
ತುಮಕೂರು (ಆ.20): ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 2022ರೊಳಗೆ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ವಸತಿ ರಹಿತರಿಗೆ ನಿವೇಶನ ನೀಡಲು ಒಂದು ತಿಂಗಳೊಳಗಾಗಿ ಸರ್ಕಾರಿ ಜಮೀನು ಗುರುತಿಸಿ ಜಿಐಎಸ್ ಲೇಯರ್ ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ರೆವಿನ್ಯೂ ಇಲಾಖೆಯ ಅಧಿಕಾರಿಗಳು ಸಂಸದ ಜಿ.ಎಸ್.ಬಸವರಾಜ್ ಅವರ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿದರು.
ನಗರದ ಸಾಯಿಬಾಬಾ ಟೆಂಪಲ್‌ನ ಆಡಿಟೋರಿಯಂನಲ್ಲಿ ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆ, ದಿಶಾ ಸಮಿತಿ ಪ್ರಗತಿ ಪರೀಶಿಲನಾ ಸಭೆ ನಡೆಯಿತು.
ಬಳಿಕ ಮಾತನಾಡಿದ ಸಂಸದ ಬಸವರಾಜ್ ಅವರು, ಅಧಿಕಾರಿಗಳು ಬಡವರಿಗೆ ಸೇವೆ ಮಾಡಲೇಬೇಕು ಎಂದು ಮನಸ್ಸು ಮಾಡಿದರೆ ನಿವೇಶನ ನೀಡುವುದು ಸಮಸ್ಯೆಯೇ ಅಲ್ಲ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮವಾರು ಸರ್ಕಾರಿ ಜಮೀನು ಗುರುತಿಸಲು ಕರೆ ನೀಡಿದರು.
BSNL ಲ್ಯಾಂಡ್‌ಲೈನ್ ರಿಪೇರಿಗಾಗಿ ಪ್ರಧಾನಿ ಮೊರೆ ಹೋದ ಹಿರಿಯ ನಾಗರಿಕ!...
ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಗುಬ್ಬಿ ತಾಲೂಕು, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 18 ಗ್ರಾಮಗಳಲ್ಲಿನ ಎಲ್ಲಾ ವಿಧವಾದ ’ಸರ್ಕಾರಿ ಜಮೀನುಗಳ ಜಿಐಎಸ್ ಲೇಯರ್’ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ಮಹಾನಗರ ಪಾಲಿಕೆಯ ಸುತ್ತ 10 ಕಿಮೀ ವ್ಯಾಪ್ತಿಯ ಸರ್ಕಾರಿ ಜಮೀನು ಗುರುತಿಸಿ ಪಟ್ಟಿಮಾಡಿದ್ದು, ಬಗರ್‌ಹುಕುಂ ಯೋಜನೆಯಡಿಯಲ್ಲಿ ಜಮೀನು ಮಂಜೂರಾತಿಗೆ ರೈತರು ಅರ್ಜಿ ಸಲ್ಲಿಸಿದ್ದಾರೆ, ನಿಯಮ ಪ್ರಕಾರ ಪಾಲಿಕೆಯ ಸುತ್ತ 10 ಕಿಮೀ ವ್ಯಾಪ್ತಿಯಲ್ಲಿ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ. ಈ ಜಮೀನನ್ನು ಬಡವರಿಗೆ ನಿವೇಶನ ನೀಡಲು ಮತ್ತು ಸರ್ಕಾರಿ ಯೋಜನೆಗಳಿಗೆ ಮೀಸಲಿರಿಸುವಂತೆ ತಿಳಿಸಿದರು.
ಭಾರತದಲ್ಲಿ ಬಿಜೆಪಿ ಪರ ಫೇಸ್‌ಬುಕ್‌ನಿಂದ ಪಕ್ಷಪಾತ..?..
ತುಮಕೂರು ಉಪವಿಭಾಗಾಧಿಕಾರಿ ಅಜಯ್ ಮಾತನಾಡಿ, ಸಂಸದರ ಆದರ್ಶ ಗ್ರಾಮವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಹಾಗೂ ಪ್ರಧಾನ ಮಂತ್ರಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಅರ್ಹರಿಗೆ ನಿವೇಶನ ಹಂಚಲು, ವಸತಿರಹಿತರ ಪಟ್ಟಿಯನ್ನು ತಯಾರಿಸುವಂತೆ ಸೂಚಿಸಿದ ಅವರು, ಸೆ.5 ರಂದು ನಡೆಯಲಿರುವ ಮುಂದಿನ ಸಭೆಯ ವೇಳೆಗೆ ಅಗತ್ಯವಿರುವ ಎಲ್ಲ ಮಾಹಿತಿ ಹಾಗೂ ದಾಖಲೆಗಳನ್ನು ತರುವಂತೆ ಸೂಚಿಸಿದರು.
ಸಭೆಯಲ್ಲಿ ದಿಶಾಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ತುಮಕೂರು ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್, ಗುಬ್ಬಿ ತಹಶೀಲ್ದಾರ್ ಪ್ರದೀಪ್‌ಕುಮಾರ್ ಸೇರಿದಂತೆ ರೆವಿನ್ಯೂ ಇನ್‌ಸ್ಪೆಕ್ಟರ್, ತಾಲೂಕು ಸರ್ವೇಯರ್, ಕೇಸ್ ವರ್ಕರ್ ಮತ್ತು ಗ್ರಾಮ ಲೆಕ್ಕಿಗರು ಭಾಗವಹಿಸಿದ್ದರು.