ಮಾಣ, 3ನೇ ಪ್ರವೇಶ ದ್ವಾರ ಎಲ್ಲ ಕೆಲಸ ಸೇರಿ . 90 ಕೋಟಿ ವೆಚ್ಚವಾಗಿದೆ. ಈ ಎಲ್ಲ ಕೆಲಸಗಳು ಇದೀಗ ಅಂತಿಮ ಹಂತಕ್ಕೆ ತಲುಪಿವೆ. ಮಾಚ್‌ರ್‍ ಅಂತ್ಯಕ್ಕೆ ಬಹುತೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಏಪ್ರಿಲ್‌ ಮೊದಲ ಅಥವಾ 2ನೇ ವಾರದಲ್ಲಿ ಮೋದಿ ಅವರು ವರ್ಚುವಲ್‌ ಮೂಲಕವೇ ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ವಲಯದ ಮೂಲಗಳು ತಿಳಿಸಿವೆ.

click me!