'ಶೀಘ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಭಾರಿ ಬದಲಾವಣೆ : ಬಿಜೆಪಿ ಮೂಲದಿಂದ ಮಾಹಿತಿ'

By Kannadaprabha News  |  First Published Nov 17, 2021, 8:38 AM IST
  • ಗುಜರಾತ್‌ ಮಾದರಿಯಂತೆ ಕರ್ನಾಟಕದಲ್ಲಿಯೂ ಹೊಸ ರಾಜಕೀಯ ಪ್ರಯೋಗಕ್ಕೆ ಒಳಗೊಳಗೇ ವೇದಿಕೆ ಸಿದ್ಧ
  • ಜವಾಬ್ದಾರಿ ಕೊಟ್ಟು ನೋಡಲಿ, ಬರೋ ಅಸೆಂಬ್ಲಿ ಚುನಾವಣೆಯಲ್ಲಿ 130 ಬಿಜೆಪಿ ಶಾಸಕರನ್ನು ಗೆಲ್ಲಿಸಿ ತೋರಿಸುವೆ 

ಕಲಬುರಗಿ (ನ.17):  ತಮಗೆ ಪಕ್ಷ ಸಂಘಟನೆಯಲ್ಲಿ (Party Organisation) ಸಂಪೂರ್ಣ ಜವಾಬ್ದಾರಿ ಕೊಟ್ಟು ನೋಡಲಿ, ಬರೋ ಅಸೆಂಬ್ಲಿ ಚುನಾವಣೆಯಲ್ಲಿ (Election) 130 ಬಿಜೆಪಿ ಶಾಸಕರನ್ನು (BJP MLA) ಗೆಲ್ಲಿಸಿ ತೋರಿಸುವೆ ಎಂದು ಶಾಸಕ ಬಸವನಗೌಡ ಪಾಟೀಲ್‌ ಯಾತ್ನಾಳ್‌ (Basanagouda Patil Yatnal) ಹೇಳಿದರು.

ಕಲಬುರಗಿಯಲ್ಲಿ (Kalaburagi) ಸುದ್ದಿಗಾರರಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿರಿಯ ನಾಯಕರು ಸ್ವಲ್ಪ ಹಿಂದೆ ಸರಿದು 2ನೇ ಸಾಲಿನ ನಾಯಕರಿಗೆ ಅವಕಾಶ ಕೊಟ್ಟು ನೋಡಲಿ, ಯುವಕರಿಗೆ ಆದ್ಯತೆ ನೀಡಲಿ. ಅಂದಾಗ ಪಾತ್ರ ಪಕ್ಷದ ಸಂಘಟನೆಯಲ್ಲಿ ಹೊಸ ಹುರುಪು ಉತ್ಸಾಹ ಬರುತ್ತದೆ ಎಂದು ಹೇಳಿದರು.

