ಕೃಷ್ಣಾ ಮೇಲ್ದಂಡೆ ಬಗ್ಗೆ ಶೀಘ್ರ ಸಭೆ: ಸಚಿವ ಡಿ.ಕೆ.ಶಿವಕುಮಾರ್‌

By Kannadaprabha News  |  First Published Jul 12, 2023, 9:16 PM IST

ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪರಿಹಾರ ವಿತರಣೆಗೆ ವಿಳಂಬವಾಗಿತ್ತು. ಇದೀಗ ಪರಿಹಾರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಡಿ.ಕೆ.ಶಿವಕುಮಾರ್‌. 


ವಿಧಾನ ಪರಿಷತ್‌(ಜು.12): ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ, ಭೂ ಪರಿಹಾರ, ಪುನರ್ವಸತಿ, ಕಾಮಗಾರಿಗಳು ಸೇರಿ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಈ ಅಧಿವೇಶನ ಮುಗಿಯುವುದರೊಳಗೆ ಸಭೆ ಕರೆಯುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಮಂಗಳವಾರ ಬಿಜೆಪಿ ಸದಸ್ಯ ಹನುಮಂತಪ್ಪ ನಿರಾಣಿ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಲ್ಲಿ 1,33,867 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಈವರೆಗೆ 27,183 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಿಂದಿನ ಸರ್ಕಾರದ ತೀರ್ಮಾನದಂತೆ ಐತೀರ್ಪಿನ ಆದೇಶದ ಅನ್ವಯ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ 20 ಲಕ್ಷ ರು. ಹಾಗೂ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 24 ಲಕ್ಷ ರು. ಪರಿಹಾರ ಧನ ನಿಗದಿಪಡಿಸಿದ್ದು, ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪರಿಹಾರ ವಿತರಣೆಗೆ ವಿಳಂಬವಾಗಿತ್ತು. ಇದೀಗ ಪರಿಹಾರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Tap to resize

Latest Videos

ಜೈನ ಮುನಿಗಳ ಹತ್ಯೆ: ಪಾರದರ್ಶಕತೆ ತನಿಖೆಗೆ ನಳಿನ್‌ ಕುಮಾರ್‌ ಕಟಿಲ್‌ ಆಗ್ರಹ

ಈ ಯೋಜನೆ ಬಗ್ಗೆ ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಈ ಯೋಜನೆಯ ಅನುಷ್ಠಾನ, ಭೂ ಪರಿಹಾರ, ಪುನರ್ವಸತಿ, ಕಾಮಗಾರಿಗಳು ಸೇರಿದಂತೆ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಈ ಅಧಿವೇಶನ ಮುಗಿಯುವುದರೊಳಗೆ ಸಭೆ ಕರೆಯುತ್ತೇನೆ. ಈ ಸಭೆಗೆ ಆ ಭಾಗದ ಎಲ್ಲ ಜನಪ್ರತಿನಿಧಿಗಳನ್ನೂ ಆಹ್ವಾನಿಸಲಾಗುವುದು. ಅಧಿಕಾರಿಗಳ ಸಮ್ಮುಖದಲ್ಲಿ ಯೋಜನೆಯ ಬಗ್ಗೆ ಚರ್ಚಿಸಲಾಗುವುದು. ಸಭೆಯಲ್ಲಿ ಜನಪ್ರತಿನಿಧಿಗಳಿಂದ ಅಗತ್ಯ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದರು.

click me!