ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಸಿಂಗ್ ಟಿಕಾಯತ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಟೀಕಾಯತ್ ಮೇಲೆ ಪೊಲೀಸರು ದಾಖಲಿಸಿಕೊಂಡ ದೂರು ಯಾವುದು..?
ಶಿವಮೊಗ್ಗ (ಮಾ.25): ನಗರದ ಸೈನ್ಸ್‌ಮೈದಾನದಲ್ಲಿ ಮಾ.20 ರಂದು ನಡೆದ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಸಿಂಗ್ ಟಿಕಾಯತ್ ವಿರುದ್ಧ ಕೋಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಐಪಿಸಿ ಕಲಂ 153ರ ಅಡಿ ದೂರು ದಾಖಲಿಸಿದ್ದು, ಇದು ಹೋರಾಟಗಾರರನ್ನು ಕೆರಳಿಸಿದೆ. ಮಹಾಪಂಚಾಯತ್‌ನಲ್ಲಿ ರಾಕೇಶ್ ಟಿಕಾಯತ್ ಅವರು ಕೇಂದ್ರ ಸರ್ಕಾರ ಜಾರಿಗೆ ತಂದ 3 ಕೃಷಿ ಕಾಯ್ದೆ ವಿರುದ್ಧ ಮಾತನಾಡಿದ್ದರು. ರೈತರು, ಚಳವಳಿಗಾರರು ದೆಹಲಿಗೆ ಬರಬೇಕಾಗಿಲ್ಲ. ಬದಲಾಗಿ ಬೆಂಗಳೂರನ್ನೇ ದೆಹಲಿಯನ್ನಾಗಿಸಿಕೊಳ್ಳಿ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ನಾಲ್ಕೂ ದಿಕ್ಕಿನ ರಸ್ತೆಗಳನ್ನು ಬಂದ್ ಮಾಡಿ ದಿಗ್ಬಂಧನ ಹಾಕಬೇಕು. ಟ್ರ್ಯಾಕ್ಟರ್ ಅನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದು ಕರೆಕೊಟ್ಟಿದ್ದರು.
ಬೆಂಗಳೂರನ್ನೇ ದೆಹಲಿ ಮಾಡಿ, ಟ್ರ್ಯಾಕ್ಟರ್‌ಗಳನ್ನೇ ಟ್ಯಾಂಕ್‌ಗಳಾಗಿಸಿ: ಟಿಕಾಯತ್ ಕರೆ
ಈ ಮೂಲಕ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ರೀತಿಯಲ್ಲೇ ದಂಗೆ ನಡೆಸುವಂತೆ ಪ್ರೇರೇಪಿಸುವ ಮಾದರಿಯಲ್ಲಿ ಟಿಕಾಯತ್ ಭಾಷಣದಲ್ಲಿ ಪ್ರಚೋದಿಸಿದ್ದಾರೆ. ಸಾರ್ವಜನಿಕರು ಉದ್ರೇಕಗೊಂಡು ದೊಂಬಿ ನಡೆಸುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಆಕ್ರೋಶ: ಕೇಸು ದಾಖಲಿಸುತ್ತಿದ್ದಂತೆ ಪ್ರಗತಿಪರ ಮುಖಂಡರು, ಪ್ರತಿಭಟನಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾತಂತ್ರವನ್ನು ಹತ್ತಿಕ್ಕುವ ಯತ್ನ. ಟಿಕಾಯತ್ ಮೇಲೆ ದಾಖಲಿಸಿದ ಪ್ರಕರಣವನ್ನು ವಾಪಸ್ಸು ಪಡೆಯುವಂತೆ ಹೋರಾಟ ರೂಪಿಸುವುದಾಗಿ ಹೇಳಿದ್ದಾರೆ.