ಭಾರೀ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ 40 ದಿನಗಳ ಹಸುಗೂಸು ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.12): ಭಾರೀ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ 40 ದಿನಗಳ ಹಸುಗೂಸು ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆಯಲ್ಲಿ ಭಾನುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರಪೇಟೆ ತಾಲ್ಲೂಕಿನ ಕುಸುಬೂರಿನ ದಂಪತಿ ತೇಜಸ್ ಮತ್ತು ರಕ್ಷಿತಾ ದಂಪತಿಯ 40 ದಿನದ ಗಂಡು ಮಗು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಮೃತಪಟ್ಟಿದೆ.
undefined
ಕುಸುಬೂರಿನ ಕಾಫಿ ಎಸ್ಟೇಟ್ ಒಂದರಲ್ಲಿ ಈ ದಂಪತಿ ಲೈನ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶನಿವಾರ ಗಾಳಿ ಮಳೆಗೆ ಬೃಹತ್ ಗಾತ್ರದ ಸಿಲ್ವರ್ ಮರ ಕುಸುಬೂರು, ಕರ್ಕಳ್ಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈ ಮರ ಬಿದ್ದ ರಭಸಕ್ಕೆ ಪಕ್ಕದಲ್ಲಿದ್ದ ಬೈನೆ ಮರ ಸೇರಿದಂತೆ ಹಲವು ಮರಗಳು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದಿವೆ. ಮರಗಳು ಮುರಿದು ಬಿದ್ದಿರುವ ವಿಷಯವನ್ನು ಶನಿವಾರವೇ ಬೇಗೂರು ಗ್ರಾಮ ಪಂಚಾಯಿತಿ ಸಿಬ್ಬಂದಿ ಗಮನಕ್ಕೆ ತರಲಾಗಿತ್ತು ಎನ್ನಲಾಗಿದೆ.
Bengaluru: ಸ್ನೇಹಿತನಿಗಾಗಿ ಆನ್ಲೈನ್ ಲೋನ್ ಪಡೆದು ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾದ
ಈ ನಡುವೆ ಭಾನುವಾರ ಸಂಜೆ ಏಳುಗಂಟೆ ವೇಳೆ ರಕ್ಷಿತಾ ಅವರು ತಮ್ಮ ಮಗುವಿಗೆ ಹಾಲುಣಿಸುವಾಗ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಕೂಡಲೇ ತೇಜಸ್ ಮತ್ತು ರಕ್ಷಿತಾ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟಿದ್ದಾರೆ. ಆದರೆ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಯಾವುದೇ ವಾಹನಗಳು ಗ್ರಾಮಕ್ಕೆ ಬರಲು ಅವಕಾಶ ಇರಲಿಲ್ಲ. ಹೀಗಾಗಿ ಈ ದಂಪತಿ ಮಗುವನ್ನು ಎತ್ತಿಕೊಂಡು ಒಂದು ಕಿಲೋ ಮೀಟರ್ ನಡೆದುಕೊಂಡೇ ಸಾಗಿದ್ದಾರೆ. ಬಳಿಕ ಮರ ಬಿದ್ದಿದ್ದ ಜಾಗಕ್ಕೆ ಬಂದು ಆಟೋ ಏರಿ ಆಸ್ಪತ್ರೆಗೆ ಹೋಗಿದ್ದಾರೆ. ಹೀಗೆ ನಡೆದುಕೊಂಡು ಬಂದು ನಂತರ ಆಸ್ಪತ್ರೆ ತಲುಪುವಷ್ಟರಲ್ಲಿ ಹಸುಗೂಸು ಉಸಿರು ಚೆಲ್ಲಿದೆ.
ಆಸ್ಪತ್ರೆಗೆ ಹೋಗಿ ಮಗುವನ್ನು ತೋರಿಸಿದಾಗ ಅರ್ಧಗಂಟೆ ಮುಂಚಿತವಾಗಿ ಮಗುವನ್ನು ಕರೆತಂದಿದ್ದರೆ ಜೀವ ಉಳಿಯುತಿತ್ತು ಎಂದು ವೈದ್ಯರು ತಿಳಿಸಿರುವುದಾಗಿ ಮೃತ ಮಗುವಿನ ತಂದೆ ತೇಜಸ್ ಹೇಳಿದ್ದಾರೆ. ಹೀಗೆ ದುರಂತ ನಡೆದ ಮೇಲೆ ಪಂಚಾಯಿತಿ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಕುಸುಬೂರಿಗೆ ಬಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ. ಮರಗಳನ್ನು ತೆರವುಗೊಳಿಸಲು ಬಂದ ಪಂಚಾಯಿತಿ ಸಿಬ್ಬಂದಿಯನ್ನು ಈ ವೇಳೆ ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
Bhimatira Rowdy Sheeter Murder: ಬಡ್ಡಿ ದಂಧೆಗೆ ಹಾಡಹಗಲೇ ಭೀಮಾತೀರದಲ್ಲಿ
ನಿಮ್ಮ ನಿರ್ಲಕ್ಷ್ಯದಿಂದಾಗಿ ಏನೂ ಅರಿಯದ ಮಗು ಪ್ರಾಣಬಿಟ್ಟಿದೆ ಎಂದು ಸಿಬ್ಬಂದಿಯ ಚಳಿ ಬಿಡಿಸಿದ್ದಾರೆ. ಆದರೆ ಪಂಚಾಯಿತಿ ಸಿಬ್ಬಂದಿ ಮರ ಬಿದ್ದಿರುವ ಮಾಹಿತಿಯೇ ನಮಗೆ ಇರಲಿಲ್ಲ. ಸೋಮವಾರ ಬೆಳಿಗ್ಗೆ ಮರ ಬಿದ್ದಿರುವ ಮಾಹಿತಿ ಸಿಕ್ಕಿದ್ದರಿಂದ ಬಂದು ತೆರವು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ಸ್ಥಳೀಯರು ಪ್ರತಿಕ್ರಿಯಿಸಿದ್ದು ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ. ರಸ್ತೆ ಸರಿಪಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡಿದ್ದೇವೆ. ಆದರೂ ಕ್ರಮಕೈಗೊಂಡಿಲ್ಲ. ಶನಿವಾರ ಮರ ಬಿದ್ದು ಸಂಪರ್ಕ ಬಂದ್ ಆಗಿರುವ ಕುರಿತು ಮಾಹಿತಿ ನೀಡಿದ್ದರೂ ಯಾರು ಬಂದು ಮರ ತೆರವು ಮಾಡಿರಲಿಲ್ಲ. ಇದೇ ಕಾರಣದಿಂದ ಮಗುವನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೆ ಮಗು ಮೃತಪಟ್ಟಿದೆ. ಒಂದು ವೇಳೆ ಶನಿವಾರವೇ ಅಥವಾ ಭಾನುವಾರ ಬೆಳಿಗ್ಗೆಯಾದರೂ ಮರಗಳನ್ನು ತೆರವು ಮಾಡಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.