Latest Videos

undefined

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇನ್ನು 2 ತಿಂಗಳಲ್ಲಿ ರಾಜ್ಯದಲ್ಲಿಯೂ ಪಕ್ಷ ಸಂಘಟನೆ ಹಾಗೂ ಸಂಪುಟದಲ್ಲಿ ಭಾರಿ ಬದಲಾವಣೆಗಳಾಗುತ್ತವೆ. ಯುವಕರಿಗೆ ಕ್ಯಾಬಿನೆಟ್‌ನಲ್ಲಿ (Cabinet) ಹಾಗೂ ಪಕ್ಷದ ಸಂಘಟನೆಯಲ್ಲಿ ಅವಕಾಶಗಳು, ಬಹುದೊಡ್ಡ ಜವಾಬ್ದಾರಿಗಳು ದೊರಕುವ ಸಾಧ್ಯತೆಗಳಿವೆ. ತಮಗೆ ಈ ಬೆಳವಣಿಗೆ ಬಗ್ಗೆ ಪಕ್ಕಾ ಮಾಹಿತಿ ಇದೆ. ಇಂತಹ ಚರ್ಚೆಗಳು ಅದಾಗಲೇ ವರಿಷ್ಠರ ಹಂತದಲ್ಲಿ ಸಾಗಿವೆ. ಗುಜರಾತ್‌ ಮಾದರಿಯಲ್ಲಿ ಕರ್ನಾಟಕದಲ್ಲಿಯೂ (Karnataka ) ಸಂಪುಟ ಪುನಾರ್ರಚನೆಯಾಗುವ ಸಾಧ್ಯತೆ ಇದೆ. ಅಲ್ಲಿ ಹೇಗೆ ಹಿರಿಯರನ್ನೆಲ್ಲ ಸರಿಸಿ ಆ ಸ್ಥಾನಗಳಲ್ಲಿ ಹೊಣೆಗಾರಿಕೆ ನಿಭಾಯಿಸುವ ಯುವಕರಿಗೆ ಆದ್ಯತೆ ನೀಡಿದ್ದಾರೋ ಅದೇ ಮಾದರಿಯ ಪ್ರಯೋಗ ರಾಜ್ಯದಲ್ಲೂ ಆಗುವ ಸಾಧ್ಯತೆಗಳಿವೆ ಎಂದರು.

ಜಿಲ್ಲೆಗೊಂದು ಮಂತ್ರಿಸ್ಥಾನ ನೀಡಲೇಬೇಕು ಎಂದು ಪ್ರತಿಪಾದಿಸಿದ ಅವರು ಸಂಪುಟದಲ್ಲಿ ಪ್ರಾತಿನಿಧ್ಯಬಿಟ್ಟು ಹೋದಲ್ಲಿ ಅಂತಹ ಜಿಲ್ಲೆಗಳಿಗೆ ಬರುವ ಅನ್ಯ ಜಿಲ್ಲೆ ಉಸ್ತುವಾರಿಗಳಿಂದ ಏನೂ ಪ್ರಯೋಜನವಾಗದು. ಅವರು ಸ್ಥಳೀಯ ಜನರ ಆಶೋತ್ತರಗಳಿಗೆ ಸ್ಪಂದಿಸೋದಿಲ್ಲ. ಸ್ಪಂದಿಸಲು ಸಾಧ್ಯವೂ ಇಲ್ಲ. ಆಡಳಿತದಲ್ಲಿ ಬಿಗಿ ಬರಬೇಕಾದಲ್ಲಿ, ಜನಪರ ಆಡಳಿತ ನಡೆಯಬೇಕಾದಲ್ಲಿ ಎಲ್ಲಾ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲೇಬೇಕು. ಅಂದಾಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವೆಂದರು.

ಬಿಟ್ಕಾಯಿನ್‌-ಬಿಟ್ಟಿ ಕಾಯಿನ್‌ : ಬಿಟ್ಟ ಕಾಯಿನ್‌ (Bit Coin) ಬಗ್ಗೆ ಕಾಂಗ್ರೆಸ್ಸಿಗ ಪ್ರಿಯಾಂಕ್‌ ಖರ್ಗೆ ತುಂಬಾ ಫಾಸ್ಟ್‌ ಆಗಿದ್ದಾರೆ ಎಂದು ಲೇವಡಿ ಮಾಡಿದ ಯಾತ್ನಾಳ್‌, ಈ ವಿಚಾರಲ್ಲಿ ಬಿಜೆಪಿ ಹಸ್ತಕ್ಷೇಪ ಇಲ್ಲವೇ ಇಲ್ಲ. ಪ್ರಧಾನಿ ಮೋದಿ ಹೇಳಿದಂತೆ ನಾವು ಯಾರಿಗೂ ತಿನ್ನಲು ಬಿಡೋದಿಲ್ಲ, ನಾವು ತಿನ್ನೋದಿಲ್ಲ ಎನ್ನುತ್ತ ಕಾಂಗ್ರೆಸ್‌ನವರು ಆರೋಪ ಮಾಡ್ತಾರೆ. ಅದಕ್ಕೆ ಪೂರಕ ಸಾಕ್ಷಿ ಕೊಡೋದಿಲ್ಲ. ವಿನಾಕಾರಣ ದಾರಿ ತಪ್ಪಿಸುವ ಕೆಲಸವಲ್ಲವೆ? ಎಂದು ಪ್ರಶ್ನೆಸಿದರು.

ನನ್ನ ಬಳಿ ಬಿಟ್ಕಾಯಿನ್‌ ಇಲ್ಲವೇ ಇಲ್ಲ, ಬಿಟ್ಟಿ ಕಾಯಿನ್‌ ಕೂಡಾ ಇಲ್ಲ. ಅದೇನಿದ್ದರೂ ದುಡಿದು ಗಳಿಸಿದ್ದೇ ಕಾಯಿನ್‌ ಎಂದು ಹೇಳುತ್ತ ತಾವು ಅಧ್ಯಕ್ಷರಾಗಿರುವ ಬ್ಯಾಂಕಿನ ಮಾಹಿತಿ ನೀಡುತ್ತ ಜನಪರ ಬ್ಯಾಂಕಿಂಗ್‌ ಬಗ್ಗೆ ತಿಳಿಸಿದರು.

ಮಂತ್ರಿಗಳಾಗುವವರಿಗೆ ಜನರ ಸೇವೆ ಮಾಡುವ ಮನಸ್ಸಿರಬೇಕು, ಪ್ರಾಮಾಣಿಕನಾಗಿ ಜನಪರವಾಗಿರುವ ಆಸಕ್ತಿ ಇರಬೇಕು. ಅಂತವರು ಮಂತ್ರಿಯಾದಲ್ಲಿ 5 ವರ್ಷ ಬೇಕೆಂದಿಲ್ಲ, 1 ವರ್ಷದಲ್ಲೇ ತಾನು ವಹಿಸಿಕೊಳ್ಳುವ ಇಲಾಖೆಯಲ್ಲಿ ಬದಲಾವಣೆ ತರಬಹುದು. ಬರುವ ದಿನಗಳಲ್ಲಿ ತಾವು ಮಂತ್ರಿಗಿರಿ ಕನಸು ಹೊತ್ತವರೇ ಆಗಿದ್ದಾಗಿ ಸೂಚ್ಯವಾಗಿ ಹೇಳುತ್ತ ಬದಲಾವಣೆ ನಿರೀಕ್ಷೆಯಲ್ಲಿದ್ದೇವೆ ಎಂದರು.

ಬಿಟ್‌ ಕಾಯಿನ್‌ ಹಗರಣದಲ್ಲೇ ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಾರೆ, 3ನೇ ಮುಖ್ಯಮಂತ್ರಿಯನ್ನು ರಾಜ್ಯ ಕಾಣಲಿದೆ ಎಂಬ ಕಾಂಗ್ರೆಸ್ಸಿಗರ ಆರೋಪಗಳನ್ನು ತಳ್ಳಿ ಹಾಕಿದ ಅವರು, ಅಂತಹದ್ದೇನು ಆಗಲ್ಲ. ಆರೋಪ ಮಾಡಿದರೆ ಅಲ್ಲ, ಅದಕ್ಕೆ ಪೂರಕ ಸಾಕ್ಷ್ಯ ಕೊಟ್ಟು ಮಾತನಾಡಲಿ. ಸುಳ್ಳು ಆರೋಪಗಳಿಗೆ ಯಾರೂ ಬೆಲೆ ಕೊಡೋದಿಲ್ಲವೆಂದು ಕಾಂಗ್ರೆಸ್‌ ಆರೋಪಗಳನ್ನು ತಳ್ಳಿ ಹಾಕಿದರು.

click me!